More

    ಮೊಳಕಾಲ್ಮೂರು ರೈತರಿಗೆ ಆಸರೆಯಾದ ಟೊಮ್ಯಾಟೊ, ಬದನೆ

    ಮೊಳಕಾಲ್ಮೂರು: ತಾಲೂಕಿ ರೈತರಿಗೆ ಈ ಬಾರಿ ಟೊಮ್ಯಾಟೊ, ಬದನೆ ಬೆಳೆ ಆಸರೆಯಾಗಿದೆ. ಅತಿವೃಷ್ಟಿ ನಡುವೆಯೂ ತಾಲೂಕಿನ ನೂರಾರು ರೈತರು ಟೊಮ್ಯಾಟೊ ಹಾಗೂ ಬದನೆ ಬೆಳೆಯಲ್ಲಿ ಉತ್ತಮ ಇಳುವರಿ ಕಂಡಿದ್ದು ಉತ್ತಮ ಆದಾಯ ಗಳಿಸಿದ್ದಾರೆ.

    ಮುಂಗಾರು ವೇಳೆ ಸುರಿದ ಭಾರಿ ಮಳೆ ರೈತರನ್ನು ಕಂಗೆಡಿಸಿದೆ. ಇದರ ನಡುವೆ ಕಳೆದ ಎರಡು ತಿಂಗಳಿಂದ ಟೊಮ್ಯಾಟೋ 20 ಕೆಜಿ ಬಾಕ್ಸಿಗೆ 500 ರಿಂದ 600 ರೂ. ಹಾಗೂ 15-18 ಕೆಜಿ ಬಾಕ್ಸ್ ಬದನೆಗೆ 1,100 ರೂ. ಬೆಲೆ ಸಿಕ್ಕಿದೆ.

    ತಾಲೂಕಿನ 100 ಕ್ಕೂ ಹೆಚ್ಚು ರೈತರು 80 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಹಾಗೂ 50 ಹೆಕ್ಟೇರ್ ಪ್ರದೇಶದಲ್ಲಿ ಬದನೆ ನಾಟಿ ಮಾಡಿದ್ದಾರೆ. ಚನ್ನಾಗಿ ಆರೈಕೆ ಮಾಡಿದ್ದರಿಂದ 80 ದಿನಕ್ಕೆ ಫಸಲು ಕಟಾವಿಗೆ ಬಂದಿದೆ. 2 ರಿಂದ 3 ದಿನಕ್ಕೊಮ್ಮೆ ಎಕರೆಗೆ 100 ಬಾಕ್ಸ್ ಟೊಮ್ಯಾಟೋ ಹಣ್ಣು, ಸುಮಾರು 60 ಚೀಲ ಬದನೆಕಾಯಿ ಕಟಾವು ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ.

    ಬೆಳೆ ಯಾವುದೇ ಇರಲಿ ಉತ್ತಮವಾಗಿ ಪೋಷಣೆ ಮಾಡುವುದು ಮುಖ್ಯ. ಮಣ್ಣಿನ ಗುಣ ಹಾಗೂ ಸೀಸನ್‌ಗೆ ತಕ್ಕಂತೆ ನಾಟಿ ಮಾಡುವುದು ಉತ್ತಮ. ಎರಡು ಎಕರೆಯಲ್ಲಿ ಟೊಮ್ಯಾಟೋ ನಾಟಿ ಮಾಡಲಾಗಿತ್ತು. ಉತ್ತಮ ಇಳುವರಿ ಬಂದಿದೆ. ಖರ್ಚು ತೆಗೆದು ನಾಲ್ಕೈದು ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಹಿರೇಕೆರೆಹಳ್ಳಿ ರೈತ ಎಚ್.ಎ.ಮಾರಣ್ಣ ತಿಳಿಸಿದ್ದಾರೆ.

    ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ವೈಜ್ಞಾನಿಕ ಬೆಲೆ ನಿಗದಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
    |ಬೆಳಗಲ್ ಈಶ್ವರಯ್ಯಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ

    ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಮಿಶ್ರ ಬೆಳೆ ಪದ್ಧತಿ ಅನುಸರಿಸುವುದು ಉತ್ತಮ. ಈ ವರ್ಷದ ಉತ್ತಮ ಮಳೆಯಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿದ್ದು ಮಾವು, ಸಪೋಟ, ನಿಂಬೆ, ದಾಳಿಂಬೆ, ನುಗ್ಗೆ ದೀರ್ಘಾವಧಿ ತೋಟಗಾರಿಕೆ ಮಾಡಲು ಮುಂದಾಗುವಂತೆ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ.
    | ಪಿ.ಲೋಕೇಶ್, ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts