More

    ಬಯಲುಸೀಮೆಯ ಅಳಿದುಳಿದ ಕೆರೆಗಳಲ್ಲಿ ಅಸ್ತಿತ್ವಕ್ಕೆ ತಡಕಾಡುವ ಗಂಗೆ!

    ಕೆ.ಕೆಂಚಪ್ಪ ಮೊಳಕಾಲ್ಮೂರು
    ಸಮೃದ್ಧ ಮಳೆಯಿಂದ ನಾಡಿನ ಮೂಲೆ, ಮೂಲೆಗಳಲ್ಲಿನ ಜಲಮೂಲಗಳು ತುಂಬಿ ತುಳುಕುತ್ತಿವೆ. ಇತ್ತ ತಾಲೂಕಿನ ಕೆರೆ, ಕಟ್ಟೆಗಳಿಗೆ ನೀರು ಹರಿದು ಬಂದಿದೆಯಾದರೂ ಹೆಚ್ಚು ಕಾಲ ನಿಲ್ಲುವ ಭರವಸೆ ಮಾಯವಾಗಿದೆ.

    ಅತಿಯಾದ ಹೂಳು, ಜಾಲಿ ಗಿಡಗಳು, ಒತ್ತುವರಿ ಸೇರಿ ಹಲವು ಸಮಸ್ಯೆಗಳಿಂದ ನಲುಗುತ್ತಿರುವ ಅನೇಕ ಕೆರೆ-ಕಟ್ಟೆಗಳಲ್ಲಿ ಗಂಗೆ ತನ್ನ ಅಸ್ತಿತ್ವ ಕಾಪಾಡಿಕೊಳ್ಳುವುದೇ ಹರಸಾಹಸವಾಗಿದೆ. ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿ 14 ಕೆರೆಗಳಿದ್ದು, ಈ ಪೈಕಿ ಪಕ್ಕುರ್ತಿ, ನಾಗಸಮುದ್ರ, ಅಶೋಕ ಸಿದ್ದಾಪುರ, ದೇವಸಮುದ್ರ  ಕೆರೆಗಳು ಈಚೆಗೆ ಸುರಿದ ಮಳೆಗೆ ತುಂಬಿವೆ. ಈ ಹಿಂದೆ ಒಂದು ಬಾರಿ ತುಂಬಿದ ಜಲಮೂಲಗಳು ಹತ್ತಾರು ವರ್ಷಗಳ ಕಾಲ ಸುತ್ತಮುತ್ತಲ ರೈತರು, ಜಾನುವಾರುಗಳು, ಜೀವ ಸಂಕುಲಕ್ಕೆ ಆಧಾರವಾಗುತ್ತಿದ್ದವು.

    ಆದರೆ, ಈಗ ಹೂಳು ತುಂಬಿಕೊಂಡ ಕೆರೆಗಳ ಮುಕ್ಕಾಲು ಭಾಗ ಜಂಗಲ್ ಬೆಳೆದಿದ್ದು, ಅಲ್ಪ ಪ್ರಮಾಣದ ನೀರು ನಿಲ್ಲುವುದಕ್ಕೆ ಸೀಮಿತವಾಗಿವೆ. ಸದ್ಯ ತಾಲೂಕಿನ ಕೆಲ ಕೆರೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡು ಆವಾಸನದ ಅಂಚಿನಲ್ಲಿವೆ. ಬೇಸಿಗೆ ವೇಳೆಗೆ ನೀರು ತಳಮಟ್ಟಕ್ಕೆ ಸರಿಯುತ್ತದೆ.

    ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬಿಡುಗಡೆಯಾಗುವ ಅನುದಾನ ಪಾರದರ್ಶಕವಾಗಿ ಬಳಕೆಯಾಗುತ್ತಿಲ್ಲ. ಜಿಪಂ ಇಂಜಿನಿಯರಿಂಗ್ ವ್ಯಾಪ್ತಿಗೆ ಒಳಪಟ್ಟಿರುವ 7 ಕೆರೆಗಳು ಇದೇ ಸಮಸ್ಯೆ ಅನುಭವಿಸುತ್ತಿವೆ ಎಂದು ರೈತರು ದೂರಿದ್ದಾರೆ.

    ಕರಗಿದ ಭತ್ತದ ಕಣಜ ಹೆಸರು

    ಹಿಂದೆ ಕೆರೆಗಳು ತುಂಬಿ ಹರಿಯುತ್ತಿದ್ದಾಗ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ಉದಾಹರಣೆ ಕೂಡ ಇವೆ. ರೈತರು ಹತ್ತಿ, ಮೆಕ್ಕೆಜೋಳ ಇತ್ಯಾದಿ ಬೆಳೆ ತೆಗೆದು ಕೈತುಂಬ ಆದಾಯ ನೋಡುತ್ತಿದ್ದರು. ದನಕರುಗಳಿಗೂ ಮೇವಿನ ಕೊರತೆ ಆಗುತ್ತಿರಲಿಲ್ಲ. ನಾಗಸಮುದ್ರ, ಅಶೋಕ ಸಿದ್ದಾಪುರ, ರಂಗಯ್ಯನದುರ್ಗ ಜಲಾಶಯದ ಹಿಂಭಾಗದಲ್ಲಿ ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಭತ್ತದ ಕಣಜ ಎಂದೇ ಹೆಸರಿತ್ತು. ಕಳೆದ 15 ವರ್ಷಗಳಿಂದ ಭೀಕರ ಬರ ಆವರಿಸಿ, ಕೆರೆಗಳಿಗೆ ಕಾಯಕಲ್ಪವಿಲ್ಲದೆ ಅಚ್ಚುಕಟ್ಟು ಪ್ರದೇಶ ಉಪಯೋಗಕ್ಕೆ ಬಾರದಂತಾಗಿದೆ.

    ಕೆರೆಗಳ ಅಭಿವೃದ್ಧಿಗೆಂದು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ರಂಗಯ್ಯನದುರ್ಗ ಜಲಾಶಯದ ಎಡ ಮತ್ತು ಬಲದಂಡೆ ನಾಲೆ ದುರಸ್ತಿಗೆ 10 ಕೋಟಿ ರೂ. ಹಾಗೂ ದೇವಸಮುದ್ರ ಕೆರೆ ಪುನಶ್ಚೇತನಕ್ಕೆ 4 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ.
    | ಎಚ್.ಜೆ.ಅಣ್ಣಪ್ಪ ಎಇಇ, ಸಣ್ಣ ನೀರಾವರಿ ಇಲಾಖೆ, ಚಿತ್ರದುರ್ಗ

    ಮಳೆಯ ಅಭಾವದಿಂದ ಬಯಲುಸೀಮೆ ಕೆರೆಗಳು ತುಂಬುವುದು ತೀರಾ ಅಪರೂಪ. ಆದರೆ, ಈ ವರ್ಷ ಭರ್ಜರಿ ಮಳೆಯಿಂದ ಕೆಲವು ಕೆರೆಗಳು ತುಂಬಿದ್ದು, ಮತ್ತೆ ಕೆಲವು ಅರ್ಧ ತುಂಬಿವೆ. ಕೆರೆ-ಕಟ್ಟೆಗಳ ಅಭಿವೃದ್ಧಿಗೆ ಕಾಲಕಾಲಕ್ಕೆ ಕ್ರಮ ಕೈಗೊಂಡರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ತಾಲೂಕಿನ ಕೆರೆಗಳ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
    | ಬಟ್ರಹಳ್ಳಿ ಐಯ್ಯಣ್ಣ ಉಪಾಧ್ಯಕ್ಷ, ಜಿಲ್ಲಾ ಕೆರೆ ನೀರು ಬಳಕೆದಾರರ ಸಂಘ

    ಪೂರ್ವಜರು ಕಟ್ಟಿಸಿರುವ ಕೆರೆಗಳು ಆವಾಸನದ ಅಂಚಿನಲ್ಲಿವೆ. ಅವುಗಳ ಅಭಿವೃದ್ಧಿ ಕುರಿತು ಸಂಬಂಧಿತ ಇಲಾಖೆಗಳು ಮೈಮರೆತಿವೆ. ಏರಿ, ತೂಬು ಮತ್ತು ಕಾಲುವೆಗಳು ದುರಸ್ತಿ ಕಾಣದೆ ಮಳೆಗಾಲದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಕೃಷಿ ಹೊಂಡ ಅಥವಾ ಚೆಕ್‌ಡ್ಯಾಂ ಕಟ್ಟುವ ಜತೆಗೆ ಇರುವ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ಆದ್ಯತೆ ನೀಡಬೇಕು.
    ಆರ್.ಎಂ.ಅಶೋಕ್ ವಕೀಲರು

    ರಂಗಯ್ಯನದುರ್ಗಕ್ಕೆ ಅಡ್ಡಿ

    ರಂಗಯ್ಯನದುರ್ಗ ಜಲಾಶಯ ಅರ್ಧ ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಮೊಳಕಾಲ್ಮೂರಿನ ಕುಡಿವ ನೀರಿಗೆ ಆಧಾರವಾಗಿದೆ. ಸಾವಿರಾರು ಎಕರೆ ಅಚ್ಚುಕಟ್ಟು ಪ್ರದೇಶವಿರುವ ಜಲಾಶಯಕ್ಕೆ ಈ ವರ್ಷ ಹೆಚ್ಚು ನೀರು ಹರಿದು ಬಂದಿಲ್ಲ. ಡ್ಯಾಂನ ಮೇಲ್ಭಾಗದಲ್ಲಿರುವ ಚಿನ್ನಹಗರಿ ಹಳ್ಳದ ಉದ್ದಕ್ಕೂ ಅಲ್ಲಲ್ಲಿ ತಡೆಗೋಡೆ ಕಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ. ಪರ್ಯಾಯ ವ್ಯವಸ್ಥೆ ಅಥವಾ ಭದ್ರಾ ಮೇಲ್ದಂಡೆ ಯೋಜನೆಯಡಿ ಜಲಾಶಯಕ್ಕೆ ನೀರು ಹರಿಸಬೇಕು ಎಂಬ ಕೂಗು ಎದ್ದಿದೆ.

     

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts