More

    ನಮ್ಮೂರನ್ನು ಮರೆಯದಿರಿ ಸಂಸದರೇ

    ಕೆ.ಕೆಂಚಪ್ಪ ಮೊಳಕಾಲ್ಮೂರು: ನಮ್ಮೂರನ್ನು ಮರೆಯದಿರಿ ಸಂಸದರೇ, ರಾಜ್ಯದಲ್ಲಿ ಅತ್ಯಂತ ಬರಗಾಲದಿಂದ ತತ್ತರಿಸಿದ ಕ್ಷೇತ್ರ ಮೊಳಕಾಲ್ಮೂರು. ಆದರೆ, ಇಂತಹ ಹಿಂದುಳಿದ ತಾಲೂಕನ್ನೇ ತಾವು ನಿರ್ಲಕ್ಷೃ ಮಾಡಿದರೆ ಹೇಗೆ…

    ಇಂತಹದ್ದೊಂದು ಪ್ರಶ್ನೇಯನ್ನು ಮೊಳಕಾಲ್ಮೂರು ತಾಲೂಕಿನ ಜನತೆ ನಿತ್ಯ ಪ್ರಶ್ನೀಸುತ್ತಿದ್ದಾರೆ. ಅದರಲ್ಲೂ ಸಂಸದ ಎ.ನಾರಾಯಣಸ್ವಾಮಿ ಚುನಾವಣೆ ವೇಳೆ ಪ್ರಚಾರದಲ್ಲಿ ಕಾಣಿಸಿಕೊಂಡ ಬಳಿಕ ತಾಲೂಕಿನತ್ತ ಮುಖವೇ ಮಾಡಿಲ್ಲ ಎಂಬ ಆರೋಪ ಮೊಳಕಾಲ್ಮೂರಲ್ಲಿ ದಟ್ಟವಾಗಿದೆ.

    ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಜನರಿಗಾಗಿ ಚಿತ್ರದುರ್ಗ, ಚಳ್ಳಕೆರೆಯಲ್ಲಿ ದಾಸೋಹ ಕೇಂದ್ರ ತೆರೆದಿರುವ ಎ.ನಾರಾಯಣಸ್ವಾಮಿ, ಹಿಂದುಳಿದ ತಾಲೂಕು ಮೊಳಕಾಲ್ಮೂರನ್ನು ಮರೆತಿದ್ದೇಕೆ ಎಂದು ಜನತೆ ಪ್ರಶ್ನೀಸುತ್ತಿದ್ದಾರೆ.

    ಸಂಸದರು ಎಲ್ಲಿದ್ದರು ಕೂಡಲೇ ಮೊಳಕಾಲ್ಮೂರಿಗೆ ಬರಬೇಕು. ಇದು ತಾಲೂಕಿನಲ್ಲಿ ನಿತ್ಯ ಪ್ರತಿಧ್ವನಿಸುತ್ತಿರುವ ಜನರ ಕೂಗು ಆಗಿದೆ.

    ಜಿಲ್ಲೆಯ ವಿವಿಧ ತಾಲೂಕು, ಕ್ಷೇತ್ರಗಳಲ್ಲಿ ಬಡವರಿಗೆ ಆಹಾರದ ಕಿಟ್ ವಿತರಣೆ, ಅನ್ನದಾಸೋಹ ಕಾರ್ಯ ಸಂಸದರು ಕೈಗೊಂಡಿರುವುದು ಉತ್ತಮ ಕಾರ್ಯ. ಆದರೆ, ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಜೀವಿಸುತ್ತಿರುವ ಮೊಳಕಾಲ್ಮೂರು ಕ್ಷೇತ್ರದ ಜನರ ಮೇಲೇಕೆ ಪ್ರೀತಿ ತೋರುತ್ತಿಲ್ಲ ಎಂಬುದು ಜನರ ಪ್ರಶ್ನೇ.

    ಗೆದ್ದ ಮೇಲೆ ಸೌಜನ್ಯಕ್ಕಾದರೂ ಕ್ಷೇತ್ರ ಪ್ರವಾಸ ಮಾಡಿಲ್ಲ. ಜನರ, ಕಷ್ಟಕಾರ್ಪಣ್ಯಗಳ ಬಗೆಹರಿಸುವ ಕಾಳಜಿ ತೋರಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತ ಪ್ರಚಾರಕ್ಕಾಗಿ ಒಂದು ದಿನ ಬಂದು ಹೋದವರು ಇತ್ತ ಕಡೆ ತಿರುಗಿಯೂ ನೋಡಿಲ್ಲ ಎಂಬುದು ಜನರ ಆರೋಪ, ಆಕ್ರೋಶ.

    ಜಿಲ್ಲಾ ಸಚಿವರ ಸ್ವಕ್ಷೇತ್ರವೆಂದು ನಿರ್ಲಕ್ಷೃ ಸಲ್ಲ: ಲಾಕ್‌ಡೌನ್ ಸಂಕಷ್ಟ ಹೇಳತೀರದಾಗಿದೆ. ರೈತರು, ಕಾರ್ಮಿಕರು, ನಿರ್ಗತಿಕರ ಕುಟುಂಬಗಳು ಸಮಸ್ಯೆ ಅನುಭವಿಸುತ್ತಿವೆ. ಸಂಸದರು ಜನಸೇವೆಯಲ್ಲಿ ಮುಂದು ಎಂಬ ಮಾತು ಕೇಳಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಕ್ಷೇತ್ರ ಮೊಳಕಾಲ್ಮೂರು ಸಂತೃಪ್ತಿಯಾಗಿದೆ ಎಂದು ನಾರಾಯಣಸ್ವಾಮಿ ಭಾವಿಸಿರುವಂತಿದೆ. ಇದು ತಪ್ಪು. ಕೂಡಲೇ ಕ್ಷೇತ್ರಕ್ಕೆ ಸಂಸದರು ಆಗಮಿಸಿ, ಖುದ್ದು ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸಬೇಕು ಎಂದು ರೈತ ಮುಖಂಡರಾದ ಬೆಳಗಲ್ ಈಶ್ವರಯ್ಯಸ್ವಾಮಿ, ಕೆ.ಜಗಲೂರಯ್ಯ. ವೈ.ಡಿ.ಬಸವರಾಜ್ ಇತರರು ಒತ್ತಾಯಿಸಿದ್ದಾರೆ.

    ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ ಹೇಳಿಕೆ: ತಾಲೂಕಿನ ಜನ ಹಿತಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಸಂಸದರು ಯಾವತ್ತು ಮರೆತಿಲ್ಲ. ಇಲ್ಲಿನ ಕರೊನಾ ವಾರಿಯರ್ಸ್‌ ಸೇರಿ ಇತರರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸುವಂತೆ ನಮಗೆ ಹಸ್ತಾಂತರಿಸಿದ್ದಾರೆ. ಸಂಸದರು ಕ್ಷೇತ್ರ ಪ್ರವಾಸ ಮಾಡಬೇಕೆಂಬುದು ಕಾರ್ಯಕರ್ತರ ಕೂಗು ಆಗಿದೆ. ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವರಿಕೆ ಮಾಡಲಾಗುವುದು.

    ಸಂಸದ ಎ.ನಾರಾಯಣಸ್ವಾಮಿ ಹೇಳಿಕೆ: ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯದ ಮಾತಿಲ್ಲ. ಹಿಂದುಳಿದ ಮೊಳಕಾಲ್ಮೂರಿನ ತಾಲೂಕಿನ ಜನ ಹಿತವೇ ನನ್ನ ಗುರಿ. ಕ್ಷೇತ್ರಕ್ಕೆ ಬಂದಿಲ್ಲ ಎಂದು ಬೇಸರ ಮಾಡಿಕೊಳ್ಳಬಾರದು. ಅಲ್ಲಿನ ಪಕ್ಷದ ರೂವಾರಿಗಳು ಅನ್ನದಾಸೋಹ ನಡೆಸಲು ಒಪ್ಪಿದರೆ ನಾಳೆಯೇ 25 ಕೆಜಿ ತೂಕದ 125 ಅಕ್ಕಿ ಮೂಟೆ, 250 ಕೆಜಿ ಎಣ್ಣೆ, 250 ಕೆಜಿ ಬೇಳೆ ಇತ್ಯಾದಿ ಪದಾರ್ಥ ಕಳುಹಿಸುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts