More

  ಕಾನೂನು ಉಲ್ಲಂಘನೆ ನೇಣು ಕುಣಿಕೆಗೆ ದಾರಿ

  ಮೊಳಕಾಲ್ಮೂರು: ಕಾಲೇಜುಗಳಲ್ಲಿ ರ‌್ಯಾಗಿಂಗ್ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವುದು ಅಕ್ಷಮ್ಯ ಅಪರಾಧ ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ತಿಳಿಸಿದರು.

  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಸ್ಕೋ ಕಾಯ್ದೆ ಮತ್ತು ರ‌್ಯಾಗಿಂಗ್ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನು ಉಲ್ಲಂಘಟನೆ ನೇಣು ಕುಣಿಕೆಗೆ ಕರೆದೊಯ್ಯುತ್ತದೆ ಎಂದು ಎಚ್ಚರಿಸಿದರು.

  ಕಾಲೇಜಿನಲ್ಲಿ ಹುಡುಗಿಯರಿಗೆ ಲೈಂಗಿಕ ಕಿರುಕುಳ, ಬೆದರಿಕೆ, ದೌರ್ಜನ್ಯ ನೀಡುವುದು ಹಾಗೂ ರ‌್ಯಾಗಿಂಗ್ ಮಾಡುವುದು ಅಪರಾಧ. ಇಂತಹ ಕೃತ್ಯ ಎಸಗಿದರೆ ಸಂಬಂಧಿಸಿದವರ ನಡತೆ ಸರಿ ಇಲ್ಲವೆಂದು ಕೇಸ್ ದಾಖಲಿಸಿ ಅವರನ್ನು ಕಾಲೇಜಿನಿಂದ ಹೊರಗಟ್ಟುವ ಜತೆಗೆ 25 ಸಾವಿರ ರೂ. ದಂಡ ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

  ಲೈಂಗಿಕ ಕಿರುಕುಳ, ಅತ್ಯಾಚಾರ, ಪ್ರೀತಿ-ಪ್ರೇಮದ ಹೆಸರಿನಲ್ಲಿ ಮೋಸ ಇತ್ಯಾದಿ ಕೃತ್ಯ ಎಸಗಿದರೆ ಪೋಸ್ಕೋ ಕಾಯ್ದೆಯಡಿ ಕೇಸ್ ದಾಖಲಿಸಿ ಕಠಿಣ ಕಾರಾಗೃಹ ಶಿಕ್ಷೆ ಅಥವಾ ಮರಣದಂಡನೆಗೆ ಗುರಿಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  ವಕೀಲರ ಸಂಘದ ತಾಲೂಕು ಅಧ್ಯಕ್ಷ ಪಿ.ಪಾಪಯ್ಯ ಮಾತನಾಡಿ, ನಮ್ಮದು ವಿವಿಧತೆಯಲ್ಲಿ ಏಕತೆ ಸಾರಿದ ದೇಶ. ಇಲ್ಲಿ ಹೀಗೆಯೇ ಬದುಕಿದರೆ ನೆಮ್ಮದಿ ಇರುತ್ತದೆ. ಸಂವಿಧಾನ, ಕಾನೂನಿನ ವಿರುದ್ಧ ನಡೆದರೆ ಬದುಕು ನರಕವಾಗುತ್ತದೆ ಎಂದು ತಿಳಿಸಿದರು.

  ವಕೀಲೆ ಎಂ.ಎನ್.ವಿಜಯಲಕ್ಷ್ಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸನ್ನಡತೆ ಅತ್ಯಗತ್ಯ. ಇದನ್ನು ಯಾರು ಪಾಲಿಸುತ್ತಾರೋ ಅವರ ಭವಿಷ್ಯ ಉತ್ತಮವಾಗಿರುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಸರಿ ತಪ್ಪಿನ ಬಗ್ಗೆ ಯೋಚಿಸಿ ಮುಂದುವರಿಯಬೇಕು. ಒಂದು ವೇಳೆ ತಪ್ಪೆಸಗಿದರೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಿಕ್ಕೆ ಆಗುವುದಿಲ್ಲ ಎಂದರು.

  ಪ್ರಾಂಶುಪಾಲ ಡಿ.ಸೂರಯ್ಯ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಜಿ.ಮಂಜುನಾಥ, ವಕೀಲರಾದ ಅನಂತಮೂರ್ತಿ, ಕೆ.ಎಂ.ರಾಮಾಂಜನಿ, ಚಂದ್ರಶೇಖರ್, ಉಪನ್ಯಾಸಕರಾದ ಟಿ.ತಿಮ್ಮಣ್ಣ, ಲಲಿತಾ, ಟಿ.ಸುಷ್ಮಾ, ಬಿ.ರಾಮಸ್ವಾಮಿ, ಸಿ.ತಿಪ್ಪೇರುದ್ರಪ್ಪ, ರಾಘವೇಂದ್ರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts