More

    ಮಾರುಕಟ್ಟೆ ಇಲ್ಲದೆ ಸೊರಗಿದ ಮೊಳಕಾಲ್ಮೂರು ರೈತರು

    ಮೊಳಕಾಲ್ಮೂರು: ಆಂಧ್ರ-ಕರ್ನಾಟಕ ಗಡಿ ಭಾಗದ ಮೊಳಕಾಲ್ಮೂರು ಮೈಸೂರು ಸಂಸ್ಥಾನದ ಆಡಳಿತಾವಧಿಯಲ್ಲೇ ಬಹು ಗ್ರಾಮವಾಗಿ ಬೆಳೆದು 1891ರಲ್ಲಿ ತಾಲೂಕು ಕೇಂದ್ರವಾಗಿ ರಚನೆಯಾದರೂ ಪಟ್ಟಣದಲ್ಲೊಂದು ಕೃಷಿ ಉತ್ಪನ್ನ ಮಾರುಕಟ್ಟೆ, ಕುರಿ ಸಂತೆ ವ್ಯವಸ್ಥೆ ಇಲ್ಲದೆ ರೈತಾಪಿ ವರ್ಗ ಪರಡಾಡುತ್ತಿದೆ.

    150ಕ್ಕೂ ಅಧಿಕ ಹಳ್ಳಿಗಳನ್ನೊಂಗೊಂಡ ತಾಲೂಕಿನಲ್ಲಿ 35 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. 50 ಸಾವಿರಕ್ಕೂ ಅಧಿಕ ಜಾನುವಾರು, ಕುರಿ ಮೇಕೆಗಳಿವೆ. ಬಹುತೇಕ ಕುಟುಂಬಗಳಿಗೆ ಇವುಗಳ ಸಾಕಣೆ ಜೀವನಾಧಾ ರ ಆಗಿದೆ.

    ರೈತರು ಬೆಳೆದ ಆಹಾರ ಪದಾರ್ಥಗಳ ಮಾರಾಟಕ್ಕೆ ದೂರದ ಬಳ್ಳಾರಿ, ಚಳ್ಳಕೆರೆಗೆ, ಕುರಿ ಮೇಕೆಗಳ ಮಾರಾಟಕ್ಕೆ ರಾಂಪುರ,ಚಳ್ಳಕೆರೆ ಸಂತೆಗೆ ಹೋಗಬೇಕಿದೆ.

    ಕ್ಷೇತ್ರದ ಶಾಸಕರೂ ಆದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇತ್ತ ಗಮನಹರಿಸಿ ವರ್ಷದೊಳಗೆ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ವಾರದ ಸಂತೆಗೆ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ವಿಜಯವಾಣಿ ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ರೈತ ಮುಖಂಡ ಕೆ.ಜಗಲೂರಯ್ಯ ಹೇಳಿಕೆ: ತಾಲೂಕಿನ ಬಹುಪಾಲು ಜನರಿಗೆ ಕೃಷಿ ಮತ್ತು ಕುರಿ ಸಾಕಣೆಯೇ ಕುಲ ಕಸುಬು.ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಕೃಷಿ ಮಾರುಕಟ್ಟೆ ಹಾಗೂ ಕುರಿ ಸಂತೆ ಆರಂಭಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

    ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರಡ್ಡಿಹಳ್ಳಿ ಬಸವರಡ್ಡಿ ಹೇಳಿಕೆ: ತಾಲೂಕು ಮತ್ತು ಜಿಲ್ಲಾಡಳಿತ ಕೂಡಲೇ ಮೊಳಕಾಲ್ಮೂರಲ್ಲಿ ಕೃಷಿ ಮಾರುಕಟ್ಟೆ, ಕುರಿ ಸಂತೆ ತೆರೆದು ರೈತ ಹಿತ ಕಾಯಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು.

    ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮರ‌್ಲಹಳ್ಳಿ ರವಿಕುಮಾರ್ ಹೇಳಿಕೆ: ತಾಲೂಕಿನ ಪ್ರಧಾನ ಬೆಳೆ ಶೇಂಗಾ. ಸ್ಥಳೀಯವಾಗಿ ಮಾರುಕಟ್ಟೆ ಇದ್ದರೆ ದಲ್ಲಾಳಿಗಳು, ಮಧ್ಯವರ್ತಿಗಳು ಹಾಗೂ ಸಾರಿಗೆಗೆ ಸುರಿಯುವ ಹಣ ಉಳಿಸಬಹುದು. ಈ ಬಗ್ಗೆ ತಾಲೂಕು ಆಡಳಿತ ಮತ್ತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.

    ರೈತ ಮುಖಂಡ ತಿಮ್ಮಪ್ಪನಹಳ್ಳಿ ರಾಜಣ್ಣ: ಪಕ್ಕದ ಚಳ್ಳಕೆರೆ, ಹಿರಿಯೂರು ತಾಲೂಕಿಗೆ ಹೋಲಿಸಿದರೆ ಮೊಳಕಾಲ್ಮೂರು ಅಭಿವೃದ್ಧಿಯಲ್ಲಿ ಬಹು ದೂರ ಉಳಿದಿದೆ. ಇನ್ನು ಮುಂದಾದರೂ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕು.

    ರೈತ ಸಂಘದ ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ ಹೇಳಿಕೆ: ಕೃಷಿ ಮಾರುಕಟ್ಟೆ, ಬಸ್ ನಿಲ್ದಾಣ, ಕ್ರೀಡಾಂಗಣ ಇಲ್ಲದೆ ಕೃಷಿ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಶೂನ್ಯವಾಗಿದೆ. ಶೀಘ್ರವೇ ಅಗತ್ಯ ಸೌಲಭ್ಯ ಕಲ್ಪಿಸಿ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಅಳಿಸಬೇಕು.

    ನಾಗಸಮುದ್ರ ತಾಪಂ ಮಾಜಿ ಸದಸ್ಯ ಅಡವಿ ಮಾರಣ್ಣ ಹೇಳಿಕೆ: ತಾತ ಮುತ್ತಾತರ ಕಾಲದಿಂದ ನಾವು ಕೃಷಿ ಮತ್ತು ಕುರಿ ಸಾಕಣೆ ಮಾಡುತ್ತಿದ್ದೇವೆ. ಸ್ಥಳೀಯ ಮಾರುಕಟ್ಟೆ ಇಲ್ಲದೆ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts