More

    ಕರೊನಾ ಮುಕ್ತ ತಾಲೂಕಿನ ಪಟ್ಟ ಉಳಿಸಿಕೊಳ್ಳಲು ಕ್ರಮ

    ಮೊಳಕಾಲ್ಮೂರು: ಕರೊನಾ ವೈರಸ್‌ನಿಂದ ತಾಲೂಕು ಮುಕ್ತವಾಗಿದೆ. ಈ ಸ್ಥಿತಿ ಹೀಗೆಯೇ ಮುಂದುವರಿಸಲು ಅನ್ಯ ಜಿಲ್ಲೆಗಳಿಂದ ಬರುವವರನ್ನು ಅಗತ್ಯತೆ ಅನುಸಾರ ಕ್ವಾರಂಟೈನ್‌ನಲ್ಲಿರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ. ಬಸವರಾಜ್ ತಿಳಿಸಿದರು.

    ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕೋವಿಡ್-19 ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
    ಕರೊನಾ ಸೇನಾನಿಗಳ ಪ್ರಾಮಾಣಿಕ ಸೇವೆಯಿಂದ ತಾಲೂಕಿಗೆ ವೈರಸ್ ಸುಳಿದಿಲ್ಲ. ಇಲ್ಲಿ ಲಾಕ್‌ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.

    ತಾಲೂಕು ಆಂಧ್ರದ ರಾಯದುರ್ಗ ಸಂಪರ್ಕ ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿಂದ ಬರುವ ಜನರು ಹಾಗೂ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲಿ ಕಡ್ಡಾಯವಾಗಿ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಅಂತರ್‌ರಾಜ್ಯ ಅಥವಾ ಜಿಲ್ಲೆಯಿಂದ ವಲಸೆ ಹೋಗಿ ಬಂದವರನ್ನ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ಮಾತನಾಡಿ, ನೌಕರರು, ಕಾರ್ಮಿಕರು, ಉದ್ಯಮಿಗಳು, ವಿದ್ಯಾರ್ಥಿಗಳು ತಮ್ಮ ಮೂಲಕ ಜಿಲ್ಲೆಗೆ ತೆರಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಬಂದವರೆಲ್ಲರ ಕೋವಿಡ್-19 ತಪಾಸಣೆ ಮಾಡಿ ಮನೆಗೆ ಕಳಿಸಿಕೊಡಲಾಗುತ್ತಿದೆ. ಕೆಂಪು ಮತ್ತು ಕಿತ್ತಳೆ ವಲಯಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕ್ವಾರಂಟೈನ್‌ನಲ್ಲಿರಿಸಲು ಸ್ಥಳೀಯ ಸರ್ಕಾರಿ ಸ್ವಾಮ್ಯದ ವಸತಿ ನಿಲಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದರೆ ಕೋವಿಡ್ ಹೆಲ್ತ್‌ಕೇರ್ ಸೆಂಟರ್ ಆರಂಭಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ತಾಪಂ ಇಒ ಪ್ರಕಾಶ್, ತಾಲೂಕು ಆರೋಗ್ಯ ಆಡಳಿತಾಧಿಕಾರಿ ಡಾ. ಪದ್ಮಾ, ಬಿಇಒ ಎನ್. ಸೋಮಶೇಖರ್, ಪಪಂ ಮುಖ್ಯಾಧಿಕಾರಿ ಎಚ್. ಕಾಂತರಾಜ್, ಬಿಸಿಎಂ ವಿಸ್ತರಣಾಧಿಕಾರಿ ಶೇಖರ್, ಪಿಎಸ್‌ಐ ಎಂ. ಬಸವರಾಜ್, ಟಿಎಸ್‌ಡಬ್ಲ್ಯು ಟಿ. ಗುರುಮೂರ್ತಿ, ಕಂದಾಯ ಅಧಿಕಾರಿ ಉಮೇಶ್, ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts