More

    ಹೀಗಿದ್ದರು ನೋಡಿ ಮೊಹಮ್ಮದ್ ರಫಿ

    -ರಫಿ ಚರಣ್

    ಹಿಂದಿ ಚಿತ್ರಸಂಗೀತದಲ್ಲಿ ಮೊಹಮ್ಮದ್ ರಫಿ ಎಂದರೆ ಗಾನ ಗಂಗೋತ್ರಿ. ಅವರ ಗಾಯನವೆಂದರೆ ಅದೊಂದು ಅಲೌಕಿಕ ಆನಂದದ ದೈವೀಕ ರಸಾನುಭೂತಿ, ನೇರವಾಗಿ ಹೃದಯಕ್ಕೇ ಲಗ್ಗೆ ಇಡುವ ಭಾವಬಂಧ. ಅಪಾರ ಕಷ್ಟ-ನಷ್ಟಗಳನ್ನು, ಉಪೇಕ್ಷೆ-ತಾತ್ಸಾರಗಳನ್ನು ನಿರಂತರವಾಗಿ ಅನುಭವಿಸಿಕೊಂಡೇ ಚಿತ್ರರಂಗ ಪ್ರವೇಶಿಸಿದ ರಫಿ ನಡೆದ ದಾರಿ ಸುಗಮವಾಗಿರಲಿಲ್ಲ. ಕೊನೆಗೊಮ್ಮೆ ಯಶಸ್ಸು ಅವರಿಗೊಲಿಯಿತು ಪರಿಣಾಮ ಅಕ್ಷರಶಃ ಅನಭಿಷಿಕ್ತ ಸಾಮ್ರಾಟರಾಗಿ 36 ವರ್ಷ ಇಡೀ ದೇಶವನ್ನು ಸಮ್ಮೋಹನಗೊಳಿಸಿ ರಾರಾಜಿಸಿದರು. ಅವರ ಅನುಪಸ್ಥಿತಿಯಲ್ಲಿ ಅವರ ಗೀತೆಗಳು ಇಂದಿಗೂ ರಾರಾಜಿಸುತ್ತಿವೆ. ದೇವಗಾಯಕ ಮೊಹಮ್ಮದ್ ರಫಿ ಕಣ್ಮರೆಯಾಗಿ ಇಂದಿಗೆ (ಜುಲೈ 31) ನಲವತ್ತು ವರ್ಷ. ಆದರೆ, ರಫಿ ಇಂದಿಗೂ ಭಾರತೀಯರೆಲ್ಲರ ಕಣ್ಮಣಿಯೇ. ರಫಿಯವರ ಗಾಯನದ ಯಶಸ್ಸಿಗೆ ಮೂಲ ಕಾರಣವೇ ಅವರ ವ್ಯಕ್ತಿತ್ವ ಮತ್ತು ಬದುಕುತ್ತಿದ್ದ ರೀತಿ. ಕೀರ್ತಿ ಶಿಖರದ ತುತ್ತ ತುದಿಯಲ್ಲಿದ್ದರೂ ರಫಿ ಇದಾವುದರ ಸೋಂಕೇ ಇಲ್ಲದಂತೆ ಅಂತರಂಗದಲ್ಲೊಬ್ಬ ದೈವತ್ವವೇ ಮೈವೆತ್ತುಬಂದ ಪರಿಪೂರ್ಣ ಸಂತರಾಗಿದ್ದರು. ರಫಿಯವರ ಬದುಕಿನ ಜೀವಸೆಲೆಯಾಗಿದ್ದ ಮಾನವೀಯ ಭಾವನೆಗಳು ಹಿಂದಿನ, ಇಂದಿನ, ಮುಂದಿನ ಎಲ್ಲ ಕಲಾವಿದರಿಗೂ ಚಿರಕಾಲ ಆದರ್ಶವಾಗಿ ನಿಲ್ಲುವಂಥವು. ಏನಾದರೂ ಆಗು ಮೊದಲು ಮಾನವನಾಗು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿತ್ತು ರಫಿಯವರ ಬದುಕು. ಗೂಗಲ್​ನಲ್ಲಿ ರಫಿಯವರ ಎಲ್ಲ ಹಾಡುಗಳು ಸಿಕ್ಕಬಹುದು, ಆದರೆ ಅವರ ಮಾನವೀಯ ಗುಣ ವಿಶೇಷಗಳು ?- ಇದೋ ಇಲ್ಲಿವೆ ಕೆಲವು.

    ಭಿಕ್ಷುಕನಿಗಾಗಿಯೂ ಹಾಡಿದ ರಫಿ !:

    ರಫಿ ಅವರಿಗೆ ಪ್ರತಿದಿನ ಭಿಕ್ಷುಕರಿಗೆ, ಅನಾಥರಿಗೆ ದಿನನಿತ್ಯವೂ ಏನಾದರೊಂದು ಕಾಣಿಕೆ ಕೊಡುವುದು ವಾಡಿಕೆ. ಒಮ್ಮೆ ಮಸೀದಿಯ ಮುಂದೆ ನಿಂತಿದ್ದ ಒಬ್ಬ ಭಿಕ್ಷುಕ, ‘ರಫಿ ಸಾಬ್ ನನಗೊಂದು ಆಸೆ ಇದೆ. ನೀವು ಹೇಳು ಎಂದರೆ ಹೇಳ್ತೀನಿ’ ಎಂದ. ‘ಹೇಳು ಪರವಾಗಿಲ್ಲ’ ಎಂದಾಗ, ‘ನೀವು ಹಾಡಿರುವ ‘ಆನ್’ ಚಿತ್ರದ ‘ದಿಲ್​ವೆು ಛುಪಾಕೆ ಪ್ಯಾರ್​ಕಾ ತೂಫಾನ್ … ’ ಹಾಡು ನನಗೆ ತುಂಬಾ ಇಷ್ಟ. ಈ ಭಿಕ್ಷುಕನಿಗೋಸ್ಕರ ಅದೊಂದು ಹಾಡು ಹಾಡಿಬಿಡಿ ಸಾಹೇಬರೇ, ನಾನು ಸಾಯೋವರೆಗೂ ನಿಮ್ಮ ಹೆಸರು ಹೇಳ್ಕೋತೀನಿ’ ಎಂದ. ನಸುನಕ್ಕ ರಫಿ, ‘ಇದು ಮಸೀದಿ, ಇಲ್ಲೆಲ್ಲಾ ಸಿನಿಮಾ ಹಾಡು ಹಾಡಬಾರದು. ನನ್ನ ಜೊತೆಗೆ ಬಾ’ ಎಂದು ಕರೆದುಕೊಂಡು ಹೋಗಿ, ಅಷ್ಟು ದೂರದಲ್ಲಿ ನಿಂತಿದ್ದ ತಮ್ಮ ವಿದೇಶಿ ಕಾರಿನ ಹಿಂದಿನ ಸೀಟಿನಲ್ಲಿ ಅವನನ್ನು ಕೂರಿಸಿ ತಾವು ಅವನ ಪಕ್ಕದಲ್ಲಿಯೇ ಕುಳಿತು ಇಡೀ ಹಾಡು ಹಾಡಿದರು. ಹಾಡು ಮುಗಿಯುವ ಹೊತ್ತಿಗೆ ಕಣ್ಣೀರುಗರೆಯುತ್ತಿದ್ದ ಅವನನ್ನೊಮ್ಮೆ ಅಪ್ಪಿ ನೂರು ರೂಪಾಯಿ ನೋಟೊಂದನ್ನು ಕೈಯಲಿಟ್ಟು, ಕೈಮುಗಿದು ಕಳುಹಿಸಿಕೊಟ್ಟರು ರಫಿ.

    ಅನಾಥ ಬಂಧು: ಮೊಹಮ್ಮದ್ ರಫಿ ತೀರಿಕೊಂಡ ಮೂರು-ನಾಲ್ಕು ತಿಂಗಳು ಕಳೆದ ಮೇಲೆ ಒಂದು ಬಡಕುಟುಂಬ ಅವರ ಮನೆ ಹುಡುಕಿಕೊಂಡು ಬಂತು. ‘ನಾವು ಕಾಶ್ಮೀರದಿಂದ ಬಂದಿದ್ದೇವೆ, ರಫಿ ಸಾಹೇಬರ ಮನೆ ಇದೇನೇ ? ಅವರು ಮನೆಯಲ್ಲಿ ಇಲ್ಲವೇ?’ ಎಂದು ವೃದ್ಧನೊಬ್ಬ ಕೇಳಿದ. ರಫಿಯವರ ಮಗ ಶಾಹಿದ್, ‘ರಫಿಯವರು ತೀರಿಕೊಂಡು ಮೂರು ತಿಂಗಳ ಮೇಲಾಯಿತು. ನೀವು ಯಾರು? ಏಕೆ ಬಂದಿದ್ದೀರಿ? ಎಂದು ವಿಚಾರಿಸುತ್ತಿದ್ದಂತೆ’ ಅವರೆಲ್ಲಾ ಗೊಳೋ ಎಂದು ಅಳಲಾರಂಭಿಸಿದರು. ‘ಭಯ್ಯಾ, ನಮ್ಮದು ಅನಾಥ ಕುಟುಂಬ. ತುಂಬಾ ಹಿಂದೆ ಆಕಸ್ಮಿಕವಾಗೊಮ್ಮೆ ಕಾಶ್ಮೀರದಲ್ಲಿ ರಫಿ ಸಾಹೇಬರ ಪರಿಚಯವಾಗಿತ್ತು. ನಮಗೆ ಜೀವನಕ್ಕೇನೂ ದಾರಿಯಿಲ್ಲ. ನಾವು ಸತ್ತುಹೋಗ್ತೇವೆ ಎಂದಾಗ, ನೀವೇನೂ ಚಿಂತೆ ಮಾಡಬೇಡಿ, ನಾನು ಖಂಡಿತಾ ಕೈಲಾದ ಸಹಾಯ ಮಾಡ್ತೀನಿ ಅಂತ ಹೇಳಿದ್ದರು. ಆಗಿನಿಂದ ಪ್ರತಿ ತಿಂಗಳು ನಮ್ಮ ಊಟಕ್ಕಾಗುವಷ್ಟು ದುಡ್ಡನ್ನು ಮನಿ ಆರ್ಡರ್ ಮಾಡುತ್ತಿದ್ದರು. ಮೂರು ತಿಂಗಳಿಂದ ಮನಿಯಾರ್ಡರ್ ಬರಲಿಲ್ಲ, ಅದಕ್ಕೇ ತುಂಬಾ ಕಷ್ಟಪಟ್ಟು ಹುಡುಕಿಕೊಂಡು ಬಂದೆವು’ ಎಂದು ಹೇಳಿ ಅಳು ಮುಂದುವರೆಸಿದರು. ತಮಗೆ ವಿರಾಮ ಸಿಕ್ಕಾಗಲೆಲ್ಲಾ ಮೊಹಮ್ಮದ್ ರಫಿಯವರು, ಅಭಿಮಾನಿಗಳಿಗೆ ಪತ್ರ ಬರೆದು ಫೋಟೋ ಕಳುಹಿಸುತ್ತಿದ್ದರು ಅಥವಾ ಹತ್ತಾರು ಜನರಿಗಾಗಿ ಮನಿಯಾರ್ಡರ್ ಫಾರಂಗಳನ್ನು ತುಂಬುತ್ತಿದ್ದರು. ಯಾರಿಗೆ ಎಂಬ ಸತ್ಯ ಅವರ ಕುಟುಂಬಕ್ಕೆ ಗೊತ್ತಾಗಿದ್ದು ಅವರು ನಿಧನರಾದ ನಂತರವೇ.

    ಭಿಕ್ಷುಕನಾಗಿದ್ದ ಸಂಗೀತ ನಿರ್ದೇಶಕ: ಒಮ್ಮೆ ಧ್ವನಿಮುದ್ರಣ ಮುಗಿಸಿಕೊಂಡು ಕಾರ್ ಹತ್ತುತ್ತಿದ್ದಂತೆಯೇ ಒಬ್ಬ ಭಿಕ್ಷುಕ, ರಫಿ ಅವರೆದುರು ಬಂದ. ‘ಮೂರು ದಿನಗಳಾಯ್ತು ಊಟ ಮಾಡಿ, ಏನಾದರೂ ಸಹಾಯ ಮಾಡಿ …’ ಎಂದು ಕೈಚಾಚಿದ. ರಫಿ ನೂರು ರೂಪಾಯಿ ನೋಟು ಕೊಟ್ಟು ಅವನನ್ನೊಮ್ಮೆ ಗಮನಿಸಿದರು. ಜಡೆಗಟ್ಟಿದ್ದ ಗಡ್ಡ-ಮೀಸೆ ಬಿಟ್ಟು, ತುಂಬಾ ಕೊಳಕಾಗಿದ್ದ ಅವನನ್ನು ನೋಡಿದ ತಕ್ಷಣ, ಇವನನ್ನೆಲ್ಲೋ ನೋಡಿದ್ದೇನಲ್ಲ ಎಂದನಿಸಿತು. ಸ್ವಲ್ಪ ನೆನಪಸಿಕೊಂಡ ನಂತರ, ಅವರು ಹಿಂದೊಮ್ಮೆ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು ಎಂಬ ವಿಷಯ ನೆನಪಿಗೆ ಬಂತು. ಸಂಗೀತ ನಿರ್ದೇಶಕರೆಂದರೆ ರಫಿಯವರಿಗೆ ಅಪಾರ ಗೌರವ. ಯಾವುದೇ ವಯಸ್ಸಿನವರಾಗಿದ್ದರೂ ಅವರನ್ನು ಉಸ್ತಾದ್ ಎಂದೇ ಗೌರವಿಸುತ್ತಿದ್ದರು. ಕಾರಣ, ಅವರು ನಮಗೆ ಹಾಡು ಹೇಳುವುದನ್ನು ಕಲಿಸಿಕೊಡುತ್ತಾರೆ, ಅವರು ಕಲಿಸಿದರಲ್ಲವೇ ನಾವು ಹಾಡುವುದು ಎಂಬುದು ಅವರ ಅಭಿಪ್ರಾಯ. ಕೂಡಲೇ ಅವರಿಗೆ ಅಗತ್ಯ ನೆರವು ನೀಡಿ, ಇನ್ನು ಮೇಲೆ ಯಾವ ಕಾರಣಕ್ಕೂ ಭಿಕ್ಷೆ ಬೇಡಬಾರದು ಎಂದು ತಾಕೀತು ಮಾಡುವುದರ ಜತೆಗೆ, ಅವರಿಗೆ ಕೆಲಸವನ್ನೂ ಕೊಡಿಸಿದರು.

    ಜೀವ ತಳೆದ ಕೃಷ್ಣ ಭಜನೆ:

    ಖಯ್ಯಾಂ ಅವರ ಸಂಗೀತ ನಿರ್ದೇಶನದಲ್ಲಿ ‘ತೇರೆ ಭರೋಸೆ ಹೈ ನಂದಲಾಲ …’ ಎಂಬ ಮಧುಕರ್ ರಾಜಾಸ್ತಾನಿಯವರ ಶ್ರೀ ಕೃಷ್ಣನ ಭಜನೆಯ ದೊಡ್ಡ ರೆಕಾರ್ಡಿಂಗ್. ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದ ನಂತರ ರೆಕಾರ್ಡಿಂಗ್ ಆಯಿತು. ಹಾಡು ಸೊಗಸಾಗಿ ಬಂದಿದೆಯೆಂದು ಸಂಗೀತ ನಿರ್ದೇಶಕರು ಹೇಳಿದರೂ ರಫಿಯವರಿಗೆ ಅದೇನೋ ಅತೃಪ್ತಿ, ಅಸಮಾಧಾನ. ತಾವು ಅಂದುಕೊಂಡಂತೆ ಭಾವನೆಗಳು ಬಂದಿಲ್ಲ ಎಂಬ ನಿರಾಶೆ. ಸ್ವಲ್ಪ ಹೊತ್ತಿನ ಮೇಲೆ ಅವರಿಗೊಂದು ಐಡಿಯಾ ಬಂತು. ರೆಕಾರ್ಡಿಂಗ್​ಗೆ ಬಂದಿದ್ದ ತಮ್ಮೊಬ್ಬ ಆತ್ಮೀಯ ಮಿತ್ರ ಹರಿಓಂ ಶರಣ್​ಜಿ ಯವರನ್ನು ಕರೆದು ಅವರ ಕಿವಿಯಲ್ಲೇನೋ ಹೇಳಿದರು. ಶರಣ್​ಜಿ ಹೊರಗಡೆ ಹೋಗಿ ಸ್ವಲ್ಪ ಹೊತ್ತಿನ ನಂತರ ವಾಪಸ್ ಬಂದರು. ಬರುವಾಗ ಕೈಯಲ್ಲಿ ದೊಡ್ಡದೊಂದು ಫೋಟೋ ಇತ್ತು. ಅದನ್ನು ರಫಿಯವರ ಕಣ್ಣಿಗೆ ಕಾಣುವಂತೆ ರೆಕಾರ್ಡಿಂಗ್ ರೂಂ ಮುಂದೆ ತೂಗುಹಾಕಿದರು. ಸರಿ, ಖಯ್ಯಾಂ ಅವರಿಗೆ ರೆಡಿಯಾಗಿ ಎಂದು ಹೇಳಿದ ರಫಿ ಮತ್ತೊಮ್ಮೆ ಹಾಡಿದರು. ರೆಕಾರ್ಡಿಂಗ್ ಅದ್ಭುತವಾಗಿ ಮೂಡಿಬಂತು. ರಫಿಯವರಿಗೆ ಆನಂದವಾಗಿತ್ತು. ಹೊರಗಡೆ ಬಂದು ಶರಣ್​ಜಿ ತಂದು ತೂಗು ಹಾಕಿದ್ದ ಫೋಟೋಗೆ ಭಕ್ತಿಯಿಂದ ಕೈ ಮುಗಿದರು. ಅದು ಶ್ರೀ ಕೃಷ್ಣನ ಫೋಟೋ ಆಗಿತ್ತು.

    ರಫಿ ಬದುಕಿನ ಕೊನೇ ಕಾರ್ಯಕ್ರಮ: ರಫಿ ಅವರು ನಿಧನರಾಗುವುದಕ್ಕಿಂತ ಎರಡು ತಿಂಗಳ ಮುಂಚೆ, ಸಿಲೋನ್​ನಲ್ಲಿ ಒಂದು ಸಂಗೀತ ಸಂಜೆ ಏರ್ಪಾಡಾಗಿತ್ತು. ಇದು ಅವರ ಬದುಕಿನ ಕೊಟ್ಟ ಕೊನೆಯ ಕಾರ್ಯಕ್ರಮ. ರಫಿಯವರಿಗೆ ಅಪಾರ ಸಂತೋಷ ಮತ್ತು ಸಾರ್ಥಕ್ಯವನ್ನು ಈ ಕಾರ್ಯಕ್ರಮ ತಂದುಕೊಟ್ಟಿತ್ತು. ಕಾರಣ ಅಲ್ಲಾದ ಒಂದು ಘಟನೆ. ಈ ಕಾರ್ಯಕ್ರಮದಲ್ಲಿ ಕಡಿಮೆ ಎಂದರೂ ಹತ್ತು ಲಕ್ಷ ಜನ ಸೇರಿದ್ದರಂತೆ. ತೆರೆದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತಂತೆ. ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಪ್ರತಿ ಹಾಡಿಗೂ ಚಪ್ಪಾಳೆಯೋ ಚಪ್ಪಾಳೆ, ಜಯಕಾರ. ಇನ್ನೇನು ಅಂತಿಮ ಹಂತಕ್ಕೆ ಬರುತ್ತಿದೆ ಎನ್ನುವಾಗ ಧೋ ಎಂದು ಮಳೆ ಸುರಿಯಲಾರಂಭಿಸಿತ್ತಂತೆ. ಆಶ್ಚರ್ಯವೆಂದರೆ, ಇಡೀ ಜನಸ್ತೋಮದಲ್ಲಿ ಒಬ್ಬರೂ ಸ್ಥಳಬಿಟ್ಟು ಕದಲಲಿಲ್ಲ. ಹೆಚ್ಚಿನ ಜನ ಛತ್ರಿ ತಂದಿದ್ದರು. ಅಲ್ಲಿ ಅವರಿಗೆಲ್ಲಾ ಇದು ಸಾಮಾನ್ಯವಾದ ಅನುಭವ. ವೇದಿಕೆಯ ಮುಂಭಾಗದಲ್ಲೊಬ್ಬ ವಯಸ್ಸಾಗಿದ್ದ ವ್ಯಕ್ತಿ ಸ್ವಯಂ ತಾವೇ ಛತ್ರಿ ಹಿಡಿದುಕೊಂಡು ಸಂಗೀತ ಅನುಭವಿಸುತ್ತಿದ್ದರಂತೆ. ಅವರ್ಯಾರೋ ಅಲ್ಲ, ಶ್ರೀಲಂಕಾದ ಅಧ್ಯಕ್ಷ ಜಯವರ್ಧನೆ. ಸ್ವತಃ ಒಂದು ದೇಶದ ಅಧ್ಯಕ್ಷರೇ ಹಾಗೆ ನಿಂತಿದ್ದು ನೋಡಿ, ಜನ್ಮ ಸಾರ್ಥಕವಾಯಿತು ಎಂದನಿಸಿತಂತೆ ರಫಿ ಅವರಿಗೆ. ಅಷ್ಟೇ ಅಲ್ಲ, ಇಂಥ ಬದುಕು ಮತ್ತು ಕೀರ್ತಿಗೆ ಕಾರಣಕರ್ತನಾದ ದಯಾಮಯನಾದ ಅಲ್ಲಾಗೆ ಅಲ್ಲಿಂದಲೇ ಕಣ್ಮುಚ್ಚಿ ಸಲಾಂ ಮಾಡಿದರಂತೆ.

    ಕೊನೆಯ ಹಾಡು: 26 ಜುಲೈ 1980, ಶನಿವಾರ. ರಫಿಯವರಿಂದ ಧಮೇಂದ್ರ-ಹೇಮಮಾಲಿನಿ ತಾರಾಗಣದ ‘ಆಸ್​ಪಾಸ್’ ಚಿತ್ರಕ್ಕಾಗಿ ಆನಂದ್ ಭಕ್ಷಿ ಬರೆದ ಗೀತೆಯೊಂದರ ಧ್ವನಿಮುದ್ರಣ. ಲಕ್ಷ್ಮೀಕಾಂತ್-ಪ್ಯಾರೇಲಾಲ್ ಸಂಗೀತ. ಭೂಮಿಯಿಂದ ಅಗಲುತ್ತಿರುವ ನಾಯಕಿ ಕುರಿತು ನಾಯಕನ ಪ್ರಲಾಪ. ‘ತೇರೆ ಅನೇಕಿ ಆಸ್ ಹೈ ದೋಸ್ತ್ …’ ಎಂಬ ಹಾಡು ಅದು. ಇದಾದ ಐದನೇ ದಿನ ಅಂದರೆ, ಜುಲೈ 31ನೇ ತಾರೀಖು ಗುರುವಾರ ರಾತ್ರಿ 10.25ಕ್ಕೆ ತೀವ್ರ ಹೃದಯಾಘಾತಕ್ಕೀಡಾಗಿ ರಫಿ ತಮ್ಮ 56ನೇ ವಯಸ್ಸಿನಲ್ಲಿ ಅಲ್ಲಾನ ಪಾದ ಸೇರಿಕೊಂಡುಬಿಟ್ಟರು. ದಿಢೀರನೆ ದಟ್ಟೈಸಿದ ಕಾಮೋಡಗಳು ಇಡೀ ರಾತ್ರಿ ಮುಂಬೈ ನಗರವನ್ನು ತೋಯಿಸಿ ಅಗಲಿದ ಸಂಗೀತ ಸಾಮ್ರಾಟನಿಗಾಗಿ ಕಂಬನಿಗರೆದವು. ಇನ್ನು ಅಭಿಮಾನಿಗಳ ಗತಿ ?
    ನಾಲ್ಕು ಜನರ ಮುಂದೆ ಕೈಚಾಚುವ ಕರ್ಮ ಕಾಡುವ ಮುನ್ನವೇ ಕಣ್ಣು ಮುಚ್ಚಬೇಕೆಂಬ ರಫಿಯವರ ಮೊರೆ ಅಲ್ಲಾಗೆ ಮುಟ್ಟಿತ್ತು. ಸಾರ್ಥಕ ಸಂಗೀತ ಸಂತನೊಬ್ಬನ ಅವತಾರ ಅಲ್ಲಿಗೆ ಮುಗಿದಿತ್ತು. ಅವರು ನಮ್ಮನ್ನಗಲಿ ಇಂದಿಗೆ ಬರೋಬ್ಬರಿ 40 ವರ್ಷ. ನಂಬಬಹುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts