More

    ರಾಜ್ಯದಲ್ಲಿ ತ್ರಿಮೂರ್ತಿ ಸಂಚಲನ: ಮೋದಿ ಮ್ಯಾಜಿಕ್, ಷಾ ಕಾರ್ಯತಂತ್ರ, ನಡ್ಡಾ ಸಂಘಟನಾತ್ಮಕ ಗಮನ

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಪ್ರಮುಖ ಮೂರೂ ಪಕ್ಷಗಳು ಭಿನ್ನ ಕಾರ್ಯತಂತ್ರಗಳೊಂದಿಗೆ ಅಖಾಡಕ್ಕಿಳಿದಿದ್ದು, ಆಡಳಿತಾರೂಢ ಬಿಜೆಪಿಯು ಕೇಂದ್ರದ ಟಾಪ್ ಮೂವರು ನಾಯಕರ ಮೂಲಕ ಪ್ರಚಾರವನ್ನು ಕಾವೇರಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದತ್ತ ಗಮನ ಕೇಂದ್ರೀಕರಿಸಿದ್ದು, ರಾಜ್ಯ ಬಿಜೆಪಿ ನಾಯಕರು ಕೂಡ ಇವರನ್ನು ಹೆಚ್ಚೆಚ್ಚು ಕರೆಯಿಸಿಕೊಂಡು ಕಾರ್ಯಕರ್ತರ ಉತ್ಸಾಹ ಉತ್ತೇಜಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಪ್ರಧಾನಿ ಮೋದಿಯವರ ಫೆ.27ರ ಭೇಟಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ, ಬೆಳಗಾವಿಯಲ್ಲಿ ರೈಲು ನಿಲ್ದಾಣ ಉದ್ಘಾಟನೆ ಸೇರಿ ಎರಡೂ ಕಡೆ ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಚಾಲನೆ, ಭೂಮಿಪೂಜೆ ನೆರವೇರಿಸುವುದಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ.

    ಮಾರ್ಚ್​ನಲ್ಲೂ ಮೋದಿ ಮೂರು ಬಾರಿ ಭೇಟಿ ನೀಡುವ ಸಾಧ್ಯತೆಗಳಿವೆ. ಧಾರವಾಡ ಐಐಟಿ ಕ್ಯಾಂಪಸ್ ಉದ್ಘಾಟನೆ, ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್ ವೇ ಸೇರಿ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಕ್ರಮ ಜೋಡಿಸಲು ತಯಾರಿ ನಡೆದಿದೆ. ಕೇಂದ್ರ, ರಾಜ್ಯದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಮೋದಿಗೆ ನೇರ ಕನೆಕ್ಟ್ ಆಗುವಂತೆ ಮಾಡುವ ಮೂಲಕ ‘ಮೋದಿ ಬ್ರಾ್ಯಂಡ್’ಗೆ ಹೊಸ ಹೊಳಪು ನೀಡುವ ತಂತ್ರಗಾರಿಕೆ ಇದೆ.

    ಸಂಘಟನೆಗೆ ಟಾನಿಕ್: ‘ಬೂತ್ ವಿಜಯ ಅಭಿಯಾನ’ದಡಿ ಜನವರಿಯಲ್ಲಿ 10 ದಿನ ವಿವಿಧ ಚಟುವಟಿಕೆ ಮೂಲಕ ಸಂಘಟನೆಗೆ ಚೈತನ್ಯದ ಟಾನಿಕ್ ನೀಡಲಾಗಿದೆ. 58 ಸಾವಿರ ಬೂತ್​ಗಳ ಪೈಕಿ 51,000 ಬೂತ್​ಗಳ ಕಾರ್ಯಕರ್ತರು, ಅಭಿಮಾನಿಗಳ ಮನೆ ಮೇಲೆ ಪಕ್ಷದ ಬಾವುಟ ಹಾರಿಸಲಾಗಿದೆ. ಅಭಿಯಾನ ನಡೆಸಿದೆಡೆ ಬೂತ್​ಗಳ ಸಮಿತಿ, ಪಂಚರತ್ನ ಕಮಿಟಿಗಳನ್ನು ರಚಿಸಿ, 16 ಲಕ್ಷ ಪೇಜ್ ಪ್ರಮುಖ್​ರನ್ನು ನೇಮಿಸುವ ಜತೆಗೆ ವಾಟ್ಸಪ್ ಗ್ರೂಪ್ ಸೃಷ್ಟಿಸಲಾಗಿದೆ.

    ಕಾರ್ಯಕರ್ತರ ಉಮೇದು: ಸಂಘಟನಾ ಚಟುವಟಿಕೆಗಳು, ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದಕ್ಕೆ ಸೀಮಿತವಾಗಿದ್ದ ಕಾರ್ಯತತ್ಪರತೆ ಎರಡನೇ ಹಂತದಲ್ಲಿ ರಾಜಕೀಯ ಆಯಾಮ ಪಡೆದುಕೊಂಡಿದೆ. ಫೆ.5ರವರೆಗೆ ನಡೆದ ವಿಜಯ ಸಂಕಲ್ಪ ಅಭಿಯಾನದಲ್ಲಿ 39,272 ಬೂತ್​ಗಳ 22.55 ಲಕ್ಷ ಮನೆಗಳನ್ನು ಸಂರ್ಪಸಿ, 13.35 ಲಕ್ಷ ಮನೆಗಳು, 4.91 ಲಕ್ಷ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಈ ಚಟುವಟಿಕೆಯಲ್ಲಿ ನಾಲ್ಕು ಲಕ್ಷ ಕಾರ್ಯಕರ್ತರು ತೊಡಗಿಕೊಂಡಿದ್ದು, ಹೊಸದಾಗಿ 40.50 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿದೆ.

    ಬೆಳಗಾವಿಯಲ್ಲಿ ಮೋದಿ ರೋಡ್ ಶೋ: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಶೈಲಿಯಲ್ಲೇ ಮೋದಿ ಮ್ಯಾಜಿಕ್ ಅಡಗಿದೆ. ಫೆ.27ರ ಬೆಳಗ್ಗೆ 11ಕ್ಕೆ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿಳಿದು, ಎರಡು ತಾಸಿನ ಕಾರ್ಯಕ್ರಮದ ಬಳಿಕ ಅದೇ ವಿಮಾನದಲ್ಲಿ ಬೆಳಗಾವಿಗೆ ಪ್ರಯಾಣಿಸಲಿದ್ದಾರೆ. ಕೇವಲ ಒಂದು ವಾರದೊಳಗೆ ಬೆಳಗಾವಿಯಲ್ಲಿ ಭರ್ಜರಿ ರೋಡ್ ಶೋ, ಎರಡು ಲಕ್ಷ ಜನರನ್ನು ಸೇರಿಸುವ ಬೃಹತ್ ಸಮಾವೇಶಕ್ಕೆ ಕಮಲ ಪಡೆ ಸಜ್ಜಾಗಿದೆ. ಅಷ್ಟೇ ಅಲ್ಲ, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಬಿಜೆಪಿ ಧುರೀಣರು ಸಮಾಗಮಗೊಂಡು ಪಕ್ಷದ ಬಲಪ್ರದರ್ಶನ ಉಮೇದಿಯಲ್ಲಿರುವುದು ವಿಶೇಷ.

    ಅಮಿತ್ ಷಾ ಕಾರ್ಯಕ್ರಮ: ಗೆಲುವಿಗೆ ಬೇಕಾದ ವಿವಿಧ ರಾಜಕೀಯ ಸಮೀಕರಣ, ಸಂಘಟನಾ ಸ್ವರೂಪದ ಬಗ್ಗೆ ಮಾರ್ಗದರ್ಶನ ನೀಡುವಂತಹ ಕಾರ್ಯಗಳನ್ನು ಅಮಿತ್ ಷಾ ನಿರ್ವಹಿಸಲಿದ್ದಾರೆ. ಪಕ್ಷದ ಬಲವರ್ಧನೆ, ಎದುರಾಳಿಗಳಿಗೆ ಪ್ರತ್ಯಸ್ತ್ರ ಪ್ರಯೋಗಿಸುವ ಪಾಠದ ಜತೆಗೆ ವಿವಿಧ ಕ್ಷೇತ್ರಗಳ ಪ್ರಮುಖರು, ವರ್ಚಸ್ಸುಳ್ಳವರ ಮನ ಗೆಲ್ಲಲು ಪ್ರಯತ್ನಿಸಲಿದ್ದಾರೆ. ಫೆ.23ರಂದು ಬಳ್ಳಾರಿ, ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಈ ತಿಂಗಳಲ್ಲಿ 2ನೇ ಭೇಟಿಯಿದು. ಮಾರ್ಚ್​ನಲ್ಲಿ 3 ಬಾರಿ ಆಗಮಿಸುವ ನಿರೀಕ್ಷೆ ಇದ್ದು, ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಂಘಟನೆಯನ್ನು ಕೇಂದ್ರೀಕರಿಸಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಜಯಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ವಿಜಯಪುರಕ್ಕೆ ಆಗಮಿಸಿ ಬೂತ್ ಭೇಟಿಯಲ್ಲಿ ಸಕ್ರಿಯವಾಗಿದ್ದರು.

    ವಿಚಾರ ವಿನಿಮಯ: ಬಿಜೆಪಿ ಬೇರು ಆಳಕ್ಕಿಳಿಯದ ಕಲ್ಯಾಣ ಕರ್ನಾಟಕದತ್ತ ಅಮಿತ್ ಷಾ ಚಿತ್ತ ನೆಟ್ಟಿದ್ದು, ಸಂಡೂರಿನಲ್ಲಿ ಫೆ.23ರಂದು ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಒಳಗೊಂಡ ಪಕ್ಷದ ಬಳ್ಳಾರಿ ವಿಭಾಗದ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜನಾರ್ದನ ರೆಡ್ಡಿ ಹೊಸ ಪಕ್ಷ ಹುಟ್ಟಿಹಾಕಿರುವ ಬೆನ್ನಲ್ಲೇ ಷಾ ಆಗಮನ ಸಂಚಲನ ಮೂಡಿಸಿದೆ. ಅಂದೇ ಬೆಂಗಳೂರಿನ ಟೌನ್​ಹಾಲ್​ನಲ್ಲಿ ಪ್ರಬುದ್ಧರ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಪಕ್ಷದ ಶಾಸಕರ ಜತೆ ವಿಚಾರ ವಿನಿಮಯ ನಡೆಸಿ ಪ್ರತಿಯೊಬ್ಬರ ನಾಡಿಮಿಡಿತ ಅರಿಯಲೆತ್ನಿಸಲಿದ್ದಾರೆ.

    ನಾಡಿನ ಅಸ್ಮಿತೆಯ ಛಾಪು: ನಾಡಿನ ಸಾಂಸ್ಕೃತಿಕ, ಧಾರ್ವಿುಕ, ಪಾರಂಪರಿಕ ನೆಲೆಗಳು, ವೀರಪುರುಷರ ಕೊಡುಗೆಗಳನ್ನು ಸ್ಮರಿಸಬೇಕೆಂಬ ಉತ್ಸಾಹಕ್ಕೆ ಕೇಂದ್ರದ ಬಲವೂ ದೊರೆತಿದೆ. ಟಿಪು್ಪ ಎಕ್ಸ್​ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್​ಪ್ರೆಸ್ ಎಂದು ಮರುನಾಮಕರಣ ಮಾಡಿ ಸ್ಪಷ್ಟ ಸಂದೇಶ ಸಾರಿದೆ. ಇದೀಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು, ಅಲ್ಲಿನ ರೈಲು ನಿಲ್ದಾಣಕ್ಕೆ ಧೀಮಂತ ಶಿವಪ್ಪ ನಾಯಕ ಹೆಸರು ನಾಮಕರಣಕ್ಕೆ ಸರ್ಕಾರ ಶಿಫಾರಸು ಮಾಡಲಿದೆ. ರಾಜ್ಯ ನಾಯಕರ ರಥಯಾತ್ರೆಗಳಿಗೆ ಮಲೆ ಮಹದೇಶ್ವರ, ಕ್ರಾಂತಿಪುರುಷ ಬಸವೇಶ್ವರ, ಸಂಗೊಳ್ಳಿ ರಾಯಣ್ಣ ಹೆಸರುಗಳನ್ನಿಡಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣವಾಗಿದೆ. ವಿಧಾನಸೌಧ ಆವರಣದಲ್ಲಿ ಬಸವಣ್ಣ, ಕೆಂಪೇಗೌಡ ಪುತ್ಥಳಿ ಸ್ಥಾಪಿಸಲಾಗುತ್ತಿದೆ. ಮುಂಬರುವ ಕಾರ್ಯಕ್ರಮಗಳಿಗೆ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಕೆಳದಿ ಚನ್ನಮ್ಮ ಮುಂತಾದ ವೀರನಾರಿಯರು, ಮೈಸೂರು, ವಿಜಯನಗರ ಅರಸರು, ಮದಕರಿ ನಾಯಕ, ಕೆಂಪೇಗೌಡ ಮುಂತಾದ ಕಲಿಗಳ ಹೆಸರುಗಳನ್ನು ಹೆಚ್ಚೆಚ್ಚು ಬಳಸುವ ಆಲೋಚನೆಯಲ್ಲಿದೆ.

    ಮುಂದೇನು ?

    • ಫೆ.24ರಿಂದ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 15 ದಿನ ಪ್ರಗತಿ ರಥ ಸಂಚರಿಸಲಿದೆ.
    • ಸರ್ಕಾರದ ಸಾಧನೆ ಸಾರುವ ಎಲ್​ಇಡಿ ಸ್ಕ್ರೀನ್​ವುಳ್ಳ 135 ವಾಹನಗಳು ಪ್ರಗತಿ ರಥಗಳಾಗಿದ್ದು, ಜನರೊಂದಿಗೆ ಬೆರೆತು ಬಿಜೆಪಿ ಬ್ರ್ಯಾಂಡಿಂಗ್​ ಮಾಡಲಾಗುತ್ತದೆ.
    • ಜಿಲ್ಲಾವಾರು ಫಲಾನುಭವಿಗಳ ಸಮಾವೇಶ, ಮೋರ್ಚಾಗಳ ಸಮ್ಮೇಳನಗಳು ನಡೆಯಲಿದ್ದು, ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶದೊಂದಿಗೆ ಚಾಲನೆ ಪಡೆದುಕೊಂಡಿದೆ.
    • ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯ ನಾಯಕರ ನೇತೃತ್ವದ ನಾಲ್ಕು ತಂಡಗಳ ರಥಯಾತ್ರೆ
    • ರಾಜ್ಯ ನಾಲ್ಕು ದಿಕ್ಕಿನಿಂದ ಮಾ.1ರಂದು ಏಕಕಾಲಕ್ಕೆ ರಥಯಾತ್ರೆ ಶುರುವಾಗಲಿದ್ದು, ಸರ್ಕಾರದ ಸಾಧನೆ ಬಗ್ಗೆ ಅಬ್ಬರದ ಪ್ರಚಾರ ಮತ್ತು ಜನಬಲ ಪ್ರದರ್ಶನ.

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts