More

    ಮೋದಿ, ಅಮಿತ್ ಷಾ, ಬಿಎಸ್​ವೈ ಸಂಯೋಜಿತ ಪ್ರಚಾರ ತಂತ್ರ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಲೋಕ ಅಖಾಡದಲ್ಲಿ ಜನರ ಮನ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ, ಯೋಗಿ ಆದಿತ್ಯನಾಥ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒಳಗೊಂಡ ಸಂಯೋಜಿತ ಪ್ರಚಾರ ತಂತ್ರವನ್ನು ಕಮಲಪಡೆ ಹೆಣೆದಿದೆ. ಮೊದಲ, 2ನೇ ಹಂತದ ಚುನಾವಣೆಗೆ ಪ್ರಚಾರಕ್ಕೆ ಲಭ್ಯವಾಗುವ ಅವಧಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಬಿಜೆಪಿ ಕಾರ್ಯಯೋಜನೆ ಸಿದ್ಧ ಮಾಡಿದ್ದು, ರಾಷ್ಟ್ರ ನಾಯಕರ ಕಾಲಾವಕಾಶ ಖಾತರಿಪಡಿಸಿಕೊಂಡು ಆಯಾ ಕ್ಷೇತ್ರಕ್ಕೆ ಗೊತ್ತುಪಡಿಸಲಿದೆ. ಮೋದಿ ಅವರ 2 ಸಭೆ ಈಗಾಗಲೆ ಆಗಿವೆ. ತಾತ್ಪೂರ್ತಿಕವಾಗಿ ನಿಗದಿಯಾದ ಪ್ರಕಾರ 2 ಹಂತಗಳಿಗೆ ಒಟ್ಟು ಎಂಟು ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಮೈಸೂರು ಭಾಗದಲ್ಲಿ ಮೋದಿ, ದೇವೇಗೌಡರ ಜಂಟಿ ಕಾರ್ಯಕ್ರಮ ಏರ್ಪಡಿಸುವ ಚಿಂತನೆ ನಡೆದಿದೆ.

    4 ತಂಡಗಳ ರಚನೆ: ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಷ್ಟ್ರ ನಾಯಕರ ನೇತೃತ್ವ ಸೇರಿ ಒಟ್ಟು 4 ತಂಡ ರಚನೆಯಾಗಲಿದ್ದು, ತಲಾ 5 ಪ್ರಮುಖರನ್ನು ಒಳಗೊಂಡಿರಲಿದೆ. ರಾಜ್ಯದಲ್ಲಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಪ್ರವಾಸ ಕಾರ್ಯಕ್ರಮಗಳಿದ್ದಾಗ ಯಡಿಯೂರಪ್ಪ ಜತೆಗಿರಲಿದ್ದಾರೆ. ವಿಜಯೇಂದ್ರ, ಆರ್.ಅಶೋಕ್ ಹಾಗೂ ರಾಷ್ಟ್ರ ನಾಯಕರ ತಂಡ ಬೇರೆಡೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಎರಡು ಹಂತಗಳಿಗೆ ಅಮಿತ್ ಷಾ ತಲಾ ಮೂರು, ಜೆ.ಪಿ.ನಡ್ಡಾ ಹಾಗೂ ಯೋಗಿ ಆದಿತ್ಯನಾಥ ತಲಾ ಎರಡು ದಿನಗಳ ಕಾಲಾವಕಾಶ ನೀಡಲಿದ್ದಾರೆ. 28 ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯಕ್ರಮ ಏಕಕಾಲಕ್ಕೆ ಜಾರಿಯಲ್ಲಿರಲಿದ್ದು, ಮೊದಲ ಹಂತಕ್ಕೆ ಶೇ.70, ಎರಡನೇ ಹಂತಕ್ಕೆ ಶೇ.30 ಚಟುವಟಿಕೆಗಳಿರಲಿವೆ ಎಂದು ಮೂಲಗಳು ವಿವರಿಸಿವೆ.

    70-80 ಚಟುವಟಿಕೆಗಳು: ಜನರ ಒಲವು ಗಿಟ್ಟಿಸಿಕೊಳ್ಳುವುದಕ್ಕಾಗಿ ಅಬ್ಬರ, ಜನಶಕ್ತಿ ಪ್ರದರ್ಶನ, ಜತೆಗೆ ನೇರ ಸಂಪರ್ಕ, ಮುಖಾಮುಖಿ ಚರ್ಚೆ ಒಳಗೊಂಡು ಪ್ರತಿ ಲೋಕಸಭೆ ಕ್ಷೇತ್ರದಲ್ಲಿ 70-80 ಪ್ರಚಾರ ಚಟುವಟಿಕೆಗಳು ನಡೆಯಲಿವೆ. ಸಾರ್ವಜನಿಕ ಸಭೆ, ಬೀದಿಬದಿ ಸಭೆ, ಗುಂಪು ಚರ್ಚೆ, ಫಲಾನುಭವಿಗಳ ಸಂಪರ್ಕ, ಗ್ರಾಮ ಚಲೋ ಅಭಿಯಾನ, ರೈತ ಪರಿಕ್ರಮ ಅಥವಾ ಗ್ರಾಮ ಪರಿಕ್ರಮ ಯಾತ್ರೆ ಮುಂತಾದ ಅಸ್ತ್ರಗಳು ಪ್ರಚಾರದ ಬತ್ತಳಿಕೆಯಲ್ಲಿದ್ದು, ಕೃತಕಬುದ್ಧಿಮತ್ತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನವೂ ಬಳಕೆಯಾಗಲಿದೆ. ಪ್ರತಿಯೊಂದು ಚಟುವಟುಕೆಗಳ ಮಾಹಿತಿ, ಫೋಟೋ ಸಹಿತ ದತ್ತಾಂಶಗಳು ನಮೋ ಆಪ್ ಮತ್ತು ಪಕ್ಷದ ಸರಳ್ ಆಪ್​ಗೆ ಪ್ರತಿದಿನ ಅಪ್​ಲೋಡ್ ಆಗಲಿದ್ದು, ಸಂಬಂಧಿಸಿದ ಉಸ್ತುವಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.

    ಅಭ್ಯರ್ಥಿಗಳ ಬೇಡಿಕೆಗೆ ಮನ್ನಣೆ: ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ ಬೇಡಿಕೆಗೆ ತಕ್ಕಂತೆ ರಾಜ್ಯ ಅಥವಾ ರಾಷ್ಟ್ರ ನಾಯಕರನ್ನು ಜೋಡಣೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ನಾಮಪತ್ರ ಸಲ್ಲಿಕೆಗೆ ಬಹಿರಂಗ ಸಭೆ ಇಲ್ಲವೇ ಮೆರವಣಿಗೆ ಅಥವಾ ಕಾಲ್ನಡಿಗೆ ಸ್ವರೂಪ ಯಾವುದು ಎಂದು ಅಭ್ಯರ್ಥಿಗಳು ತಿಳಿಸಿದರೆ ಬಯಸಿದ ನಾಯಕರ ಕಾಲಾವಕಾಶ ಪಡೆದು ಜೋಡಿಸುವ ತೀರ್ವನವಾಗಿದೆ ಎಂದು ಮೂಲಗಳು ಹೇಳಿವೆ.

    ಏ. 3ಕ್ಕೆ ಒಡೆಯರ್, 4ರಂದು ಡಾ.ಮಂಜುನಾಥ್ ನಾಮಪತ್ರ: ಏ.3ರಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ ಒಡೆಯರ್, ಏ.4ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಾ.ಸಿ.ಎನ್. ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕಾಲಕ್ಕೆ ಅಬ್ಬರ, ಹಾಲುಜೇನಿನಂಥ ಮೈತ್ರಿ ಬೆರೆತ ಸಂದೇಶದ ಜತೆಗೆ ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಅಲೆ ಎಬ್ಬಿಸುವ ಯೋಚನೆಯಿದೆ. ಈ ವೇಳೆ ಯಾವೆಲ್ಲ ನಾಯಕರು ಪಾಲ್ಗೊಳ್ಳಬೇಕು ಎನ್ನುವುದು ಅಂತಿಮವಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

    ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೇಂದ್ರ- ರಾಜ್ಯ ನಾಯಕರನ್ನು ಒಳಗೊಂಡು ನಾಲ್ಕು ಪ್ರಚಾರ ತಂಡಗಳನ್ನು ರಚಿಸಲಾಗುತ್ತಿದೆ. ಪ್ರಧಾನಿ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ, ಯೋಗಿ ಆದಿತ್ಯನಾಥ ಅವರ ಸಭೆಗಳಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇರಲಿದ್ದಾರೆ. ಪ್ರಚಾರ ಸಭೆಗಳ ದಿನಾಂಕ, ಸ್ಥಳಗಳು ಮುಂದಿನ ದಿನಗಳಲ್ಲಿ ಅಂತಿಮವಾಗಲಿವೆ.

    | ಪಿ.ರಾಜೀವ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ

    ಸಮರ್ಥ ಅಭ್ಯರ್ಥಿಗಳ ಕೊರತೆಯಿಂದ ಸಚಿವ-ಶಾಸಕರ ಕುಟುಂಬ ಸದಸ್ಯರು, ಸಂಬಂಧಿಕರನ್ನು ಕಾಂಗ್ರೆಸ್ ಸ್ಪರ್ಧೆಗೆ ಇಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನ, ಲಘು ಹೇಳಿಕೆಗಳನ್ನು ಗಮನಿಸಿದರೆ ಲೋಕಸಭೆ ಚುನಾವಣೆಗೆ ಮುಂಚೆ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. ಟಿಕೆಟ್ ವಂಚಿತರ ಅಸಮಾಧಾನ ಆದಷ್ಟು ಬೇಗ ಶಮನವಾಗಲಿದೆ.

    | ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts