More

    ಅತ್ಯಾಧುನಿಕ ಸಂಚಾರಿ ಸಿಗ್ನಲ್

    ಅವಿನ್ ಶೆಟ್ಟಿ ಉಡುಪಿ
    ಉಡುಪಿ ನಗರ ಮತ್ತು ಮಣಿಪಾಲದ 12 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಸಿಗ್ನಲ್ ಲೈಟ್ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ.
    ಗುಜರಾತ್‌ನ ಅಹಮದಬಾದ್‌ನಲ್ಲಿ ಈಗಾಗಲೇ ಯಶಸ್ವಿಯಾಗಿರುವ ‘ರಿಮೋಟ್ಲೀ ಮ್ಯಾನೇಜ್‌ಡ್ ಇಂಟಿಗ್ರೇಟೆಡ್ ಟ್ರಾಫಿಕ್ ಅಪ್‌ಡೆಟ್ ಡಿಸ್‌ಪ್ಲೇ ಸಿಸ್ಟಮ್’ ಎಂಬ ಸಂಚಾರಿ ವ್ಯವಸ್ಥೆ ಇಲ್ಲಿ ಅನುಷ್ಠಾನವಾಗಲಿದೆ. ವಿಶೇಷವಾಗಿ ಅಹಮದಾಬಾದ್‌ನಲ್ಲಿರುವುದಕ್ಕಿಂತ ತಾಂತ್ರಿಕವಾಗಿ ಮುಂದುವರಿದ ಅತ್ಯಾಧುನಿಕ ಸಂಚಾರ ವ್ಯವಸ್ಥೆ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗಿದ್ದು, ಮುಂಬೈ ಕೆ.ಸಿ. ಪವರ್ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್ ಎಂಬ ಏಜೆನ್ಸಿ ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಪಡೆದಿದ್ದು, ಅದನ್ನು ತಾಂತ್ರಿಕ ಕಮಿಟಿಯಲ್ಲಿ ಪ್ರಸ್ತಾಪಿಸಿ ಅನುಮೋದನೆ ಪಡೆಯಲಾಗಿದೆ. ಪ್ರಸಕ್ತ ಆರ್ಥಿಕ ಬಿಡ್ ತೆರೆಯಲಾಗಿದೆ. ಪ್ರತಿಯೊಂದು ಜಂಕ್ಷನ್‌ನ ಸಿಗ್ನಲ್ ಕಂಬ ನಿರ್ಮಾಣಕ್ಕೆ 30-37 ಲಕ್ಷ ರೂ. ತನಕ ಹಣ ವೆಚ್ಚವಾಗಲಿದ್ದು, ನಗರಸಭೆ ಇದಕ್ಕೆ ಅನುದಾನ ನೀಡುವುದಿಲ್ಲ, ಎಲ್ಲವೂ ಗುತ್ತಿಗೆ ಸಂಸ್ಥೆ ವತಿಯಿಂದಲೇ ನಡೆಯುತ್ತದೆ. ಇದರ ನಿರ್ವಹಣೆಯನ್ನು 15 ವರ್ಷ ಕಾಲ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಈ ವೆಚ್ಚವನ್ನು ಅವರೆ ಭರಿಸಬೇಕು. ಗುತ್ತಿಗೆ ಸಂಸ್ಥೆಯಿಂದ ನಗರಸಭೆ ಇಂತಿಷ್ಟು ಠೇವಣಿ ಇರಿಸಿಕೊಂಡಿದೆ.

    ಎಲ್ಲೆಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ?: ಟ್ರಾಫಿಕ್ ಸಮಸ್ಯೆ ಉಂಟು ಮಾಡುವ 12 ಸ್ಥಳಗಳನ್ನು ಗುರುತಿಸಲಾಗಿದ್ದು, ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಶಾಸಕರು ಸಭೆ ನಡೆಸಿ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಜೋಡುಕಟ್ಟೆ ಜಂಕ್ಷನ್(ಬಿಗ್ ಬಜಾರ್), ಬನ್ನಂಜೆ ಜಂಕ್ಷನ್(ನಾರಾಯಣಗುರು ಮಂದಿರ ಬಳಿ), ಕುಂಜಿಬೆಟ್ಟು ಎಂಜಿಎಂ ಕಾಲೇಜು ಜಂಕ್ಷನ್, ಕಲ್ಸಂಕ ಜಂಕ್ಷನ್, ಶಿರಿಬೀಡು ಜಂಕ್ಷನ್, ಕರಾವಳಿ ಜಂಕ್ಷನ್, ಅಂಬಾಗಿಲು ಜಂಕ್ಷನ್ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಸರ್ಕಲ್, ಟೈಗರ್ ಸರ್ಕಲ್, ಎಂಐಟಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.

    ರಾಜ್ಯದಲ್ಲೇ ಪ್ರಥಮ: ಬೆಂಗಳೂರಿನಲ್ಲಿ ಇದೇ ರೀತಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಸಿಗ್ನಲ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಉಡುಪಿಯಲ್ಲಿ ಎಲ್ಲ ಬಂಡವಾಳವನ್ನೂ ಏಜೆನ್ಸಿ ಹೂಡಲಿದೆ. ತಾವು ಹೂಡಿರುವ ಹಣ ಹಾಗೂ ನಿರ್ವಹಣೆಯ ಹಣವನ್ನು ಜಾಹೀರಾತು ಮೂಲಕ ಸಂಗ್ರಹಿಸಲಿದ್ದಾರೆ. ನಗರಸಭೆಗೂ ಇದರಿಂದ ಆದಾಯ ಬರಲಿದೆ. ಈ ಪ್ರಯೋಗ ರಾಜ್ಯದಲ್ಲೇ ಪ್ರಥಮ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಏಜೆನ್ಸಿಯವರು ಒಂದು ಜಂಕ್ಷನ್‌ನಿಂದ 20 ಸಾವಿರ ರೂ. ಹಣವನ್ನು ನಗರಸಭೆಗೆ ಪ್ರತಿ ತಿಂಗಳು ಪಾವತಿಸ ಬೇಕಾಗುತ್ತದೆ.

    ಸಿಗ್ನಲ್ ಕಂಬಗಳಲ್ಲಿ ಟಿವಿ!: ಸಿಗ್ನಲ್ ಕಂಬಗಳಲ್ಲಿ ಟಿವಿಯಂಥ ಡಿಸ್‌ಪ್ಲೇ ಆಳವಡಿಸಿ ಜಾಹೀರಾತು ಪ್ರಸಾರ ಮಾಡಲಾಗುತ್ತದೆ. ಸಿಗ್ನಲ್ ಸೂಚನೆಯಂತೆ ನಿಲ್ಲುವ ವಾಹನಗಳು, ಡಿಸ್‌ಪ್ಲೇಯಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ವೀಕ್ಷಿಸಬೇಕಾಗುತ್ತದೆ. ಕೇವಲ ವಾಣಿಜ್ಯ ಜಾಹೀರಾತು ಮಾತ್ರವಲ್ಲ, ಜಿಲ್ಲಾಡಳಿತ ಹಾಗೂ ನಗರಸಭೆ ಸೂಚಿಸುವ ಸಾರ್ವಜನಿಕ ಹಿತಾಸಕ್ತಿ ಜಾಹೀರಾತು, ಸಾರ್ವಜನಿಕ ಪ್ರಕಟಣೆಯನ್ನೂ ಪ್ರಸಾರ ಮಾಡಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ದೂರು, ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದರೆ, ಏಜೆನ್ಸಿ ಗುತ್ತಿಗೆ ರದ್ದುಪಡಿಸಲು ಅವಕಾಶವಿದೆ.

    ಉಡುಪಿ, ಮಣಿಪಾಲ ನಗರದಲ್ಲಿ ಹಳೆಯ ಸಿಗ್ನಲ್ ಕಂಬಗಳನ್ನು ತೆರವುಗೊಳಿಸಿ ಅತ್ಯಾಧುನಿಕ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ.
    ಮೋಹನ್‌ರಾಜ್ ಎಇಇ, ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts