More

    ಸಂಚಾರಿ ದಾಸೋಹಕ್ಕೆ ಚಾಲನೆ: ಚನ್ನಪಟ್ಟಣ ಕಾಂಗ್ರೆಸ್ ಘಟಕದಿಂದ ಯೋಜನೆ ನಿರ್ಗತಿಕರಿಗೆ ಆಹಾರ ಪೂರೈಕೆ

    ಚನ್ನಪಟ್ಟಣ : ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ತಾಲೂಕು ಕಾಂಗ್ರೆಸ್ ಘಟಕ ಮುಂದಾಗಿದ್ದು, ಸೋಮವಾರ ಪಕ್ಷದ ವತಿಯಿಂದ ನಗರದಲ್ಲಿ ಸಂಚಾರಿ ದಾಸೋಹಕ್ಕೆ ಚಾಲನೆ ನೀಡಲಾಯಿತು.
    ನಗರದ ಬಸ್ ನಿಲ್ದಾಣದ ಬಳಿ ಸಂಚಾರಿ ದಾಸೋಹಕ್ಕೆ ಕಾಂಗ್ರೆಸ್ ಮುಖಂಡರು ಚಾಲನೆ ನೀಡಿದರು. ಪ್ರತಿನಿತ್ಯ ಮಧ್ಯಾಹ್ನ ಪಕ್ಷದ ವತಿಯಿಂದ ವಾಹನದಲ್ಲಿ 300 ಮಂದಿಗೆ ಊಟ ಹಾಗೂ ನೀರು ನೀಡುವುದು ಪಕ್ಷದ ಉದ್ದೇಶವಾಗಿದೆ. ನಗರದಲ್ಲಿನ ನಿರ್ಗತಿಕರು, ಭಿಕ್ಷುಕರು, ಕೂಲಿ ಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ಊಟ ಮತ್ತು ನೀರು ನೀಡಲಾಗುತ್ತದೆ.

    ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಕಠಿಣ ಲಾಕ್‌ಡೌನ್‌ನಿಂದಾಗಿ ದಿನೇದಿನೆ ಬಡ ಹಾಗೂ ಮಧ್ಯಮ ವರ್ಗದವರ ಬದುಕು ದುಸ್ತರವಾಗುತ್ತಿದೆ. ಅದರಲ್ಲೂ ನಿರ್ಗತಿಕರು, ಭಿಕ್ಷುಕರು ಹಾಗೂ ಕೂಲಿ ಕಾರ್ಮಿಕರ ಜೀವನ ಅಯೋಮಯವಾಗಿದೆ. ಈಗಾಗಲೇ ಕೆಲವರು ಈ ವರ್ಗಕ್ಕೆ ಅನ್ನ ನೀರು ನೀಡುವ ಕೆಲಸ ನಡೆಸುತ್ತಿದ್ದಾರೆ. ಅದರಂತೆ ನಮ್ಮ ಪಕ್ಷದಿಂದಲೂ ಸಂಚಾರಿ ದಾಸೋಹ ಆರಂಭಿಸಿದೆ ಎಂದು ತಿಳಿಸಿದರು.

    ಪ್ರತಿನಿತ್ಯ ಒಂದೊಂದು ಪ್ರದೇಶದಲ್ಲಿ ವಾಹನದ ಮೂಲಕ ಊಟ ಮತ್ತು ನೀರು ನೀಡಲಾಗುತ್ತದೆ. ಅಗತ್ಯಸೇವೆಗಳನ್ನು ನೀಡಲು ನಗರಕ್ಕೆ ಆಗಮಿಸುವ ವಾಹನದ ಚಾಲಕರು ಹಾಗೂ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಊಟ ನೀಡಲಾಗುವುದು. ನಾಯಕರಾದ ಡಿ.ಕೆ. ಸಹೋದರರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
    ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುನೀಲ್‌ಕುಮಾರ್ ಮಾತನಾಡಿ, ತಾಲೂಕು ಕಾಂಗ್ರೆಸ್ ವತಿಯಿಂದ ಸೋಮವಾರದಿಂದ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ರಮ ರೂಪಿಸಿದ್ದೇವೆ. ಪರಿಸ್ಥಿತಿ ಆಯೋಮಯವಾಗುತ್ತಿರುವ ಈ ಸಂದರ್ಭದಲ್ಲಿ ದಾಸೋಹಗಳ ಅವಶ್ಯಕತೆ ಹೆಚ್ಚಾಗಿದೆ ಎಂದರು.

    ಪಕ್ಷದ ಮುಖಂಡರಾದ ಕೋಡಂಬಳ್ಳಿ ಶಿವಮಾದು ಮಾತನಾಡಿ, ಈಗಾಗಲೇ ನಮ್ಮ ನಾಯಕರು ಹೆಲ್ತ್ ಕಿಟ್ ನೀಡುತ್ತಿದ್ದಾರೆ. ಜೊತೆಗೆ, ಪ್ರತಿನಿತ್ಯ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸಕ್ರಿಯವಾಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಜನರೊಂದಿಗೆ ಇರುವ ಮೂಲಕ ತನ್ನ ಸಾಮಾಜಿಕ ಕಾಳಜಿಯನ್ನು ಮೆರೆಯುತ್ತಿದೆ. ಸಾರ್ವಜನಿಕರು ಯಾವುದಕ್ಕೂ ಎದೆಗುಂದದೆ ಇರಬೇಕು ಎಂದು ಮನವಿ ಮಾಡಿದರು.

    ಪಕ್ಷದ ಮುಖಂಡರಾದ ಪಿ.ಡಿ.ರಾಜು, ಮಂಗಳವಾರಪೇಟೆ ನಾಗೇಂದ್ರ, ಫರೀದ್‌ಖಾನ್ ಘೋರಿ, ಜಯಸ್ವಾಮಿ, ಯುವ ಮುಖಂಡರಾದ ಮತೀನ್, ಶಿವಕುಮಾರ್, ವಿವೇಕ್, ಶರತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts