More

    ಸರ್ಕಾರದ ಪ್ರೋತ್ಸಾಹ ಹಣ ಬಿಡುಗಡೆಗೆ ಶಾಸಕರು ಕ್ರಮ

    ಪಾಂಡವಪುರ: ಹಾಲು ಉತ್ಪಾದಕರಿಗೆ ಸರ್ಕಾರ ನೀಡುವ ಪ್ರೋತ್ಸಾಹ ಹಣ ಸ್ಥಗಿತವಾಗಿರುವ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಂದಿನ ಬಜೆಟ್ ಅಧಿವೇಶದಲ್ಲಿ ಸರ್ಕಾರದ ಗಮನ ಸೆಳೆದು ಹಣ ಬಿಡುಗಡೆಗೆ ಕ್ರಮ ವಹಿಸಲಿದ್ದಾರೆ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
    ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

    ರಾಜ್ಯದ 14 ಒಕ್ಕೂಟಗಳು ಕೋವಿಡ್ ಸಂದರ್ಭದಲ್ಲಿ ರೈತರಿಂದ ಹಾಲು ಖರೀದಿಸುವುದನ್ನು ಸ್ಥಗಿತಗೊಳಿಸಿದವು. ಆದರೆ ಮಂಡ್ಯ ಹಾಲು ಒಕ್ಕೂಟ ಒಂದು ದಿನವೂ ಹಾಲು ಖರೀದಿ ನಿಲ್ಲಿಸಲಿಲ್ಲ. ಸರ್ಕಾರ ಹಾಲಿನ ದರ 3 ರೂ. ಏರಿಕೆ ಮಾಡಿ ಆ ಹಣವನ್ನು ರೈತರಿಗೆ ನೀಡುವಂತೆ ಆದೇಶಿಸಿತ್ತು. ಮನ್‌ಮುಲ್‌ಗೆ ಪ್ರತಿನಿತ್ಯ 10 ಲಕ್ಷ ಲೀ. ಹಾಲು ಸರಬರಾಜಾಗುತ್ತಿದ್ದು, ಕೇವಲ 4 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. ಮಾರಾಟವಾಗದ ಪ್ರತಿ ಲೀಟರ್ ಹಾಲಿಗೂ ಕೂಡ ಸರ್ಕಾರದ ಆದೇಶದಂತೆ ಮೂರು ರೂಪಾಯಿ ಪಾವತಿಸಬೇಕು. ಇದರಿಂದ ಒಕ್ಕೂಟಕ್ಕೆ ಮಾಸಿಕವಾಗಿ 24 ಕೋಟಿ ರೂ. ಹೊರೆಯಾಗುತ್ತಿದೆ. ಆದರೆ ರೈತರಿಗೆ ಅನ್ಯಾಯವಾಗದಂತೆ ಒಕ್ಕೂಟ ಗಮನಹರಿಸಿದೆ ಎಂದರು.

    ಪಾಂಡವಪುರ ತಾಲೂಕು ಹಾಲಿನ ಗುಣಮಟ್ಟದಲ್ಲಿ ಕೊನೆ ಸ್ಥಾನದಲ್ಲಿತ್ತು. ನಾನು ನಿರ್ದೇಶಕನಾಗಿ ಚುನಾಯಿತನಾದ ಮೇಲೆ ಎರಡನೇ ಸ್ಥಾನಕ್ಕೆ ತಲುಪಿಸಿದ್ದೇನೆ. ರೈತರು ಶುದ್ಧ ಹಾಲು ಪೂರೈಸುವ ವಿಚಾರದಲ್ಲಿ ರಾಜಿಯಾಗದೆ ಗುಣಮಟ್ಟದ ಹಾಲು ಪೂರೈಸಿದರೆ ಡೇರಿಗಳ ಜತೆಗೆ ಒಕ್ಕೂಟವು ಬೆಳವಣಿಗೆ ಕಾಣುತ್ತದೆ. ನೂರು ಜನರಲ್ಲಿ ಒಬ್ಬರು ಕಳಪೆ ಹಾಲು ಪೂರೈಸಿದರೂ ಹಾಲಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗಲಿದ್ದು, ಇದರಿಂದ ಎಲ್ಲರಿಗೂ ನಷ್ಟವಾಗುತ್ತದೆ. ರೈತರು ರಾಸುಗಳನ್ನು ತಮ್ಮ ಮಕ್ಕಳಂತೆ ಕಾಣಬೇಕು. ಆಡಳಿತ ಮಂಡಳಿ ಮತ್ತು ಡೇರಿ ಕಾರ್ಯದರ್ಶಿ ಒಗ್ಗೂಡಿ ಕೆಲಸ ಮಾಡಿದರೆ ಸಂಘ ಲಾಭ ಕಾಣುತ್ತದೆ. ಇದಕ್ಕೆ ಬೇವಿನಕುಪ್ಪೆ ಡೇರಿ ಉದಾಹರಣೆಯಾಗಿದ್ದು, ಈ ಸಾಲಿನಲ್ಲಿ ಡೇರಿ 9.5 ಲಕ್ಷ ರೂ. ಲಾಭ ಗಳಿಸಿದೆ ಎಂದು ಪ್ರಶಂಸಿಸಿದರು.

    ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಹಕಾರ ಸಂಘಗಳನ್ನು ದೊಡ್ಡ ಮಟ್ಟದಲ್ಲಿ ಕಟ್ಟಬೇಕು. ಸಹಕಾರ ಸಂಘಗಳಲ್ಲಿ ರಾಜಕೀಯ ಇರಬಾರದು. ಚುನಾವಣೆ ಬಂದಾಗ ರಾಜಕಾರಣಿಗಳು ಬಂದು ಹೋಗುತ್ತಾರೆ. ಸಹಕಾರ ಕ್ಷೇತ್ರದ ಮೂಲಕ ಹಳ್ಳಿಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
    ಈ ವೇಳೆ ಡೇರಿ ಅಧ್ಯಕ್ಷೆ ಡಿ.ಜೆ.ಪೂಜಾ, ಮನ್‌ಮುಲ್ ಮಾರ್ಗ ವಿಸ್ತರಣಾಧಿಕಾರಿ ಜಗದೀಶ್, ಗ್ರಾಮಸ್ಥರಾದ ಇಂಜಿನಿಯರ್ ಯೋಗೇಶ್, ಪುಟ್ಟೇಗೌಡ, ಜಯರಾಮು, ಬಿ.ಎ.ನ್.ಅನಿಲ್, ಬಿ.ಕೆ.ಕುಮಾರ್, ನಿಂಗೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts