More

    ಹಾನಗಲ್ಲನಲ್ಲಿ ದುಸ್ಥಿತಿಗೆ ತಲುಪಿದ ಶಾಸಕರ ಮಾದರಿ ಶಾಲೆ, ಗಮನಹರಿಸಬೇಕಿದೆ ಶ್ರೀನಿವಾಸ ಮಾನೆ

    ಗಿರೀಶ ದೇಶಪಾಂಡೆ ಹಾನಗಲ್ಲ

    ಶತಮಾನ ಕಂಡಿರುವ ಪಟ್ಟಣದ ಶಾಸಕರ ಮಾದರಿ ಶಾಲೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. 420ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ, ಪ್ರವಚನ ಮಾಡುತ್ತಿರುವ ಈ ಶಾಲೆಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಮೂಲಸೌಲಭ್ಯ ಒದಗಿಸಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಮುಂದಾಗಬೇಕಿದೆ.

    ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ನೆಲದ ಮೇಲೆಯೇ ಕುಳಿತು ಪಾಠ ಕೇಳಿಬೇಕಿದೆ. ಇಲ್ಲಿ 1ರಿಂದ 4 ರವರೆಗೆ ಆಂಗ್ಲ ಮಾಧ್ಯಮ ಹಾಗೂ 1ರಿಂದ 8ನೇ ತರಗತಿ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಶಾಲೆಯ ಸುತ್ತಲಿನಲ್ಲಿ ಹಲವು ಸರ್ಕಾರಿ ವಸತಿ ನಿಲಯಗಳಿರುವುದರಿಂದ ಎಲ್ಲ ವಿದ್ಯಾರ್ಥಿಗಳೂ ಇದೇ ಶಾಲೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಸೇರಿ ಮಕ್ಕಳ ಸಂಖ್ಯೆಗನುಗುಣವಾಗಿ ಕನಿಷ್ಠ 15 ಕೊಠಡಿಗಳ ಅಗತ್ಯವಿದೆ. ಆದರೆ ಇಲ್ಲಿ ಮೂರು ಕೊಠಡಿಗಳು ಮಂಜೂರಾಗಿವೆ. ಮೊದಲಿನ 3 ಕೊಠಡಿ ಸೇರಿದಂತೆ ಒಟ್ಟು 6 ಕೊಠಡಿಗಳಿವೆ. ಇನ್ನೂ 10 ಕೊಠಡಿಗಳ ತುರ್ತು ಅಗತ್ಯವಿದೆ.

    ಗಾಳಿಗೆ ಹಾರಿದ ಛಾವಣಿ :

    ಇತ್ತೀಚೆಗಷ್ಟೇ ಶಾಲೆಯ ಛಾವಣಿಯಲ್ಲಿದ್ದ ಹೆಂಚುಗಳನ್ನೆಲ್ಲ ತೆಗೆದು, ನವೀಕರಣಗೊಳಿಸುವ ಭರದಲ್ಲಿ ತಗಡುಗಳನ್ನು ಹೊದಿಸಲಾಗಿತ್ತು. ಆದರೆ, ಕಾಮಗಾರಿಯ ವೈಫಲ್ಯದಿಂದಾಗಿ ತಗಡುಗಳು ಹಾರಿಬಿದ್ದಿವೆ. ಇತ್ತೀಚೆಗೆ ತಗಡುಗಳನ್ನು ತೆಗೆದು ಹಾಕಿ ಮತ್ತೆ ಹೆಂಚುಗಳನ್ನು ಹೊದಿಸಲು ಸರ್ಕಾರದಿಂದ 8 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ, ಬೇಸಿಗೆ ಅವಧಿಯಲ್ಲಿ ಶಾಲೆ ಆರಂಭಕ್ಕೂ ಮುನ್ನ ಕೈಗೊಳ್ಳಬೇಕಿದ್ದ ಕಾಮಗಾರಿಯನ್ನು ಇದುವರೆಗೂ ಆರಂಭಿಸಿಲ್ಲ. ಮೇ 29ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಶಾಲೆಯ ದುಸ್ಥಿತಿಯನ್ನು ಕಂಡು ಮಕ್ಕಳು ದಾಖಲಾಗಲು ಹಿಂಜರಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಮಕ್ಕಳ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಾಸಕರ ಮಾದರಿ ಶಾಲೆ ಇಂಥ ದಯನೀಯ ಸ್ಥಿತಿ ತಲುಪಿರುವುದು ವಿಪರ್ಯಾಸ.

    ಗಮನ ಹರಿಸಬೇಕಿದೆ ಶ್ರೀನಿವಾಸ ಮಾನೆ

    ಶಾಸಕರ ಮಾದರಿ ಶಾಲೆಯ ಕಾಯಕಲ್ಪಕ್ಕೆ ಸ್ಥಳೀಯ ಶಾಸಕ ಶ್ರೀನಿವಾಸ ಮಾನೆ ವಿಶೇಷ ಅನುದಾನ ತಂದರೆ ಮಾತ್ರ ಮಾದರಿ ಶಾಲೆಯಾಗಿ ಉಳಿಯಬಲ್ಲದು. ಕಳೆದ ವರ್ಷದ ಮಳೆಗಾಲದಲ್ಲಿ ಪಾಲಕರು ಶಾಲೆಯ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ ಕೈಗೊಂಡಾಗ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿದ್ದರು. ಸದ್ಯ ಬೇರೆ ಸರ್ಕಾರವಿರುವುದರಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಸಮುದಾಯದ ಸಹಭಾಗಿತ್ವ ಅಗತ್ಯವಿದೆ ಎಂದಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿರುವುದರಿಂದ ಮತ್ತು ಪಕ್ಕದ ತಾಲೂಕಾದ ಸೊರಬದ ಮಧು ಬಂಗಾರಪ್ಪ ಅವರೇ ಶಿಕ್ಷಣ ಸಚಿವರಾಗಿದ್ದು, ಶಾಸಕರು ಮುತವರ್ಜಿ ವಹಿಸಿ ಶಾಲೆಗೆ ಕಾಯಕಲ್ಪ ನೀಡಲು ಅನುದಾನ ತರಬೇಕಿದೆ ಎಂಬುದು ಪಾಲಕರ ಒತ್ತಾಸೆಯಾಗಿದೆ. ಈ ಶಾಲೆಯ ಸಮಗ್ರ ಅಭಿವೃದ್ಧಿ ಕನಸು ನನಸಾಗಬೇಕು ಎಂಬುದು ಹಾನಗಲ್ಲಿನ ಸಾರ್ವಜನಿಕರ ಆಶಯವಾಗಿದೆ.

    ಈಗಾಗಲೇ ಹೊಸದಾಗಿ ಮೂರು ಕೊಠಡಿಗಳು ಮಂಜೂರಾಗಿ ಕಾಮಗಾರಿ ಆರಂಭವಾಗಿದೆ. ಇನ್ನಷ್ಟು ಕೊಠಡಿಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಈಗ ಹೊಸ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿ 10 ಕೊಠಡಿಗಳ ನಿರ್ವಣಕ್ಕೆ ಅನುದಾನ ನೀಡಲು ಮನವಿ ಮಾಡಲಾಗುವುದು. ಸದ್ಯಕ್ಕೆ ಹಳೆಯ ಶಾಲೆಯನ್ನು ದುರಸ್ತಿಗೊಳಿಸಿ ಅಲ್ಲಿಯೇ ವರ್ಗಗಳನ್ನು ಮುಂದುವರಿಸಲಾಗುತ್ತದೆ.

    | ಆರ್.ಎನ್. ಹುರಳಿ, ಬಿಇಒ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts