More

    ಗಂಟು ಮೂಟೆಕಟ್ಟಿಕೊಂಡು ಹೊರಡಿ ; ಸಭೆಗೆ ಸಮರ್ಪಕ ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿಗಳಿಗೆ ಶಾಸಕ ವೆಂಕಟರವಣಪ್ಪ ಎಚ್ಚರಿಕೆ

    ಪಾವಗಡ : ಸಮರ್ಪಕ ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಶಾಸಕ ವೆಂಕಟರವಣಪ್ಪ ಗಂಟುಮೂಟೆ ಕಟ್ಟಿಕೊಂಡು ವರ್ಗಾವಣೆಯಾಗಿ ಹೋಗಿ ಎಂದು ತಾಲೂಕುಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಮಾಹಿತಿ ಆಲಿಸಿದರು. ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಹನುಮಂತರಾಯಪ್ಪ, ಜಿಪಂ ಮುಖ್ಯ ಇಂಜಿನಿಯರ್ ಸುರೇಶ್, ಲ್ಯಾಂಡ್ ಆರ್ಮಿ ಇಂಜಿನಿಯರ್ ಮಹದೇವಪ್ಪ ಇಲಾಖಾವಾರು ಅಂಕಿಅಂಶಗಳನ್ನು ವಿವರಿಸುವಾಗ ತಡಬಡಾಯಿಸಿ ಶಾಸಕರ ಕೆಂಗಣ್ಣಿಗೆ ಗುರಿಯಾದರು.

    ಸಮಾಜ ಕಲ್ಯಾಣ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಜಿಪಂ, ಬೆಸ್ಕಾಂ, ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರಿನ ವಿಭಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಹಲವು ಇಲಾಖಾಧಿಕಾರಿಗಳಿಗೂ ಶಾಸಕರು ಬೆವರಿಳಿಸಿದರು. ಸಭೆಯಲ್ಲಿ ಬೆಸ್ಕಾಂ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಶಾಸಕರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೊರೆಸಲಾದ 170 ಕೊಳವೆ ಬಾವಿಗಳಿಗೆ ಹಣ ಸಂದಾಯವಾಗಿಲ್ಲ ಎಂದು ಬೆಸ್ಕಾಂ ಅಧಿಕಾರಿ ತಿಳಿಸಿದಾಗ, ಇಲಾಖೆಯ ಇಂಜಿನಿಯರ್ ಚಿತ್ತಪ್ಪ ಅವರಿಗೆ ಕರೆಮಾಡಿ ಮಾಹಿತಿ ಪಡೆದು ಬೆಸ್ಕಾಂ ಅಧಿಕಾರಿ ಶ್ರೀಶೈಲಮೂರ್ತಿ ಅವರನ್ನು ತರಾಟೆಗೆ ತೆಗೆದುಗೊಂಡರು. ಜಿಪಂ ಉಪಕಾರ್ಯದರ್ಶಿ ಅತೀಕ್, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್, ಲೋಕೋಪಯೋಗಿ ಇಂಜಿನಿಯರ್ ಅನಿಲ್ ಕುಮಾರ್, ಕೃಷಿ ಅಧಿಕಾರಿ ವಿಜಯಾಮೂರ್ತಿ, ಬಿಸಿಎಂ ಅಧಿಕಾರಿ ವೇದಮೂರ್ತಿ, ಎ.ಡಿ.ರಂಗನಾಥ್ ಇತರರಿದ್ದರು.

    ಮಕ್ಕಳಿಗೆ ಅಕ್ಷರ ಕಲಿಸುವುದಾದರೂ ಹೇಗೆ ? : ಗರ್ಭಿಣಿ ಮತ್ತು ಬಾಣಂತಿಯರ ಮಾಹಿತಿ ಕೇಳಿದ ಶಾಸಕ ವೆಂಕಟರವಣಪ್ಪ, ಮಕ್ಕಳ ಸಂಖ್ಯೆ ಕೇಳಿದಾಗ ಇಲಾಖಾಧಿಕಾರಿ ನಾರಾಯಣ ಮಾಹಿತಿ ಇಲ್ಲ ಎಂದದ್ದು ಶಾಸಕರು ಮತ್ತಷ್ಟು ಸಿಟ್ಟಾಗಲು ಕಾರಣವಾಯಿತು. ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನಾಯ್ಕ ಅವರು ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಮರ್ಪಕ ಉತ್ತರ ನೀಡಲಿಲ್ಲ. ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವುದಿಲ್ಲ, ಗ್ರಾಮೀಣ ಶಾಲೆಗಳಿಗೆ ಆಂಧ್ರ್ರದ ಹಿಂದುಪುರ, ತುಮಕೂರು ಸೇರಿ ಇತರ ಪಟ್ಟಣಗಳಿಂದ ಶಿಕ್ಷಕರು ಶಾಲಾ ಕರ್ತವ್ಯಕ್ಕೆ ಬರುತ್ತಿದ್ದು, ಪಟ್ಟಣಕ್ಕೆ 11ಕ್ಕೆ ಬಂದು ಶಾಲೆಗಳಿಗೆ 12 ಗಂಟೆಯಾದರೂ ತೆರಳುತ್ತಿಲ್ಲ. ಅಲ್ಲಿನ ಶಾಲಾ ಮಕ್ಕಳಿಗೆ ಅಕ್ಷರ ಕಲಿಸುವುದಾದರೂ ಹೇಗೆ ಎಂದು ಬಿಇಒ ಅಶ್ವತ್ಥನಾರಾಯಣ ಮತ್ತು ಅಕ್ಷರದಾಸೋಹ ನಿರ್ದೇಶಕ ಹನುಮಂತರಾಯಪ್ಪ ಅವರನ್ನು ತರಾಟೆ ತೆಗೆದುಕೊಂಡರು.

    ಪಾವಗಡ ಬಿಟ್ಟು ತೊಲಗಿ: ಪಾವಗಡ ತಾಲೂಕಿನಾದ್ಯಂತ ಅಂತರ್ಜಲಮಟ್ಟ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲದಿರುವುದಕ್ಕೆ ಜಿಪಂ ಕಾರ್ಯಾಲಯದಿಂದ ಹೊಸ ಕೆರೆಗಳ ನಿರ್ಮಾಣ, ಕೆರೆಗಳ ಸಂರಕ್ಷಣೆ ನಡೆಯದಿರುವುದೇ ಕಾರಣ ಎಂದ ಶಾಸಕರು, ನಿರಂತರವಾಗಿ ನರೇಗಾದಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಒತ್ತು ನೀಡಬೇಕು. ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಮೊದಲು ಪಾವಗಡ ಬಿಟ್ಟು ತೊಲಗಿ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಗದರಿದರು. ಜಿಪಂ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ನರೇಗಾದಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಯಾವುದೇ ಮಿತಿ ಇಲ್ಲ. ಚೆಕ್ ಡ್ಯಾಂ, ಕೆರೆಗಳ ಅಭಿವೃದ್ಧಿ, ಗೋಕಟ್ಟೆ, ಕಾಲುವೆ, ಕೆರೆ ಹೂಳೆತ್ತುವುದು, ಪೀಡರ್ ಚಾನಲ್, ಹೊಸ ಕೆರೆಗಳ ಅಭಿವೃದ್ಧಿ, ಹೆಬ್ಬೇವು, ನುಗ್ಗೆ, ಬೆಳೆಯುವುದು ಸೇರಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲು 50 ಕೋಟಿ ರೂಪಾಯಿಯಾದರೂ ಅವಕಾಶವಿದೆ. ಹೀಗಾಗಿ ಕ್ರಿಯಾಯೋಜನೆ ತಯಾರಿಸಿ ಎಂದು ಇಒ ಶಿವರಾಜಯ್ಯಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts