More

    ಆಧ್ಯಾತ್ಮಿಕ ಚಿಂತನೆ ಅತ್ಯಗತ್ಯ: ಶಾಸಕ ಶಿವಶಂಕರರೆಡ್ಡಿ ಸಲಹೆ

    ತುಮಕೂರು: ಬದುಕಿನ ಜಂಜಾಟದಲ್ಲಿ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಸದ್ಗುರುವಿನ ಮಾರ್ಗದರ್ಶನದಲ್ಲಿ ಸಾಧನಾಪಥದಲ್ಲಿ ಮುನ್ನಡೆಯಬೇಕು. ಹಾಗಾಗಿ, ಆಧ್ಯಾತ್ಮಿಕ ಚಿಂತನೆ ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಅವಶ್ಯಕ ಎಂದು ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಹೇಳಿದರು.

    ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವ ಹಾಗೂ ಶ್ರೀಮಾತೆ ಶಾರದಾದೇವಿ 167ನೇ ಜನ್ಮದಿನೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜೀವಂತ ದುರ್ಗಾಪೂಜೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಧರ್ಮದ ಔಚಿತ್ಯವನ್ನು ಇಡೀ ಜಗತ್ತಿಗೆ ಸಾರಿದವರು ವಿವೇಕಾನಂದ. ಬದುಕಿನ ನಡುವೆ ಮಾನಸಿಕ ವಿಕಾಸ ಬಹುಮುಖ್ಯ. ಈ ಜಂಜಾಟದಲ್ಲಿ ನಮ್ಮನ್ನು ನಾವು ಮರೆತುಹೋಗುತ್ತೇವೆ. ಆಧ್ಯಾತ್ಮಿಕ ಚಿಂತನೆ, ಮಾನಸಿಕ ವಿಕಾಸ ಬಹಳ ಅಗತ್ಯ ಎಂದರು.

    ನಮ್ಮ ಸಂಸ್ಕೃತಿ, ಧರ್ಮ ಹಾಗೂ ದೈವತ್ವದ ಸಾಕ್ಷಾತ್ಕಾರ ಕುರಿತು ಸಾಮಾನ್ಯ ಜನರೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಮಾರ್ಗದರ್ಶನ ನೀಡಿದ ಮಹಾಪುರುಷರು ಶ್ರೀರಾಮಕೃಷ್ಣರು. ಸ್ವಾಮಿ ವಿವೇಕಾನಂದ ಜಗತ್ತಿಗೆ ಹಿಂದು ಸಂಸ್ಕೃತಿಯನ್ನು ಪರಿಚಯಿಸಿದ ಮಹಾನ್ ಚೇತನ ಎಂದು ಬಣ್ಣಿಸಿದ ಅವರು, ಕೇವಲ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡರೆ ಸಾಲದು. ಸಮಾಜದ ದೀನದಲಿತರ ದಾರಿದ್ರ್ಯ ಹೋಗಲಾಡಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಬಡಮಾತೆಯರ ಸೇವೆಯಲ್ಲಿ ಭಗವಂತನ ಪ್ರೀತಿಯನ್ನು ಕಾಣುವಂತಹ ಜೀವಂತ ದುರ್ಗಾಪೂಜೆ ಅತ್ಯಂತ ಮನಮುಟ್ಟುವಂತಹುದು ಎಂದರು.

    ವಿದ್ಯೆಯೇ ಪರಿಹಾರ: ವಿದ್ಯೆಯಿಂದ ಕಷ್ಟಗಳನ್ನು ಎದುರಿಸುವ ಶಕ್ತಿ ದೊರೆಯಲಿದೆ. ಪ್ರಾಥಮಿಕ ಹಂತದಿಂದ ಉತ್ತಮ ಶಿಕ್ಷಣ ನೀಡಿದರೆ ಪ್ರತಿಯೊಂದು ಕುಟುಂಬವೂ ಉನ್ನತಮಟ್ಟದ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಶಿವಣ್ಣ ಹೇಳಿದರು.

    ನಮ್ಮ ರಾಜ್ಯದ ಸಾಕ್ಷರತೆ ಪ್ರಮಾಣ ಶೇ.80 ಇದೆ. ದೇಶದಲ್ಲಿ 17ನೇ ಸ್ಥಾನದಲ್ಲಿ ನಮ್ಮ ರಾಜ್ಯವಿದೆ. ಶಿಕ್ಷಣದಿಂದ ಅಭಿವೃದ್ಧಿ ಕಾಣಬಹುದು. ಎಲ್ಲರಿಗೂ ಶಿಕ್ಷಣದ ಜತೆಗೆ ಮೌಲ್ಯಯುತ ಶಿಕ್ಷಣ ನೀಡಬೇಕಿದೆ. ಹಾಗಾಗಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಹಾಗೂ ಶಾರದಾದೇವಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಮಾಜದ ಪರಿಸ್ಥಿತಿ ಸುಧಾರಿಸಲಿದೆ ಎಂದರು.
    ಅಂತರಂಗದೊಳಗಿರುವ ಜೀವಾತ್ಮ ಜಾಗೃತನಾದಾಗ ಬುದ್ಧಿ ಮನಸ್ಸುಗಳು ಪ್ರಚೋದಿತವಾಗಿ ಆ ಬೆಳಕು ಮಾತು ಕೃತಿಗಳ ಮೂಲಕ ವ್ಯಕ್ತವಾಗಲಿದೆ ಎಂದು ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದಜೀ ಹೇಳಿದರು.

    ಶ್ರೀರಾಮಕೃಷ್ಣರು ಸ್ವಾಮಿ ವಿವೇಕಾನಂದರಿಗೆ ಕಣ್ಣು ಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣಬೇಕು. ನೀನು ದೊಡ್ಡ ಆಲದ ಮರವಾಗಿ ಸಾವಿರಾರು ಜನರಿಗೆ ಆಧಾರವಾಗಬೇಕು ಎಂದು ಆದೇಶಿಸಿದ್ದರು. ಅವರ ಆದೇಶದಂತೆ ಅನಂತ ಕರುಣೆ, ಅನಂತ ಪ್ರೀತಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದಲ್ಲಿ ಪೂರ್ಣರೂಪದಲ್ಲಿ ವ್ಯಕ್ತಗೊಂಡಿತ್ತು ಎಂದರು.

    ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ಧೀರಾನಂದಜೀ, ಸ್ವಾಮಿ ಪ್ರಣವಾನಂದಜೀ, ಬೆಂಗಳೂರಿನ ಜಿಡಿಎ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾ.ಅರ್ಚನಾ ಸುರಾನ, ಬೆಂಗಳೂರಿನ ಶ್ರೀರಾಮಕೃಷ್ಣ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾರಾಯಣ್, ಗೀತಾರಾವ್, ಸರಳಾ ಇದ್ದರು. ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಬ್ರಹ್ಮ ಕೃಷ್ಣಮೂರ್ತಿ ಹಾಗೂ ಸಂಗಡಿಗರು ವೇದಘೋಷ ನಡೆಸಿಕೊಟ್ಟರು. ರಮ್ಯಾ ವಿ. ಕಲ್ಲೂರ್ ನಿರೂಪಿಸಿ, ವಸಿಷ್ಠ ವಂದಿಸಿದರು.

    ಇಂದು ಶಿಕ್ಷಕರ ಸಮ್ಮೇಳನ: ಆಶ್ರಮದ ವಾರ್ಷಿಕೋತ್ಸವ ಅಂಗವಾಗಿ ಜ.25ರ ಬೆಳಗ್ಗೆ 10.30ಕ್ಕೆ ಜಿಲ್ಲೆಯ 1 ಸಾವಿರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಶಿಕ್ಷಕರ ಸಮ್ಮೇಳನ ಏರ್ಪಡಿಸಲಾಗಿದೆ. ಸ್ವಾಮಿ ಮಂಗಳನಾಥಾನಂದಜೀ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುವರು. ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು, ಪ್ರಾಧ್ಯಾಪಕಿ ಡಾ.ಅನಸೂಯ ವಿಶೇಷ ಉಪನ್ಯಾಸ ನೀಡುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಸಿ.ರಂಗಧಾಮಪ್ಪ ಭಾಗವಹಿಸುವರು.

    ಜೀವಂತ ದುರ್ಗಾಪೂಜೆ : ನಗರದ ಕೊಳೆಗೇರಿಗಳಲ್ಲಿ ವಾಸಿಸುವ, ರಸ್ತೆಯಲ್ಲಿ ಭಿಕ್ಷೆ ಬೇಡುವ 200 ಅಶಕ್ತ ತಾಯಂದಿರನ್ನು ಆಶ್ರಮಕ್ಕೆ ವೇದಘೋಷ, ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಅವರನ್ನು ಶಾರದಾದೇವಿ ಎಂದೇ ಪೂಜಿಸಿ ಅನ್ನದಾನ-ವಸ್ತ್ರದಾನ-ಧಾನ್ಯದಾನ ನೀಡಿ ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts