More

    ಸಮರ್ಪಕ ದಾಖಲೆ ಸಲ್ಲಿಸಿದರೆ ಕಡತಗಳ ವಿಲೇ ; ಕುಂದು ಕೊರತೆ ಸಭೆಯಲ್ಲಿ ಶಾಸಕಿ ರೂಪಕಲಾ ಭರವಸೆ

    ಕೆಜಿಎಫ್: ರೈತರು ಸಮರ್ಪಕ ದಾಖಲೆಗಳನ್ನು ಕ್ರೋಡೀಕರಿಸಿಕೊಂಡು ಫಾರ್ಮ್ 50, 53ರಡಿ ಅರ್ಜಿ ಸಲ್ಲಿಸಿದರೆ ಭೂ ಮಂಜೂರಾತಿ ಸಭೆಯಲ್ಲಿ ಎಲ್ಲ ಕಡತಗಳನ್ನು ವಿಲೇ ಮಾಡಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

    ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರೈತರು ಮತ್ತು ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ರೈತರು ಫಾರ್ಮ್ 50,53, 57ರಲ್ಲಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಕಡತಗಳನ್ನು ವಿಲೇ ಮಾಡದೆ ಕುಂಟು ನೆಪ ಹೇಳುತ್ತಿದ್ದಾರೆ. ರೈತರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಏಕೆ ವಿಫಲರಾಗುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

    ತಾತೇನಹಳ್ಳಿಯಲ್ಲಿ ಆಂಧ್ರ ಮೂಲದ ವ್ಯಕ್ತಿಗೆ ಅಧಿಕಾರಿಗಳು ಕಾನೂನು ಉಲ್ಲಂಸಿ ಸರ್ವೇ ನಂ.65ರಲ್ಲಿ 4 ಎಕರೆ ಭೂಮಿ ಮಂಜೂರು ಮಾಡಿದ್ದಾರೆ. ಅದರಲ್ಲಿ ಕೃಷ್ಣಪ್ಪ ಎಂಬ ವೃದ್ಧ ವ್ಯವಸಾಯ ಮಾಡುತ್ತಿದ್ದರು. ಹೀಗಾಗಿ ಒತ್ತುವರಿ ತೆರವು ಮಾಡಬೇಕು ಎಂದು ಜೀಡಮಾಕನಹಳ್ಳಿ ಗ್ರಾಮಸ್ಥ ಎಂ.ಬಿ.ಕೃಷ್ಣಪ್ಪ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಮತ್ತೊಮ್ಮೆ ಅಧಿಕಾರಿಗಳು ಸರ್ವೇ ನಡೆಸಿದ ನಂತರ ಭೂಮಿ ಯಾರಿಗೆ ಸೇರಿದ್ದು ಎಂಬ ಸತ್ಯ ಗೊತ್ತಾಗಲಿದೆ. ಎಂದರು.

    ರಾಬರ್ಟ್‌ಸನ್‌ಪೇಟೆ ಹೋಬಳಿ ವ್ಯಾಪ್ತಿಯ ಉರಿಗಾಂ ಕೆರೆಯಲ್ಲಿ ಮನೆಗಳ ನಿರ್ಮಾಣಕ್ಕೆ ಅಕ್ರಮವಾಗಿ ಭೂಮಿ ಒತ್ತುವರಿಯಾಗಿದೆ ಎಂಬ ಅಧಿಕಾರಿಗಳ ವರದಿ ಹಿನ್ನೆಲೆಯಲ್ಲಿ ಆತಂಕಗೊಂಡ 20 ಮನೆ ಮಾಲೀಕರು, ಕಳೆದ 30-40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಈಗ ಅಧಿಕಾರಿಗಳು ಒತ್ತುವರಿಯಾಗಿದೆ ಎಂದು ಹೇಳಿದರೆ ನಾವು ಎಲ್ಲಿಗೆ ಹೊಗಬೇಕು ಎಂದು ಅಳಲು ತೋಡಿಕೊಂಡಾಗ ಶಾಸಕಿ ಸ್ಪಂದಿಸಿ, 12 ವರ್ಷಗಳಿಗಿಂತ ಹೆಚ್ಚು ಸರ್ಕಾರದ ಜಮೀನಿನಲ್ಲಿ ವಾಸವಿದ್ದರೆ ಒಕ್ಕಲು ಎಬ್ಬಿಸುವಂತಿಲ್ಲ ಎಂಬ ಆದೇಶವಿರುವುದರಿಂದ ನಿವಾಸಿಗಳು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.

    ಸಭೆಯಲ್ಲಿ ಭೂ ಮಂಜೂರಿಗಾಗಿ ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿ ಕಡತ ಬಾಕಿ, ಜಮೀನು ಖಾತೆ ಪ್ರಕ್ರಿಯೆ ವಿಳಂಬ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಭೂಮಿ ನೀಡದ ರೈತರಿಗೆ ಪರಿಹಾರ ದೊರೆಯದಿರುವುದು ಮತ್ತಿತರ ಸಮಸ್ಯೆ ಆಲಿಸಲಾಯಿತು. ಎಂಎಜಿ ಅರ್ಜಿಯಡಿ 1 , ಎಸ್‌ಎಸ್‌ವೈ -4 (ಒತ್ತುವರಿ), ಎಂಸಿಆರ್-2, ಸಾಗುವಳಿ(ಎಲ್‌ಎನ್‌ಡಿ)-4, ಆರ್‌ಆರ್‌ಟಿ 16 ಅರ್ಜಿಗಳು ಹಾಗೂ ಎಂಎಸ್‌ಸಿ 1 ಅರ್ಜಿ ಸಲ್ಲಿಕೆಯಾಗಿತ್ತು. ಶಿರಸ್ತೇದಾರ ಶ್ರೀನಿವಾಸ್, ಕಂದಾಯ ಅಧಿಕಾರಿಗಳಾದ ರಘುರಾಮಸಿಂಗ್, ವಿ.ಎ.ವಿನೀತ್, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಕೃಷ್ಣಮೂರ್ತಿ ಮತ್ತಿತರರು ಇದ್ದರು.

    ಸಂಪ್ರದಾಯ ರಾಜಕೀಯ: ತಲೆ ತಲಾಂತರದಿಂದ ಆಚರಣೆಯಲ್ಲಿರುವ ಸಂಪ್ರದಾಯಗಳ ಬಗ್ಗೆ ವಿನಾಕಾರಣವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳು ಸಹಪಾಠಿಳೊಂದಿಗೆ ಸೌಹಾರ್ದತೆಯಿಂದ ಇರಬೇಕೇ ಹೊರತು ಇತರ ವಿಚಾರಗಳಲ್ಲಿ ತಲೆ ಹಾಕುವುದು ಬೇಡ ಎಂದು ಶಾಸಕಿ ರೂಪಕಲಾ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts