More

    ಮೈಷುಗರ್ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಪ್ರತಿ ಮನೆಯಿಂದಲೂ ಮಣ್ಣು ಸಂಗ್ರಹ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

    ಮಂಡ್ಯ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಅದರಂತೆ ಬಜೆಟ್‌ನಲ್ಲಿ 500 ಕೋಟಿ ರೂ ನೀಡುವ ಮೂಲಕ ನುಡಿದಂತೆ ನಡೆದಿರುವ ಸಿಎಂ ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
    ಮೈಷುಗರ್ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿ ಜತೆಗೆ ಬದುಕು ಆಗಿದೆ. ಅಯೋಧ್ಯೆಯಲ್ಲಿರುವ ರಾಮಮಂದಿರ, ಕಾಶಿಯಲ್ಲಿರುವ ವಿಶ್ವನಾಥ ಮಂದಿರದಂತೆ ನಮ್ಮ ಜಿಲ್ಲೆಗೆ ಮೈಷುಗರ್ ಕಾರ್ಖಾನೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಯತ್ನದ ಫಲವಾಗಿ ನಿರ್ಮಾಣವಾಗಿರುವ ಮೈಸೂರು ಸಕ್ಕರೆ ಕಾರ್ಖಾನೆಗೆ 100 ವರ್ಷದ ಇತಿಹಾಸವಿದೆ. ಇಂತಹ ಕಾರ್ಖಾನೆಗೆ ಹೊಸ ರೂಪ ಕೊಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಯೋಜನೆ ನೀಡಿದ್ದಾರೆ. ಇವರೆಲ್ಲರ ಇಚ್ಛಾಶಕ್ತಿಯಿಂದ ನೂತನ ಕಾರ್ಖಾನೆ ಸ್ಥಾಪನೆ ಆಗುತ್ತಿದ್ದು, ಶೀಘ್ರ ಭೂಮಿ ಪೂಜೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಾರ್ಖಾನೆಗೆಂದು ನಮ್ಮ ಸರ್ಕಾರ ಈಗಾಗಲೇ 50 ಕೋಟಿ ರೂ ನೀಡಿತ್ತು. ಈಗ ಮತ್ತೆ 25 ಕೋಟಿ ರೂ ಜತೆಗೆ ಒಟ್ಟು 75 ಕೋಟಿ ರೂಗಳನ್ನು ಕಾರ್ಖಾನೆಗೆ ನೀಡಿದಂತಾಗಿದೆ. ಬಜೆಟ್‌ನಲ್ಲಿ ಸರ್ಕಾರ ಹೊಸ ಕಾರ್ಖಾನೆಗೆ 100 ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದ್ದು, ಉಳಿದ 400 ಕೋಟಿ ರೂಗಳನ್ನು ಸರ್ಕಾರವೇ ಮುಂದೆ ನಿಂತು ಸಾಲ ಸೌಲಭ್ಯದ ಮೂಲಕ ಕೊಡಿಸಲಿದೆ. ಈ ಹಣದಲ್ಲಿ ಉತ್ತಮ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಲಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
    ನೂತನ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಾತನೂರು ಫಾರಂನಲ್ಲಿ ಜಾಗ ಗುರುತಿಸಲಾಗುವುದು. ಈಗಿರುವ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸ್‌ಟಾವೇರ್ ಪಾರ್ಕ್ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗದ ಅವಕಾಶಗಳು ದೊರಕಲಿವೆ. ಕಾರ್ಖಾನೆ ನಮಗೆ ರಾಮಮಂದಿರವಿದ್ದಂತೆ. ಎಲ್ಲರಿಗೂ ಕಾರ್ಖಾನೆ ನಮ್ಮದು ಎಂಬ ಭಾವನೆ ಮೂಡಿಸಲು ಪ್ರತಿ ಮನೆಯಿಂದ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ಕಾರ್ಖಾನೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.
    ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ನಗರಸಭಾ ಸದಸ್ಯ ಶ್ರೀಧರ್, ನಗರ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಜಿ.ಪಂ ಮಾಜಿ ಸದಸ್ಯ ಜಿ.ಸಿ.ಆನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts