More

    ರಾಗಿ ಖರೀದಿ ಆರಂಭ, ರಾಶಿ ಪೂಜೆ ನೆರವೇರಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ

    ದೇವನಹಳ್ಳಿ: ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲು ಹಾಗೂ ಬೆಂಬಲ ಬೆಲೆ ನೀಡಲು ರಾಗಿ ಖರೀದಿಸುವುದು ಸರ್ಕಾರ ಮಾಡಿರುವ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

    ಪಟ್ಟಣದ ಡಾ. ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯ ವಾಣಿಜ್ಯ ತೆರಿಗೆ ಕಚೇರಿಯ ಹಿಂಭಾಗದಲ್ಲಿರುವ ಸರ್ಕಾರಿ ಆಹಾರ ಉಗ್ರಾಣದಲ್ಲಿ ರಾಗಿ ಖರೀದಿ ಕೇಂದ್ರದ ಕಚೇರಿ ಉದ್ಘಾಟಿಸಿ ಮಾತನಾಡಿ, ಸರ್ಕಾರ ಈಗಾಗಲೇ ರೈತರಿಂದ ಪ್ರತಿ ಎಕರೆಗೆ ಹತ್ತು ಕ್ವಿಂಟಾಲ್​ನಂತೆ ರಾಗಿ ಖರೀದಿಸುವುದಾಗಿ ತಿಳಿಸಿದೆ. ಆದರೆ ಪ್ರತಿ ಎಕರೆಗೆ 15 ಕ್ವಿಂಟಾಲ್ ನಿಗದಿಪಡಿಸಿ ಖರೀದಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇಲ್ಲಿ ರೈತರಿಂದ ಅಧಿಕಾರಿಗಳು ರಾಗಿ ಖರೀದಿಸುವ ಪ್ರಕ್ರಿಯೆ ಪಾರದರ್ಶಕವಾಗಿರಲಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

    40-50 ವರ್ಷಗಳ ಹಿಂದೆ ನಮ್ಮ ಹಿರಿಯರು ರಾಗಿಯ ಜತೆಯಲ್ಲಿ ಇನ್ನಿತರೆ ಧಾನ್ಯ ಕಾಳುಗಳ ಮಿಶ್ರಬೆಳೆಯಾಗಿ ಬೆಳೆಯುತ್ತಿದ್ದರು. ಆಗ ಒಂದರಲ್ಲಿ ನಷ್ಟವಾದರೂ ಮತ್ತೊಂದರಲ್ಲಿ ಲಾಭವಾಗುತ್ತಿತ್ತು. ಹಾಗಾಗಿ ಈಗಲೂ ಸಹ ರಾಗಿಯ ಜತೆ ಇನ್ನಿತರೆ ಮಿಶ್ರಬೆಳೆ ಬೆಳೆಯುವಂತೆ ಸಲಹೆ ನೀಡಿದರು.

    ಜಿಪಂ ಸದಸ್ಯೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ರೈತರು ವರ್ಷಪೂರ್ತಿ ಶ್ರಮವಹಿಸಿ ಕಷ್ಟಪಟ್ಟು ಬೆಳೆದ ರಾಗಿಗೆ ಸರ್ಕಾರ ಬೆಂಬಲ ಬೆಲೆ ಘೂಷಿಸಿ ಖರೀದಿಗೆ ಮುಂದಾಗಿದೆ. ಇದೊಂದು ಪ್ರೋತ್ಸಾಹದಾಯಕ ಕಾರ್ಯಕ್ರಮ. ರೈತರ ಖಾತೆಗೆಗಳಿಗೆ ಹಣ ನೇರವಾಗಿ ಸಂದಾಯವಾಗಲಿದೆ. ಮದ್ಯವರ್ತಿಗಳ ಕಾಟ ಇರುವುದಿಲ್ಲ ಎಂದು ಹೇಳಿದರು.

    ಖರೀದಿ ಕೇಂದ್ರದ ಅಧಿಕಾರಿ ಚಿಕ್ಕಬಸವಯ್ಯ ಮಾತನಾಡಿ, ಕಳೆದ ವರ್ಷ 2,600 ನೋಂದಾಯಿತ ರೈತರಿಂದ 40 ಸಾವಿರ ಕ್ವಿಂಟಾಲ್ ರಾಗಿಯನ್ನು ಪ್ರತಿ ಕ್ವಿಂಟಾಲ್​ಗೆ 3,150 ರೂ. ನಂತೆ ಖರೀದಿಸಲಾಗಿತ್ತು. ಪ್ರಸ್ತುತ ವರ್ಷ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 3,295 ರೂ. ಮತ್ತು ಪ್ರತಿ ಚೀಲಕ್ಕೆ 22 ರೂ. ನಿಗದಿಪಡಿಸಿದೆ. ಈವರೆಗೆ 4,297 ರೈತರು ಆನ್​ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರದಿಂದ, 80,086 ಕ್ವಿಂಟಾಲ್ ರಾಗಿ ಸಂಗ್ರಹಣೆ ನಿರೀಕ್ಷಿಸಲಾಗಿದೆ. ಪ್ರತಿದಿನ ಸರಾಸರಿ ನೂರು ರೈತರಿಂದ ರಾಗಿ ಖರೀದಿಸಲಾಗುವುದು. ಈ ಪ್ರಕ್ರಿಯೆ ಮಾ.15ರವರೆಗೂ ಮುಂದುವರಿಯಲಿದೆ ಎಂದರು.

    ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಆರ್. ಮುನೇಗೌಡ, ಪುರಸಭೆ ಸದಸ್ಯ ಜಿ.ಎ. ರವೀಂದ್ರ, ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಕೆಎಫ್​ಸಿಯ ಡಿ.ಎಂ. ರಾಮಣ್ಣ, ರೈತ ಮುಖಂಡ ಅಪ್ಪಾಜಪ್ಪ, ಶಿರಸ್ತೇದಾರ ಶ್ರೀಧರ್, ಸಹಾಯಕ ಕೃಷಿ ನಿರ್ದೇಶಕಿ ವೀಣಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts