More

    ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಸಚಿವರ ತುರ್ತು ಸಭೆ ಶೀಘ್ರ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಹೇಳಿಕೆ

    ಗುಬ್ಬಿ : ತುಮಕೂರು ಜಿಲ್ಲೆಯ ಕೆಲಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಅಗತ್ಯ ಕ್ರಮವಹಿಸಬೇಕಿದೆ ಎಂಬ ದೂರು ಇರುವ ಕಾರಣ ಶೀಘ್ರದಲ್ಲಿ ಜಿಲ್ಲಾ ಸಚಿವರು ತುರ್ತು ಸಭೆ ಕರೆದು ಎಲ್ಲ ಶಾಸಕರಿಂದ ಅಭಿಪ್ರಾಯ ಕಲೆ ಹಾಕಲಿದ್ದಾರೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

    ಸಿ.ಎಸ್.ಪುರ ಹೋಬಳಿ ನಾರನಹಳ್ಳಿ ಗ್ರಾಮದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಗ್ರಾಮಗಳ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಗೆ ನೂತನವಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ಆಗಮನದ ನಂತರ ಇಡೀ ಇಲಾಖೆ ಚುರುಕಿನ ಕೆಲಸ ಮಾಡುತ್ತಿದೆ. ಆದರೆ ಸುವ್ಯವಸ್ಥೆ ವಿಚಾರದಲ್ಲಿ ಹೆಚ್ಚಿನ ಕ್ರಮಕ್ಕೆ ವಿಶೇಷ ತುರ್ತುಸಭೆಯನ್ನು ಮೂರ‌್ನಾಲ್ಕು ದಿನದಲ್ಲಿ ಜಿಲ್ಲಾ ಸಚಿವರು ನಡೆಸಲಿದ್ದಾರೆ ಎಂದರು.

    ಕುಣಿಗಲ್ ಗಡಿಭಾಗದ ಗ್ರಾಮಗಳ ಸಂಪರ್ಕ ರಸ್ತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಈ ಪೈಕಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನೆಟ್ಟೆಕೆರೆ ಚೀರನಹಳ್ಳಿ ಮಾರ್ಗ ಭಕ್ತರಹಳ್ಳಿ ರಸ್ತೆ ಅಭಿವೃದ್ಧಿ ಆರಂಭವಾಗಲಿದೆ. ಸಿ.ಎಸ್.ಪುರ ಹೋಬಳಿಯಲ್ಲಿ ಮುಖ್ಯ ರಸ್ತೆಯಿಂದ ಒಳಭಾಗದ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯ ಕೆಲಸ ಪೂರ್ಣಗೊಳ್ಳುತ್ತಿದೆ. ಮುಂದಿನ ಡಿಸೆಂಬರ್ ವೇಳೆಗೆ ಬಹುತೇಕ ಗ್ರಾಮಗಳ ರಸ್ತೆ ಸಿದ್ಧವಾಗಲಿದೆ ಎಂದ ಅವರು, ಹೇಮಾವತಿ ನೀರು ಸಹ ತುರುವೇಕೆರೆ ಕ್ಷೇತ್ರದ ಭಾಗಶಃ ಕೆರೆಗಳಿಗೆ ಹರಿಯುತ್ತಿದೆ. ಈ ಪೈಕಿ 20 ಕೆರೆಗಳು ಬಿದ್ದಿವೆ. ಸಿ.ಎಸ್.ಪುರ ಹೋಬಳಿಯಲ್ಲೂ ಇಡಗೂರು ಕೆರೆ ಭರ್ತಿ, ಮಾವಿನಹಳ್ಳಿ, ಸಿ.ಎಸ್.ಪುರ ಕೆರೆಗೂ ನೀರು ಹರಿಯುತ್ತಿದೆ ಎಂದರು.

    ಕರೊನಾ ಮೂರನೇ ಅಲೆಯ ಬಗ್ಗೆ ಅಗತ್ಯ ಕ್ರಮವನ್ನು ತುರುವೇಕೆರೆ ತಾಲೂಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ. 50 ಹಾಸಿಗೆಗೆ ಆಕ್ಸಿಜನ್ ನೀಡುವ ವಿಶೇಷ ಕೊಠಡಿ ಸಿದ್ಧವಾಗಿದೆ. ಈ ಜತೆಗೆ 250 ಮಂದಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡಲು ಅನುವು ಮಾಡಲಾಗಿದೆ. ದಾನಿಗಳ ಸಹಾಯದಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಎರಡು ಕಡೆ ಮಾಡಲಾಗುವುದು. ಈ ಜತೆಗೆ ಗುಬ್ಬಿಯಲ್ಲೂ ಪ್ಲಾಂಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ ಎಂದ ಶಾಸಕರು, ತಾಲೂಕಿನಲ್ಲಿ ಕರೊನಾ ವೈರಸ್ ಹರಡದಂತೆ ತಾಲೂಕು ಆಡಳಿತ ಜತೆ ನಿರಂತರ ಸಂಪರ್ಕದಲಿದ್ದು ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದರು.

    ಚೆಂಗಾವಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಹರಿನಾರಾಯಣ್, ಮುಖಂಡರಾದ ದಯಾನಂದ್, ಸತೀಶ್, ವಸಂತ್, ಕೃಷ್ಣಪ್ಪ, ದೇವರಾಜು, ಗೋವಿಂದರಾಜು, ಸದಾಶಿವು, ಮರಿಯಣ್ಣಗೌಡ, ಕಿರಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts