More

    ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

    ಮೈಸೂರು: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬುಧವಾರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಷ್ಕರದ ಬಿಸಿ ಜಿಲ್ಲೆಯ ಜನತೆಗೆ ಹೆಚ್ಚಾಗಿ ತಟ್ಟಲಿಲ್ಲ. ಅಲ್ಲದೆ, ರೈತ ಸಂಘ ಕರೆ ನೀಡಿದ್ದ ಗ್ರಾಮೀಣ ಬಂದ್ ಕೂಡ ಸಂಪೂರ್ಣ ವಿಫಲವಾಯಿತು.

    ಪ್ರಾರಂಭದಲ್ಲಿ ಮುಷ್ಕರಕ್ಕೆ ಕೆಎಸ್‌ಆರ್‌ಟಿಸಿ ನೌಕರರು ಬೆಂಬಲ ನೀಡಲು ನಿರ್ಧರಿಸಿದ್ದರು. ಆದರೆ, ಎಸ್ಮಾ ಜಾರಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಿದವು. ಬಸ್ ಸಂಚಾರ ಹಿನ್ನೆಲೆಯಲ್ಲಿ ಜನತೆಯ ಮೇಲೆ ಮುಷ್ಕರದ ಬಿಸಿ ತಟ್ಟಲಿಲ್ಲ.

    ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳ ಸಂಚಾರದಲ್ಲೂ ವ್ಯತ್ಯಯ ಕಂಡು ಬರಲಿಲ್ಲ. ಜಿಲ್ಲೆಯಲ್ಲಿ ಹೋಟೆಲ್, ಅಂಗಡಿಗಳು, ಪೆಟ್ರೋಲ್ ಬಂಕ್‌ಗಳ ವಹಿವಾಟು ಎಂದಿನಂತೆ ಇತ್ತು. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಂಗಳವಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ತೆರಳಿದರು.

    ಬ್ಯಾಂಕ್‌ಗಳು ಬಂದ್: ಎಸ್‌ಬಿಐ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹೊರತುಪಡಿಸಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳಾದ ಕೋಟಕ್ ಮಹೀಂದ್ರ, ಕರ್ಣಾಟಕ ಬ್ಯಾಂಕ್, ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಬಂದ್ ಆಗಿದ್ದವು.

    ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬ್ಯಾಂಕ್ ನೌಕರರು ದೊಡ್ಡ ಗಡಿಯಾರ ಬಳಿಯ ಕಾರ್ಪೋರೇಷನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲು ಮುಂದಾದರು. ಆದರೆ, ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಲಿಲ್ಲ. ನಂತರ ಬ್ಯಾಂಕ್ ನೌಕರರು ಟೌನ್‌ಹಾಲ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಕೈಗಾರಿಕೆಗಳು ಬಂದ್: ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರದ ಕೈಗಾರಿಕೆಗಳಿಗೆ ರಜೆ ನೀಡಲಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬೃಹತ್ ಸಮಾವೇಶ: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಸಿದರು.
    ಜೆಕೆ ಮೈದಾನದಿಂದ ಪುರಭವನ ಆವರಣದವರೆಗೆ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿದ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಐಇಎ, ಎಐಎಲ್‌ಐಸಿಇಎಫ್, ಎಐಬಿಇಎ, ಬಿಇಎಫ್‌ಐ, ಬಿಎಸ್‌ಎನ್‌ಎಲ್‌ಯು, ಎನ್‌ಎಫ್‌ಪಿಇ ಸಂಘಟನೆಗಳು ಪಾಲ್ಗೊಂಡಿದ್ದವು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಚ್.ಪಿ. ಶೇಷಾದ್ರಿ, ಅನಿಲ್ ಕುಮಾರ್, ನಾಗೇಶ್, ಸಂಧ್ಯಾ, ಬಾಲಕೃಷ್ಣ, ಪ್ಯಾಟ್ರಿಕ್, ಸೋಮರಾಜೇ ಅರಸ್, ಚಂದ್ರಶೇಖರ್ ಮೇಟಿ, ಯಶೋಧರ್ ಇತರರು ಪಾಲ್ಗೊಂಡಿದ್ದರು.

    ಬೆರಳೆಣಿಕೆಯಷ್ಟು ಕಾಂಗ್ರೆಸ್ ಕಾರ್ಯಕರ್ತರು: ಕಾರ್ಮಿಕರ ಮುಷ್ಕರ ಬೆಂಬಲಿಸಲು ಬುಧವಾರ ಬೆಳಗ್ಗೆ ದಿಢೀರಾಗಿ ನಿರ್ಧಾರ ಕೈಗೊಂಡ ಜಿಲ್ಲಾ ಕಾಂಗ್ರೆಸ್ ಮುಷ್ಕರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರಲು ವಿಫಲವಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್ ಹಾಗೂ ಇತರರು, ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸೇರಿಕೊಂಡರು.

    ಗ್ರಾಮೀಣ ಭಾಗಕ್ಕೆ ತಟ್ಟದ ಬಿಸಿ: ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ಸೂಚಿಸಿ ರೈತ ಸಂಘ ಕರೆ ನೀಡಿದ್ದ ಗ್ರಾಮೀಣ ಬಂದ್ ಕರೆಗೆ ರೈತರು ಹಾಗೂ ಜನರಿಂದ ಸ್ಪಂದನೆ ದೊರೆಯಲಿಲ್ಲ. ಬಂದ್ ಹಿನ್ನೆಲೆಯಲ್ಲಿ ನಗರಕ್ಕೆ ಹಾಲು, ಹಣ್ಣು, ತರಕಾರಿ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ರೈತ ಸಂಘ ತಿಳಿಸಿತ್ತು. ಆದರೆ, ನಗರಕ್ಕೆ ಎಂದಿನಂತೆ ಹಾಲು, ಹಣ್ಣು, ತರಕಾರಿ ಪೂರೈಕೆಯಾಯಿತು. ಹೀಗಾಗಿ ನಗರದ ಜನರ ಮೇಲೆ ಗ್ರಾಮೀಣ ಬಂದ್ ಬಿಸಿ ತಟ್ಟಲಿಲ್ಲ.


    ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರೆ ನೀಡಿದ್ದ ಮುಷ್ಕರ ಯಶಸ್ವಿಯಾಗಿದೆ. ಕೆಲವೆಡೆ ಸ್ವಯಂಪ್ರೇರಿತ ಬಂದ್ ಆಗಿದೆ. ಮುಷ್ಕರವನ್ನು ವಿಫಲಗೊಳಿಸಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿತು. ಆದರೂ ಕಾರ್ಮಿಕರ ಮುಷ್ಕರಕ್ಕೆ ಜನರು ಸಹ ಬೆಂಬಲ ಸೂಚಿಸಿ ಯಶಸ್ವಿಗೊಳಿಸಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಕಾರ್ಮಿಕ ವಿರೋಧಿ ನಿಲುವು ಅನುಸರಿಸುತ್ತಿದ್ದು, ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದೆ ಇದ್ದರೆ ತಕ್ಕ ಉತ್ತರ ನೀಡಲಾಗುವುದು.
    ಎಚ್.ಆರ್. ಶೇಷಾದ್ರಿ, ಪ್ರಧಾನ ಕಾರ್ಯದರ್ಶಿ, ಎಐಟಿಯುಸಿ

    ಬ್ಯಾಂಕ್ ನೌಕರರ ವಿರೋಧದ ನಡುವೆಯೂ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಖಾಸಗಿಯವರಿಗೆ ಮಾರಲು ಕೇಂದ್ರ ಸರ್ಕಾರ ಹೊರಟಿದೆ. ಅನುತ್ಪಾದಕ ಸಾಲಗಳ ವಸೂಲಾತಿಗೆ ಬಿಗಿಯಾದ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರ ತನ್ನ ಅಸಮರ್ಥತೆ ಮರೆಮಾಚಲು ಬ್ಯಾಂಕ್‌ಗಳ ವಿಲೀನದಂತಹ ಅವೈಜ್ಞಾನಿಕ ಕ್ರಮದ ಮೊರೆ ಹೋಗಿದೆ.
    ಎಚ್. ಬಾಲಕೃಷ್ಣ, ಕಾರ್ಯದರ್ಶಿ, ಜಿಲ್ಲಾ ಬ್ಯಾಂಕ್ ನೌಕರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts