More

    ರೈತನ ಕೈ ಹಿಡಿದ ಮಿಶ್ರಬೆಳೆ

    ರಾಣೆಬೆನ್ನೂರ: ಹತ್ತಿ, ಮೆಕ್ಕೆಜೋಳ ಬೆಳೆದು ನಷ್ಟ ಅನುಭವಿಸಿದ ರೈತರೊಬ್ಬರು ಇದೀಗ ಮಿಶ್ರ ಬೆಳೆ ಪದ್ಧತಿಯಲ್ಲಿ ಕೃಷಿ ಆರಂಭಿಸಿ ಎಲೆಕೋಸು, ಶೇಂಗಾ, ಪಪ್ಪಾಯಿ ಬೆಳೆದು ಲಕ್ಷಾಂತರ ರೂ. ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

    ತಾಲೂಕಿನ ಕಾಕೋಳ ಗ್ರಾಮದ ರೈತ ಭೀಮಪ್ಪ ಅಸುಂಡಿ ಎಂಬುವರು ತಮ್ಮ 2 ಎಕರೆ ಜಮೀನಿನಲ್ಲಿ ಈ ಹಿಂದೆ ಹತ್ತಿ ಹಾಗೂ ಮೆಕ್ಕೆಜೋಳ ಬೆಳೆಯುತ್ತಿದ್ದರು. ಎರಡೂ ಬೆಳೆ ಸೇರಿ ವರ್ಷಕ್ಕೆ 30ರಿಂದ 40 ಸಾವಿರ ರೂ. ಉಳಿಯುತ್ತಿತ್ತು. ಒಮ್ಮೊಮ್ಮೆ ಅತಿವೃಷ್ಟಿ, ಅನಾವೃಷ್ಟಿಯಿಂದ ಅದು ಕೂಡ ಬರುತ್ತಿರಲಿಲ್ಲ. ಹೀಗಾಗಿ ಬೇಸತ್ತು ಹೋಗಿದ್ದ ರೈತ ಭೀಮಪ್ಪ, ನಂತರ ಮಿಶ್ರ ಬೆಳೆ ಪದ್ಧತಿಯಲ್ಲಿ ಕೃಷಿ ಆರಂಭಿಸಿದರು.

    ನರೇಗಾದಡಿ ಸಹಾಯಧನ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಿಶ್ರ ಬೆಳೆ ಪದ್ಧತಿ ಕೃಷಿಗಾಗಿ ಭೀಮಪ್ಪ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ನರೇಗಾ ಯೋಜನೆಯಡಿ ಗ್ರಾಪಂನಿಂದ 1.24 ಲಕ್ಷ ರೂ. ಸಹಾಯಧನ ಪಡೆದು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ 2 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಗಳಾದ ಪಪ್ಪಾಯಿ, ಎಲೆಕೋಸು, ಶೇಂಗಾ ಬೆಳೆದರು.

    ಲಕ್ಷಾಂತರ ರೂ. ಲಾಭ: 6 ತಿಂಗಳ ಹಿಂದೆ ಪಪ್ಪಾಯಿ, ಎಲೆಕೋಸು, ಶೇಂಗಾ ಬೆಳೆದಿರುವ ರೈತ ಬೆಳೆಗಳಿಗೆ ಕುರಿಗೊಬ್ಬರ, ಸಗಣಿ ಗೊಬ್ಬರ ಹಾಕಿ ಸಂಪೂರ್ಣ ಸಾವಯವ ಮಾಡಿದ್ದಾರೆ. ಹೀಗಾಗಿ ಇಳುವರಿಯೂ ಉತ್ತಮವಾಗಿ ಬಂದಿದ್ದು, ಸದ್ಯ ಎಲೆಕೋಸು ಹಾಗೂ ಶೇಂಗಾ ಮಾರಾಟ ಮಾಡಿದ್ದಾರೆ. ಮೂರ್ನಾಲ್ಕು ತಿಂಗಳ ಬೆಳೆಯಾದ ಎಲೆಕೋಸು 15ರಿಂದ 20 ಟನ್ ಇಳುವರಿ ಬಂದಿದೆ. ಒಂಟು ಟನ್​ಗೆ 28ರಿಂದ 30 ಸಾವಿರ ದರದಲ್ಲಿ ಮಾರಾಟ ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಎಲೆಕೋಸು ಕೆ.ಜಿ.ಗೆ 25 ರೂ.ನಿಂದ 30 ರೂ. ದರವಿದೆ. ಹೀಗಾಗಿ ಎಲೆಕೋಸು ಉತ್ತಮ ಲಾಭ ತಂದಿದೆ. ಜತೆಗೆ ಶೇಂಗಾ ಕೂಡ ಉತ್ತಮ ಇಳುವರಿ ಬಂದಿದೆ. ಎರಡೂ ಬೆಳೆಗಳ ಮಾರಾಟದಿಂದ ಲಕ್ಷಾಂತರ ರೂ. ಆದಾಯ ಬಂದಿದೆ.

    ಪಪ್ಪಾಯಿ ಬೆಳೆ ಬರಲು ಇನ್ನೂ ಎರಡ್ಮೂರು ತಿಂಗಳು ಸಮಯವಿದ್ದು, 25 ಟನ್​ನಷ್ಟು ಇಳುವರಿ ಬರುವ ನಿರೀಕ್ಷೆಯಿದೆ. ಬೇಸಿಗೆ ಆರಂಭವಾಗುವ ಹಿನ್ನೆಲೆಯಲ್ಲಿ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲಿದೆ. ಹೀಗಾಗಿ ಉತ್ತಮ ಬೆಲೆ ದೊರೆಯುವ ವಿಶ್ವಾಸವಿದೆ ಎಂದು ರೈತ ಭೀಮಪ್ಪ ಅಸುಂಡಿ ತಿಳಿಸಿದ್ದಾರೆ.

    ನರೇಗಾ ಯೋಜನೆಯಡಿ ರೈತರು ಮಿಶ್ರ ಬೆಳೆ, ಸಾವಯವ ಕೃಷಿ, ತೋಟಗಾರಿಕೆ ಬೆಳೆ ಬೆಳೆಯಲು ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ. ಕಾಕೋಳದ ರೈತ ಭೀಮಪ್ಪ ಅಸುಂಡಿ ಕಡಿಮೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಅಧಿಕ ಆದಾಯ ಮಾಡಿಕೊಂಡಿದ್ದಾರೆ. ಆದ್ದರಿಂದ ಇತರ ರೈತರು ಸಹ ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.
    | ಟಿ.ಆರ್. ಮಲ್ಲಾಡದ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts