More

    ವೈವಾಹಿಕ ಸಮಸ್ಯೆಯಿಂದ ಪ್ರಮಾದ: ಆ ಕ್ಷಣ ಅಂಕಣ

    ವೈವಾಹಿಕ ಸಮಸ್ಯೆಯಿಂದ ಪ್ರಮಾದ: ಆ ಕ್ಷಣ ಅಂಕಣಎರಡು ವರ್ಷ ಹಿಂದೆ, 2021ರ ಒಂದು ದಿನ ಪೊಲೀಸ್ ಠಾಣೆಯೊಂದಕ್ಕೆ ಬಂದ ಒಬ್ಬ ವ್ಯಕ್ತಿ ಲಿಖಿತ ದೂರು ನೀಡಿದ. ಅದು ಹೀಗಿತ್ತು: ‘ನನಗೆ 48 ವರ್ಷ ವಯಸ್ಸು. 15 ವರ್ಷಗಳ ಹಿಂದೆ ಮಾತಾಪಿತರು ಸೂಚಿಸಿದಂತೆ ಇದೇ ಊರಿನ ಯುವತಿಯನ್ನು ಮದುವೆಯಾದೆ. ಸಂಸಾರ ಸುಖವಾಗಿ ಸಾಗಿ ನಮಗೆ ಮೂರು ಗಂಡು ಮಕ್ಕಳಾದರು. 9 ವರ್ಷಗಳ ಹಿಂದೆ ನನಗೆ ದುಬೈನಲ್ಲಿ ಕೆಲಸ ದೊರೆಯಿತು. ನಾನು ಕುಟುಂಬ ಸಮೇತ ಅಲ್ಲಿಗೆ ಹೋಗಬೇಕೆಂದು ಉದ್ದೇಶಿಸಿದೆ. ಆದರೆ, ಪತ್ನಿ ಅಲ್ಲಿಗೆ ಬರುವುದಿಲ್ಲವೆಂದು ಹಠ ಮಾಡಿದಳು. ಮಕ್ಕಳನ್ನು ಕರೆದೊಯ್ಯುವೆ ಎಂದಾಗ ಒಬ್ಬನನ್ನು ತನ್ನ ಜತೆಯಲ್ಲೇ ಬಿಡಬೇಕೆಂಬ ಷರತ್ತನ್ನು ಹಾಕಿದಳು. ಹೀಗಾಗಿ, ಮಧ್ಯದ ಮಗನನ್ನು ಅವಳೊಡನೆ ಬಿಟ್ಟು ಉಳಿದವರನ್ನು ನನ್ನ ಜೊತೆಗೆ ಕರೆದುಕೊಂಡು ದುಬೈನಲ್ಲಿ ವಾಸಿಸತೊಡಗಿದೆ. ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಆಯಾಳನ್ನು ಗೊತ್ತು ಮಾಡಿದೆ. ಪತ್ನಿ-ಮಗನ ಜೀವನಾಧಾರಕ್ಕಾಗಿ ಪ್ರತಿತಿಂಗಳೂ ಹಣವನ್ನು ಕಳಿಸುತ್ತಿದ್ದೆ. ಇದು ನನಗೆ ಹೊರೆಯಾದಾಗ ಪತ್ನಿಯನ್ನು ದೇಶಕ್ಕೆ ಬಂದು ನನ್ನೊಡನಿರಲು ಒತ್ತಾಯಿಸಿದೆ. ಆಕೆ ಒಪ್ಪಲಿಲ್ಲ. ನನಗೆ ಆಗ ಅವಳ ನಡತೆಯ ಮೇಲೆ ಸಂಶಯ ಬಂದಿತಾದರೂ ಯಾವುದೇ ಸಬೂತು ಸಿಗಲಿಲ್ಲ. ನಾನು ವರ್ಷಕ್ಕೊಮ್ಮೆ ಸ್ವದೇಶಕ್ಕೆ ವಾಪಸಾಗಿ ಕುಟುಂಬದೊಡನೆ ಸಮಯ ಕಳೆಯುತ್ತಿದ್ದೆ. ಅಂದಾಜು 6 ತಿಂಗಳ ಹಿಂದೆ ನಾನು ಮನೆಗೆ ಬಂದಾಗ ನನ್ನ ಬಲವಂತಕ್ಕೆ ಪತ್ನಿ ಎರಡನೆಯ ಮಗನನ್ನು ಸ್ವಲ್ಪ ಕಾಲ ನನ್ನ ಜೊತೆ ಇರಲು ಕಳುಹಿಸಿದಳು. ಅವನು ದುಬೈಗೆ ಬಂದಾಗಿನಿಂದ ತನ್ನ ಸೋದರರೊಂದಿಗೆ ಸರಿಯಾಗಿ ಬೆರೆಯದೇ ಮಂಕಾಗಿರುತ್ತಿದ್ದ. ಕಾರಣ ಕೇಳಿದರೆ ಹೇಳಲಿಲ್ಲ. ಅವನನ್ನು ಮನೋವೈದ್ಯರೊಬ್ಬರಿಗೆ ತೋರಿಸಿದೆ. ಅವರೊಡನೆ 12 ವರ್ಷದ ಆ ಬಾಲಕ ತಾಯಿ ತನಗೆ ಲೈಂಗಿಕ ಕಿರುಕುಳ ನೀಡುತ್ತಾಳೆ ಎಂದನಂತೆ. ಕಿರುಕುಳವೇನು ಎಂದು ವಿವರಿಸಲು ಕೋರಿದಾಗ ನಿದ್ರೆ ಬರುವ ಔಷಧಿ ಕುಡಿಸಿ ತನ್ನನ್ನು ಬೆತ್ತಲಾಗಿ ಮಾಡಿ, ಮರ್ವಂಗಕ್ಕೆ ಪೆಟ್ಟುಕೊಡುತ್ತಾಳೆ ಎಂದನಂತೆ. ಇದನ್ನು ಕೇಳಿ ಗಾಬರಿಯಾದ ನಾನು ಕೂಡಲೇ ಭಾರತಕ್ಕೆ ವಾಪಸ್ಸಾದೆ. ಹೆಂಡತಿಯನ್ನು ವಿಚಾರಿಸಿದಾಗ ಆಕೆ ಮಗ ಸುಳ್ಳು ಹೇಳುತ್ತಿದ್ದಾನೆ ಎಂದಳು. ಆದರೆ, ಅವಳ ಎದುರಿಗೇ ಮಗ ತಾನು ಹೇಳುತ್ತಿರುವುದು ಸತ್ಯ ಎಂದ. ಪತ್ನಿ ನನ್ನ ಕಡೆಯ ಮಗನನ್ನು ಲೈಂಗಿಕ ಶೋಷಣೆ ಮಾಡಿರುವ ಕಾರಣ ತಾವು ಕಾನೂನು ಕ್ರಮ ಜರುಗಿಸಲು ಕೋರುವೆ’.

    ಇದನ್ನು ಓದಿದ ಪೊಲೀಸ್ ಇನ್​ಸ್ಪೆಕ್ಟರ್ ಗಾಬರಿಯಾಗಿ, ‘ಇದೆಂತಹ ದೂರು? ಯಾವ ತಾಯಿ ತಾನೇ ತನ್ನ ಮಗನನ್ನು ಲೈಂಗಿಕ ಶೋಷಣೆ ಮಾಡಲು ಸಾಧ್ಯ? ನಿಮ್ಮ ದೂರು ಮೇಲ್ನೋಟಕ್ಕೇ ಸುಳ್ಳು ಎಂದು ತೋರುತ್ತಿದೆ. ಹೀಗಾಗಿ ಇದನ್ನು ತೆಗೆದುಕೊಳ್ಳಲು ಬರುವುದಿಲ್ಲ’ ಎಂದರು.

    ಇದನ್ನೂ ಓದಿ: ‘ನಾನಿನ್ನೂ ಸಕ್ರಿಯ, ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಅಂದ್ರು ಮಾಜಿ ಸಿಎಂ ಯಡಿಯೂರಪ್ಪ: ಅವರ ಮುಂದಿನ ಗುರಿ ಏನು?

    ಸುಮ್ಮನಾಗದ ದೂರುದಾರ, ‘ಪೋಕ್ಸೋ ಕಾನೂನಿನನ್ವಯ ನನ್ನ ದೂರನ್ನು ಸ್ವೀಕರಿಸಿ ಎಫ್​ಐಆರ್ ಮಾಡಬೇಕಾದದ್ದು ನಿಮ್ಮ ಕರ್ತವ್ಯ. ನೀವು ಒಂದು ವೇಳೆ ತೆಗೆದುಕೊಳ್ಳದಿದ್ದರೆ, ನಾನು ನ್ಯಾಯಾಲಯಕ್ಕೆ ಹೋಗಿ ದೂರನ್ನು ಕೊಡುತ್ತೇನೆ’ ಎಂದು ಬೆದರಿಸಿದ. ಆಗ ಠಾಣೆಯ ವಿಶೇಷ ಮಕ್ಕಳ ವಿಭಾಗದ ಮಹಿಳಾ ಎಚ್.ಸಿ, ‘ಸರ್, ಈ ಬಾಲಕನನ್ನು ನಾವು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸೋಣ, ಅವರ ತೀರ್ವನದಂತೆ ಮುಂದುವರಿಯೋಣ’ ಎಂದರು. ಅಂತೆಯೇ ಬಾಲಕನನ್ನು ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ಆ ಬಾಲಕ ತಾಯಿ ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಳೆಂದು ಅವರೆದುರೂ ಹೇಳಿದ. ಈ ವರದಿಯನ್ನು ಸಮಿತಿಯು ಪೊಲೀಸರಿಗೆ ರವಾನಿಸಿತು. ತತ್ಪರಿಣಾಮವಾಗಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಯಿತು.

    ಮುಂದಿನ ತನಿಖೆಯಲ್ಲಿ ಪೊಲೀಸರು ಬಾಲಕನ ತಾಯಿಯನ್ನು ಪ್ರಶ್ನಿಸಿದರು. ಆಕೆ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದು, ತನ್ನ ಗಂಡ ದುಬೈನಲ್ಲಿ ಬೇರೊಬ್ಬಳ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆ ಬಗ್ಗೆ ತಾನು ತಕರಾರು ತೆಗೆದು ಡಿವೋರ್ಸ್ ಕೊಡಲು ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದಳು. ಗಂಡನಿಂದ ತನಗೆ ಆಸ್ತಿಯ ಪಾಲನ್ನು ಮತ್ತು ಮಾಸಾಶನ ಕೊಡಿಸಲು ಕೋರಿರುವುದಾಗಿ ಆಕೆ ತಿಳಿಸಿದಳು. ಈ ಪ್ರಕರಣ ಹಿಂಪಡೆಯಲು ಹಾಗೂ ತನ್ನ ಜತೆಯಿದ್ದ ಮಗನನ್ನು ದುಬೈಗೆ ಕಳಿಸಲು ಗಂಡ ತನ್ನ ಮೇಲೆ ಒತ್ತಡವನ್ನು ಹೇರುತ್ತಿದ್ದನೆಂದು ಹೇಳಿದಳು. ತಾನು ಒಪ್ಪದಿದ್ದಾಗ ಬಾಲಕನನ್ನು ಉಪಯೋಗಿಸಿ ಸುಳ್ಳು ದೂರು ಕೊಡಿಸಿದ್ದಾನೆ ಎಂದಳು. ಸಂಬಂಧಪಟ್ಟ ಕಾಗದಪತ್ರಗಳನ್ನು ತನಿಖಾಧಿಕಾರಿಗೆ ತೋರಿಸಿದಳು. ಅವಳ ಮನೆಯನ್ನು ಶೋಧಿಸಿದಾಗ ಕೆಲವು ಮಾತ್ರೆಗಳು ದೊರೆತವು. ಆ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ಮಗನಿಗೆ ಕೆಲವು ಮಾನಸಿಕ ಸಮಸ್ಯೆಗಳಿದ್ದ ಕಾರಣ ಅವನ್ನು ಕೊಡಲಾಗುತ್ತಿತ್ತೆಂದಳು.

    ಆರೋಪಿಯ ಮೊಬೈಲ್​ಫೋನಿನಲ್ಲಿ್ಲ ಕೆಲವು ಸೆಕ್ಸ್ ವಿಡಿಯೋ ಕ್ಲಿಪ್​ಗಳಿದ್ದವು. ಆ ಬಗ್ಗೆ ಪ್ರಶ್ನಿಸಿದಾಗ ಆಕೆ ಮೌನಕ್ಕೆ ಶರಣಾದಳು. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಯಿತು. ಆದರೆ, ಅವನನ್ನು ಶೋಷಿಸಿದ ಬಗ್ಗೆ ಯಾವುದೇ ಕುರುಹು ಸಿಗಲಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

    ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ

    ಮಹಿಳೆಯ ಪರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿ ತಮ್ಮ ಕಕ್ಷಿದಾರಳ ಪತಿ ಪರಸ್ತ್ರೀಯರ ಜತೆ ಅನೈತಿಕ ಸಂಬಂಧವನ್ನಿರಿಸಿಕೊಂಡಿದ್ದ ಕಾರಣ ಆಕೆಯ ವೈವಾಹಿಕ ಜೀವನದಲ್ಲಿ ಒಡಕಿತ್ತು. ಮೂರನೆಯ ಮಗ ಜನಿಸಿದ ನಂತರವೂ ತಿದ್ದಿಕೊಳ್ಳದೇ ಹೋದಾಗ ಆಕೆ ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಇದರಿಂದ ಕೋಪಗೊಂಡ ಆತ ದುಬೈಗೆ ಹೋಗಿ ಕೆಲಸಕ್ಕೆ ಸೇರಿಕೊಂಡ. ತನ್ನ ಎಲ್ಲ ಮಕ್ಕಳನ್ನೂ ತನ್ನೊಡನೆ ಅಲ್ಲಿಗೆ ಕರೆದೊಯ್ದು ಪತ್ನಿಯನ್ನು ಬಿಟ್ಟುಬಿಡುವುದೇ ಅವನ ಉದ್ದೇಶವಾಗಿತ್ತು. ಆದರೆ, ತಮ್ಮ ಕಕ್ಷಿದಾರಳು ಎರಡನೆಯ ಮಗನನ್ನು ಬಿಟ್ಟುಕೊಡಲಿಲ್ಲ. ಒಂದು ದಿನ ಆತ ಭಾರತಕ್ಕೆ ಬಂದು ಬಲವಂತವಾಗಿ ಮಗನನ್ನು ತನ್ನೊಡನೆ ಕರೆದೊಯ್ದು, ಅನಂತರ ನ್ಯಾಯಾಲಯಕ್ಕೆ ಕೊಟ್ಟ ಅರ್ಜಿಯನ್ನು ಹಿಂಪಡೆಯಲು ತನ್ನ ಕಕ್ಷಿದಾರಳಿಗೆ ಒತ್ತಡ ಹೇರಿದ. ಆಕೆ ಒಪ್ಪದಿದ್ದಾಗ ಮಗನ ಮೂಲಕ ಸುಳ್ಳು ಪ್ರಕರಣ ದಾಖಲಿಸಿದ್ದಾನೆ ಎಂದರು. ಇದಲ್ಲದೆ, ಪತ್ನಿ ಜೀವಂತವಿದ್ದಾಗಲೇ ಆತ ಇನ್ನೊಂದು ಮದುವೆ ಆಗಿರುವುದರಿಂದ ಅವನ ಮೇಲೆ ಪ್ರಕರಣ ದಾಖಲಿಸಬೇಕೆಂದು ಕೋರಿದರು.

    ಈ ಅರ್ಜಿಯನ್ನು ವಿಚಾರಣೆ ಮಾಡಿದ ಉಚ್ಛ ನ್ಯಾಯಾಲಯವು ಆರೋಪಿಯನ್ನು ತಕ್ಷಣ ಬಿಡುಗಡೆ ಮಾಡಿ ಮಹಿಳಾ ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತಂಡವು ಮುಂದಿನ ತನಿಖೆಯನ್ನು ನಡೆಸಬೇಕೆಂದು ಆದೇಶಿಸಿತು. ಈ ತಂಡವು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರನ್ನು ಪ್ರಶ್ನಿಸಿದಾಗ, ಅವರು ತಮ್ಮ ಮುಂದೆ ಬಾಲಕ ಏನು ಹೇಳಿದನೋ ಅದನ್ನಷ್ಟೇ ವರದಿಯಲ್ಲಿ ಬರೆದು ಪೊಲೀಸರಿಗೆ ಕಳುಹಿಸಿರುವುದಾಗಿ ತಿಳಿಸಿ ಬಾಲಕನ ಹೇಳಿಕೆ ನಿಜವೋ, ಸುಳ್ಳೋ ತಮಗೆ ತಿಳಿಯದು ಎಂದರು.

    ಅನಂತರ ಪೊಲೀಸರು ದೂರುದಾರನ ಹಿರಿಯ ಮಗನನ್ನು ಆಪ್ತಸಲಹೆಗಾರರ ಎದುರೇ ಪ್ರಶ್ನಿಸಿದರು. ಆತ ತನಗೆ 15 ವರ್ಷ ವಯಸ್ಸಾಗಿದೆಯೆಂದು ತಿಳಿಸಿ ಹೀಗೆಂದ: ‘ಕಳೆದ 10 ವರ್ಷಗಳಿಂದ ನನ್ನ ಮಾತಾಪಿತರ ನಡುವೆ ವಿರಸವಿದೆ. ತಂದೆ ದುಬೈನಲ್ಲಿ ಹಲವಾರು ವರ್ಷಗಳಿಂದ ಇನ್ನೊಬ್ಬ ಸ್ತ್ರೀಯ ಜತೆ ಸಂಬಂಧ ಹೊಂದಿದ್ದಾರೆ. ನನ್ನ ತಾಯಿಯನ್ನು ತೊರೆದು ಆಕೆಯನ್ನು ಮದುವೆಯಾಗಲು ಅವರು ಪ್ರಯತ್ನಿಸುತ್ತಿದ್ದಾರೆ. ತಾಯಿಯು ತಂದೆಯ ವಿರುದ್ಧ ವಿಚ್ಛೇದನ ಕೇಸು ದಾಖಲು ಮಾಡಿದ್ದರಿಂದ ಕೋಪಗೊಂಡ ಅವರು ಅಮ್ಮನಿಗೆ ಬುದ್ಧಿ ಕಲಿಸಬೇಕೆಂದು ಮಾತನಾಡಿಕೊಳ್ಳುತ್ತಿದ್ದನ್ನು ನಾನು ಕೇಳಿದ್ದೇನೆ. ತಂದೆ ನನ್ನ ತಮ್ಮನನ್ನು ದುಬೈಗೆ ಕರೆಸಿಕೊಂಡ ನಂತರ ಅವನಿಗೆ, ನಿನ್ನ ತಾಯಿ ನಿನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದಳು ಎಂದು ದೂರು ನೀಡಲು ಪದೇಪದೆ ಹೇಳಿಕೊಡುತ್ತಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಅವನಿಗೆ ದೂರನ್ನು ಹೇಗೆ ನೀಡಬೇಕೆಂದು ಬಾಯಿಪಾಠ ಮಾಡಿಸಿ ಪೊಲೀಸರು ಮತ್ತು ಅಧಿಕಾರಿಗಳ ಮುಂದೆ ಹೀಗೆಯೇ ಹೇಳಬೇಕು ಎಂದು ತಾಕೀತು ಮಾಡುತ್ತಿದ್ದರು. ನನ್ನ ತಮ್ಮ ಹೇಳುತ್ತಿರುವುದೆಲ್ಲ ಸುಳ್ಳು’.

    ಆಗ ತನಿಖಾ ತಂಡವು ದೂರು ನೀಡಿದ ಬಾಲಕನನ್ನು ಕರೆದು ವಿಚಾರಿಸಿತು. ಆಗ ಆತ ತಾನು ಹೇಳಿದ್ದು ಸುಳ್ಳು, ತಂದೆಯ ಪ್ರಚೋದನೆಯಿಂದ ಹೀಗೆ ಮಾಡಬೇಕಾಯಿತು ಎಂದ.

    ಮತ್ತೊಮ್ಮೆ ಆ ಬಾಲಕನನ್ನು ಬಾಲ ಕಲ್ಯಾಣ ಸಮಿತಿಯ ಮುಂದೆ ಹಾಜರು ಮಾಡಲಾಯಿತು. ಅಲ್ಲಿಯೂ ಆತ ತಾನು ಈ ಹಿಂದೆ ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡ. ಮುಂದಿನ ಪೊಲೀಸ್ ತನಿಖೆಯಲ್ಲಿ ಬಾಲಕ ಸೇವಿಸುತ್ತಿದ್ದ ಮಾತ್ರೆಗಳ ಬಗ್ಗೆ ವಿಚಾರಿಸಿದಾಗ ಅವು ನಿದ್ರೆ ಬರಿಸುವ ಮಾತ್ರೆಗಳೆಂದು ತಿಳಿಯಿತು. 12 ವರ್ಷದ ಬಾಲಕನಿಗೆ ಈ ಮಾತ್ರೆಗಳನ್ನು ಕೊಡುತ್ತಿದ್ದ ಕಾರಣವನ್ನು ಕೇಳಿದಾಗ ಅವನ ತಾಯಿ ಯಾವ ಉತ್ತರವನ್ನೂ ನೀಡಲಿಲ್ಲ. ‘ಯಾವ ಕಾರಣ ಹೇಳಿ ನಿನ್ನಮ್ಮ ನಿನಗೆ ಈ ಮಾತ್ರೆಗಳನ್ನು ಕೊಡುತ್ತಿದ್ದಳು’ ಎಂದು ವಿಚಾರಿಸಿದಾಗ ಆ ಬಾಲಕ ಅವು ದೈಹಿಕ ಬೆಳವಣಿಗೆಗೆ ಕೊಡುವ ಮಾತ್ರೆಗಳೆಂದು ತಾಯಿ ಹೇಳಿದಳೆಂದು ತಿಳಿಸಿದ. ಮುಂದೆ ಆಕೆಯ ಸೆಲ್ ಫೋನ್ ರೆಕಾರ್ಡಗಳ ಮೂಲಕ ಹೆಚ್ಚಿನ ವಿಚಾರಣೆ ಮಾಡಿದಾಗ ಬೇರೊಬ್ಬ ವ್ಯಕ್ತಿಯೊಡನೆ ಆಕೆ ಅನೈತಿಕ ಸಂಬಂಧವನ್ನಿಟ್ಟುಕೊಂಡ ವಿಷಯ ಬೆಳಕಿಗೆ ಬಂದಿತು. ತನ್ನ ಗುಟ್ಟು ಮಗನಿಗೆ ತಿಳಿಯಬಾರದೆಂದು ಆಕೆ ಈ ಮಾತ್ರೆಗಳನ್ನು ಕೊಟ್ಟಿರಬಹುದೆಂದು ಊಹಿಸಿದ ಪೊಲೀಸರು ಪೋಕ್ಸೋ ಪ್ರಕರಣವನ್ನು ತಪ್ಪು ಕಲ್ಪನೆಯ ಪ್ರಕರಣವೆಂದು ಮುಕ್ತಾಯ ಮಾಡಿ, ದೂರುದಾರನ ವಿರುದ್ಧ ಸುಳ್ಳು ಕೇಸನ್ನು ಕೊಟ್ಟ ಪ್ರಕರಣವನ್ನು ದಾಖಲಿಸಿದರು.

    ‘ತನ್ನ ತಪ್ಪುಗಳಿಗಾಗಿ ಸ್ತ್ರೀಯನ್ನು ಹೊಣೆಗಾರಳಾಗಿ ಮಾಡುವ ಪುರುಷನ ಸಾಮರ್ಥ್ಯವನ್ನು ಕಡೆಗಣಿಸದಿರು’ ಎಂದ ಗಾಯಕಿ ರಿಹನ್ನಾಳ ಮಾತು ಎಷ್ಟು ನಿಜವಲ್ಲವೇ?

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    18 ವರ್ಷ ತುಂಬಿದವರಿಗೆಂದೇ ಬಿಬಿಎಂಪಿಯಿಂದ ಜಾಗೃತಿ ಅಭಿಯಾನ: ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts