More

    ಅವ್ಯವಹಾರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳು

    ಹರಿಹರ: ತಾಲೂಕಿನ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಆಧರಿಸಿ ಕರ್ನಾಟಕ ಲೋಕಾಯುಕ್ತ ತನಿಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

    ಲೋಕಾಯುಕ್ತ ತನಿಖಾಧಿಕಾರಿಗಳಾದ ಜೆ. ಮಹೇಶ್ ಮಂಗಳವಾರ ಬೆಳಗ್ಗೆ ಬೆಸ್ಕಾಂ ವಿಭಾಗಿಯ ಕಚೇರಿಗೆ ಬಂದು ಕಾರ್ಯನಿರ್ವಾಹಕ ಇಂಜಿನಿಯರ್ ಪಿ. ವಿನಯ್‌ಕುಮಾರ್ ಅವರಿಂದ 2015 ರಿಂದ 18 ನೇ ಸಾಲಿನ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿಯ ಮಾಹಿತಿ ಸಂಗ್ರಹಿಸಿದರು.

    ಲೋಕಾಯುಕ್ತ ತಂಡವು ತಾಲೂಕಿನ ಹಲಸಬಾಳು, ಹರಗನಹಳ್ಳಿ, ರಾಜನಹಳ್ಳಿ, ಬಿಳಸನೂರು, ನಂದಿಗಾವಿ ಮತ್ತು ಧೂಳೆಹೊಳೆ ಗ್ರಾಮಗಳಲ್ಲಿರುವ 31 ಮಾರ್ಗಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ಅವ್ಯವಹಾರದ ಬಗ್ಗೆ ಪರಿಶೀಲನೆ ಮಾಡಿದರು.

    ಈ ವೇಳೆ ಮಾತನಾಡಿದ ತನಿಖಾಧಿಕಾರಿ ಜೆ. ಮಹೇಶ್, ಜು.25 ಮತ್ತು 26 ಎರಡು ದಿನ ಇಲ್ಲಿನ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು. ಈ ದೂರಿನ ವಿಚಾರಣೆಯು ಆ. 8 ರಂದು ಲೋಕಾಯುಕ್ತ ಕೋರ್ಟ್‌ನಲ್ಲಿ ನಡೆಯಲಿದ್ದು, ಅಷ್ಟರೊಳಗೆ ತನಿಖಾ ವರದಿ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.

    ಸ್ಥಳದಲ್ಲಿದ್ದ ದೂರುದಾರ ರೈತ ಮುಖಂಡ ಬೇವಿನಹಳ್ಳಿ ಮಹೇಶ್ ಮಾತನಾಡಿ, ತಾಲೂಕಿನ 31 ಮಾರ್ಗಗಳಲ್ಲಿ ಒಟ್ಟು 1035 ವಿದ್ಯುತ್ ಕಂಬ ಅಳವಡಿಸಬೇಕಿತ್ತು. ಆದರೆ, ಅಧಿಕಾರಿಗಳು ಕೇವಲ 435 ಕಂಬ ಅಳವಡಿಸಿರುವುದಲ್ಲದೆ ಒಂದು ಕಿಮೀ.ಗೆ ಮಾತ್ರ ಕೇಬಲ್ ವೈರ್ ಅಳವಡಿಸಿ ಉಳಿದ 63 ಕಿಮೀ.ಗೆ ವೈರ್ ಅಳವಡಿಸದೆ ಗುತ್ತಿಗೆದಾರರಿಗೆ ಸಂಪೂರ್ಣ ಬಿಲ್ ಮಾಡಲಾಗಿತ್ತು. ಹಾಗಾಗಿ, ಇದರಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಅನುಮಾನದ ಮೇರೆಗೆ ನಾನು ದೂರು ಸಲ್ಲಿಸಿದ್ದೆ ಎಂದು ಮಾಹಿತಿ ನೀಡಿದರು.

    ಹರಿಹರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ನಾಯಕ್, ಕ್ವಾಲಿಟಿ ವಿಭಾಗದ ಅಧಿಕಾರಿ ಮಮತಾ, ಕಾಮಗಾರಿ ವಿಭಾಗದ ಅಧಿಕಾರಿ ನಾಗರತ್ನಮ್ಮ, ಅಧಿಕಾರಿಗಳಾದ ಬಸವರಾಜಪ್ಪ, ಉಮೇಶ್, ರಾಮಚಂದ್ರ, ರೈತ ಸಂಘದ ಮಲ್ಲಪ್ಪರ ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts