More

    ಪವಾಡ ಪುರುಷ ಬಾಲಲೀಲಾ ಮಹಾಂತ ಶಿವಯೋಗಿ

    ಮುಳಗುಂದ: ಬಾಲಲೀಲಾ ಮಹಾಂತ ಶಿವಯೋಗಿಗಳು 18ನೇ ಶತಮಾನದಲ್ಲಿ ನಾಡಿನ ಮನೆ ಮಾತಾಗಿದ್ದರು. ಶ್ರೀಗಳು ಜನಿಸಿದ್ದು ವಿಜಯಪುರ ಜಿಲ್ಲೆಯ ಯರನಾಳದಲ್ಲಿ. ತಂದೆ, ತಾಯಿಯರ ಅಕಾಲಿಕ ಮರಣದಿಂದಾಗಿ ಆಲಮಟ್ಟಿಯ ಚನ್ನಮಲ್ಲಿಕಾರ್ಜುನ ಹಾಗೂ ಅನ್ನಪೂರ್ಣಾಂಬೆ ದಂಪತಿ ಶಿವಯೋಗಿಗಳ ಪಾಲನೆ, ಪೋಷಣೆ ಮಾಡಿದರು. ಬಾಲಲೀಲಾ ಮಹಾಂತ ಶಿವಯೋಗಿಗಳು ತಮ್ಮ 8ನೇ ವಯಸ್ಸಿನಲ್ಲಿಯೇ ದೇಶ ಪರ್ಯಟನೆಗೆ ಹೊರಟುನಿಂತರು. ಮಹಾಂತಲಿಂಗ ದೇಶಿಕವರೇಣ್ಯ ಗುರುಗಳಲ್ಲಿ ವಿದ್ಯೆ ಪಡೆದರು. ನಂತರ ಮುಳಗುಂದ ಪಟ್ಟಣಕ್ಕೆ ಬಂದು ನೆಲೆಸಿದರು.

    ದೇಶ ಸಂಚಾರದಲ್ಲಿ ಇದ್ದ ಬಾಲಲೀಲಾ ಮಹಾಂತ ಶಿವಯೋಗಿಗಳು ಮೈಸೂರಿಗೆ ಬಂದಾಗ ಮುಮ್ಮಡಿ ಕೃಷ್ಣರಾಜ ಒಡೆಯರು ವಾಸಿಯಾಗಲಾರದ ರೋಗದಿಂದ ಬಳಲುತ್ತಿದ್ದರು. ಆಗ, ಮಹಾಂತ ಶಿವಯೋಗಿಗಳು ತಮ್ಮ ಬಳಿ ಇದ್ದ ತೀರ್ಥ-ಪ್ರಸಾದ ನೀಡಿ ರೋಗ ವಾಸಿ ಮಾಡಿದ್ದರು. ಆಗ ಮಹಾರಾಜರು ಶ್ರೀಗಳಿಗೆ ಜಮೀನು, ವಜ್ರ, ವೈಢೂರ್ಯ ನೀಡಿ ಸತ್ಕರಿಸಲು ಬಂದರು. ಆಗ ಅದನ್ನು ತಿರಸ್ಕರಿಸಿದ ಶ್ರೀಗಳು ವೈರಾಗ್ಯದ ಪ್ರತೀಕವಾಗಿ ಕುಂಬಳೆಸೊರಟೆ (ಬುರುಡೆ) ಯನ್ನು ಕೇಳಿ ಪಡೆದುಕೊಂಡಿದ್ದರು.

    ಯಳವತ್ತಿ ಗ್ರಾಮದ ಮಹಿಳೆಯೊಬ್ಬರು ಸಂತಾನವಿಲ್ಲದೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಅವರಿಗೆ ಸಂತಾನ ಪ್ರಾಪ್ತಿಯಾಗುವಂತೆ ಬಾಲಲೀಲಾ ಮಹಾಂತ ಶಿವಯೋಗಿಗಳು ಆಶೀರ್ವದಿಸಿದ್ದರು. ಒಮ್ಮೆ ಭಕ್ತನೊಬ್ಬ ಪ್ರಸಾದ ಸ್ವೀಕರಿಸುವಾಗ ರೊಟ್ಟಿಯ ತಟ್ಟೆ ಖಾಲಿಯಾಯಿತು. ಆಗ ಶ್ರೀಗಳು ತಮ್ಮ ಧ್ಯಾನ ಶಕ್ತಿಯಿಂದ ತಟ್ಟೆ ತುಂಬಿಸಿದ್ದರು. ನಂತರ ಶಿವಶರಣೆ ಪಟ್ಟಣದ ಫಿರಂಗಿ ಬಸವಾಂಬೆ ತನ್ನ ಮಕ್ಕಳು ಅಕಾಲಿಕ ಮರಣಕ್ಕೆ ತುತ್ತಾದಾಗ ಅವಳಿಗೆ ಸಾಂತ್ವನ ಹೇಳಿ, ತಾವೇ ಮಗುವಾಗಿ ಅವಳ ತೊಡೆ ಮೇಲೆ ಆಡಿದರು. ಅದರ ಪ್ರತೀಕವಾಗಿಯೇ ಇಂದಿಗೂ ಜಾತ್ರೆಯ ಮೊದಲ ದಿನ ಶಿವಯೋಗಿಗಳ ಭಾವಚಿತ್ರವನ್ನು ತೊಟ್ಟಲಲ್ಲಿ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಅನೇಕ ಪವಾಡಗಳನ್ನು ಮಾಡಿದ ಶ್ರೀಗಳು ಸಾಹಿತ್ಯದ ಕಡೆಗೆ ಒಲವು ಪಡೆದು ಅನುಭಾವದ ಪ್ರತೀಕವಾಗಿ ‘ಕೈವಲ್ಯದರ್ಪಣ’ ಎಂಬ ಅಮೂಲ್ಯ ಗ್ರಂಥ ರಚಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts