More

    ಮಹೇಶ್ ಕುಮಠಳ್ಳಿಗೆ ಮಂತ್ರಿಗಿರಿ ಯಾಕಿಲ್ಲ?

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮೊದಲು ಬಂಡಾಯದ ಬಾವುಟ ಹಾರಿಸಿದ್ದು ನಾನು, ಮಹೇಶ್ ಕುಮಠಳ್ಳಿ ಹಾಗೂ ಪ್ರತಾಪಗೌಡ ಪಾಟೀಲ್, ಅಂತಹದರಲ್ಲಿ ಈಗ ಕುಮಠಳ್ಳಿಗೆ ಅನ್ಯಾಯ ಮಾಡಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎದುರು ರಮೇಶ್ ಜಾರಕಿಹೊಳಿ ಗರಂ ಆಗಿದ್ದಾರೆ. ಭಾನುವಾರ ಸಿಎಂ ಭೇಟಿ ಮಾಡಿದ್ದ ಜಾರಕಿಹೊಳಿ, ಡಿಸಿಎಂ ಸವದಿಗಾಗಿ ಕುಮಠಳ್ಳಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ, ಅವರನ್ನು ಮಂತ್ರಿ ಮಾಡಲೇಬೇಕು ಎಂದು ಒತ್ತಡ ಹಾಕಿದ್ದಾರೆ. ಚುನಾವಣೆಗೆ ಮುನ್ನ ಎಲ್ಲ 17 ಜನರಿಗೂ ಮಂತ್ರಿ ಮಾಡುವುದಾಗಿ ಹೇಳಿದವರು ಈಗ 10 ಜನರಿಗೆ ಮಾತ್ರ ಎನ್ನುತ್ತಿದ್ದೀರಿ, ಅದು ಸರಿಯಲ್ಲ ಎಂದು ಗಟ್ಟಿ ದನಿಯಲ್ಲಿಯೇ ಕೇಳಿದ್ದಾರೆ. ಕುಮಠಳ್ಳಿಯನ್ನು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದಾಗ, ಸವದಿಗಾಗಿ ಬಲಿ ಕೊಡಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸವದಿಗಾಗಿ ಅಲ್ಲ, ನಾನು ಕೇಳುತ್ತಿದ್ದೇನೆ ಅಂತ ಪ್ರಯತ್ನ ಮಾಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಜಾರಕಿಹೊಳಿ ಒಪ್ಪಿಲ್ಲ.

    ಬಾಲಚಂದ್ರ ಜತೆ ಚರ್ಚೆ: ಸೋಮವಾರ ಬಾಲಚಂದ್ರ ಜಾರಕಿಹೊಳಿ ಜತೆ ಚರ್ಚೆ ಮಾಡಿದ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿ ಮನವೊಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ನೀವೆಲ್ಲ ಹೇಳಿದ್ದೇನು, ಈಗ ಮಾಡುತ್ತಿರುವುದೇನು, ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಸಿಎಂ ಜತೆ ಮಾತನಾಡಿ, ಕುಮಠಳ್ಳಿ ಮಂತ್ರಿಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಸಿಎಂ ಜತೆ ಚರ್ಚೆ ನಡೆಸುವ ಭರವಸೆ ನೀಡಿರುವ ಬಾಲಚಂದ್ರ, ಪರಿಸ್ಥಿತಿ ಕಷ್ಟವಿದೆ. ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿ ನನಗೆ ಅನ್ಯಾಯ ಮಾಡದೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುತ್ತಾರೆಂಬ ವಿಶ್ವಾಸವಿದೆ. ನಾನಂತೂ ಹೆಚ್ಚು ಒತ್ತಡ ಹಾಕದೆ ಬಿ.ಎಸ್. ಯಡಿಯೂರಪ್ಪ ಅವರನ್ನು ನಂಬಿದ್ದೇನೆ.
    | ಮಹೇಶ್ ಕುಮಠಳ್ಳಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts