More

    ಕನಕಪುರ ವೈದ್ಯ ಕಾಲೇಜು ಸ್ಥಾಪನೆ ಬಗ್ಗೆ ಸಚಿವರಿಂದಲೇ ತದ್ವಿರುದ್ಧ ಹೇಳಿಕೆ

    ರಾಮನಗರ: ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಿಫ್ಟ್ ಆಗಿದ್ದು ಹಳೇ ವಿಚಾರ. ಆದರೆ, ಇದೀಗ ಮೆಡಿಕಲ್ ಕಾಲೇಜು ಕನಕಪುರಕ್ಕೆ ಮಂಜೂರು ಮಾಡುವ ವಿಚಾರದಲ್ಲಿ ಸರ್ಕಾರದ ಸಚಿವರು ಹಾಗೂ ಡಿಸಿಎಂ ತದ್ವಿರುದ್ದ ಹೇಳಿಕೆ ನೀಡುವ ಮೂಲಕ ದೊಡ್ಡ ಗೊಂದಲ ಸೃಷ್ಟಿ ಮಾಡಿದ್ದಾರೆ.

    ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಳ್ಳುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತಮ್ಮ ಪ್ರಭಾವ ಬಳಸಿದ್ದ ಸಚಿವ ಸುಧಾಕರ್ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದರು. ಈ ವಿಚಾರದಲ್ಲಿ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡರೆ, ಡಿ.ಕೆ.ಶಿವಕುಮಾರ್ ಸಹೋದರರು ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದರು. ಆದರೂ ಅಂತಿಮವಾಗಿ ಕಾಲೇಜು ಕನಕಪುರಕ್ಕೆ ಮಂಜೂರಾಗಲೇ ಇಲ್ಲ.

    ಈಗ ಮತ್ತೆ ಮುನ್ನೆಲೆಗೆ

    ಮೆಡಿಕಲ್ ಕಾಲೇಜು ಕನಕಪುರಕ್ಕೆ ತರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣರಾದವರು ಮತ್ಯಾರೂ ಅಲ್ಲ, ವಸತಿ ಸಚಿವ ವಿ.ಸೋಮಣ್ಣ. ಕಳೆದ ಕೆಲವು ದಿನಗಳ ಹಿಂದೆ ಕನಕಪುರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಚಿವ ಸೊಮಣ್ಣ, ಡಿಕೆಶಿ ಸಹೋದರರ ಆಗ್ರಹದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ವಣವಾಗಲಿದೆ. ಇದಕ್ಕೆ ನೀಡಿದ್ದ ಜಮೀನನ್ನು ಹಿಂದಕ್ಕೆ ಪಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಸ್ವಾಭಾವಿಕವಾಗಿ ಕನಕಪುರ ಭಾಗದ ಜನತೆಯಲ್ಲಿ ಕಮರಿಹೋಗಿದ್ದ ಮೆಡಿಕಲ್ ಕಾಲೇಜು ಕನಸನ್ನು ಮತ್ತೆ ಚಿಗುರಿಸಿದೆ.

    ಜಿಲ್ಲಾ ಕೇಂದ್ರದಲ್ಲೇ ಕಾಲೇಜು

    ಒಂದೆಡೆ ಸಚಿವ ಸೋಮಣ್ಣ ಸಾರ್ವಜನಿಕ ಸಭೆಯೊಂದರಲ್ಲಿ ಮೆಡಿಕಲ್ ಕಾಲೇಜು ಕನಕಪುರದಲ್ಲಿ ನಿರ್ವಣವಾಗುತ್ತದೆ ಎನ್ನುವ ಭರವಸೆ ನೀಡಿದ್ದರೆ, ಮತ್ತೊಂದೆಡೆ ಜಿಲ್ಲಾ ಕೇಂದ್ರ ರಾಮನಗರ ಹೊರತು ಬೇರೆಲ್ಲೂ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಿಲ್ಲ. ಇದರಲ್ಲಿ ಗೊಂದಲ ಬೇಡ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿಯೇ ರಾಜೀವ್​ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ, ಆರೋಗ್ಯ ನಗರ (ಹೆಲ್ತ್ ಸಿಟಿ) ಮತ್ತು ಮೆಡಿಕಲ್ ಕಾಲೇಜು ನಿರ್ವಣವಾಗಲಿದೆ. ಇದಕ್ಕೆ ಸರ್ಕಾರ ಕೂಡಾ ಬದ್ಧವಾಗಿದೆ ಎಂದಿದ್ದಾರೆ. ಆದರೆ, ಈ ಮೂಲಕ ಸರ್ಕಾರದ ಇಬ್ಬರು ಪ್ರಭಾವಿಗಳು ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

    ಗೊಂದಲ ದೂರ ಮಾಡಿ

    ಡಿಕೆಶಿ ಸಹೋದರರಿಗೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ವಣವಾಗಬೇಕು ಎನ್ನುವುದು ಪ್ರತಿಷ್ಠೆಯ ವಿಚಾರ. ಇದಕ್ಕೆ ಪೆಟ್ಟು ಕೊಡಬೇಕು ಎನ್ನುವ ಕಾರಣಕ್ಕೆ ಚಿಕ್ಕಬಳ್ಳಾಪುರಕ್ಕೆ ಕಾಲೇಜು ಶಿಫ್ಟ್ ಆಯಿತು. ಆದರೆ ಈಗ ಇದೇ ವಿಚಾರದಲ್ಲಿ ಬಿಜೆಪಿ ಸರ್ಕಾರದ ಇಬ್ಬರು ಪ್ರಮುಖರು ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಜನತೆಯ ಭಾವನೆಯೊಂದಿಗೆ ಆಟವಾಡುವುದು ಎಷ್ಟು ಸೂಕ್ತ. ರಾಮನಗರ ಜಿಲ್ಲೆಯಲ್ಲಿ ಎಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿ ಜನತೆಯ ಗೊಂದಲ ದೂರ ಮಾಡಬೇಕಿದೆ.

    ಕನಕಪುರಕ್ಕೆ ಮೆಡಿಕಲ್ ಕಾಲೇಜು ಬರುವುದು ಖಚಿತ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಭರವಸೆ ಕೊಟ್ಟಿದ್ದಾರೆ. ರಾಮನಗರದಲ್ಲಿ ರಾಜೀವ್​ಗಾಂಧಿ ಆರೋಗ್ಯ ವಿವಿ ಆರಂಭವಾಗದಿರಲು ಡಿಸಿಎಂ ಅಶ್ವತ್ಥನಾರಾಯಣ ಕಾರಣವಾಗಿದ್ದಾರೆ. ಮೊದಲು ರಾಮನಗರಕ್ಕೆ ವಿವಿ ತರಲಿ.

    ಡಿ.ಕೆ.ಸುರೇಶ್, ಸಂಸದ

    ಮುಖ್ಯಮಂತ್ರಿಗೆ ದ್ವೇಷದ ರಾಜಕಾರಣ ಗೊತ್ತಿಲ್ಲ. ಖಂಡಿತ ವಾಗಿಯೂ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸಿಗಲಿದೆ. ಅದಕ್ಕೆ ನಿಗದಿಯಾಗಿದ್ದ ಭೂಮಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿಲ್ಲ.

    | ವಿ.ಸೋಮಣ್ಣ ವಸತಿ ಸಚಿವರು. (ಕನಕಪುರದಲ್ಲಿ ಹೇಳಿಕೆ ನೀಡಿದ್ದು)

    ಜಿಲ್ಲಾ ಕೇಂದ್ರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣ ವಾಗಲಿದೆ. ಇದರಲ್ಲಿ ಗೊಂದಲವಿಲ್ಲ. ರಾಜೀವ್ ಗಾಂಧಿ ಆರೋಗ್ಯ ವಿವಿ, ಹೆಲ್ತ್ ಸಿಟಿ, ಮೆಡಿಕಲ್ ಕಾಲೇಜು ರಾಮನಗರದಲ್ಲಿಯೇ ಆಗಲಿದೆ.

    | ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಿಸಿಎಂ (ರಾಮನಗರದಲ್ಲಿ ಹೇಳಿದ್ದು)

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts