More

    ವಿಮಾನ ನಿಲ್ದಾಣಗಳ ಬಳಿಯೇ ಕೈಗಾರಿಕೆ ಪಾರ್ಕ್; ಸಚಿವರ ಭರವಸೆ

    ಬೆಂಗಳೂರು: ಇನ್ವೆಸ್ಟ್ ಕರ್ನಾಟಕ ಫೋರಮ್ (ಐಕೆಎಫ್) ಪುನರ್ ರಚನೆ ನಂತರ ಮೊದಲ ಸಭೆ ಸೋಮವಾರ ನಡೆಯಿತು.
    ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ, ಕಳೆದ ಆರು ತಿಂಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅವಲೋಕಿಸುವ ಜತೆಗೆ ಮುಂದೆ ಇಡಬೇಕಾದ ಹೆಜ್ಜೆಗಳ ಬಗ್ಗೆಯೂ ಸಮಾಲೋಚಿಸಲಾಯಿತು. ಮುಖ್ಯವಾಗಿ ಕೈಗಾರಿಕಾ ಪ್ರಾಂಗಣ ಸ್ಥಾಪನೆ ಕುರಿತು ಚರ್ಚೆಯಾಯಿತು. ವಿಮಾನ ನಿಲ್ದಾಣಗಳಿಂದ ಸುಮಾರು 2 ಗಂಟೆ ರಸ್ತೆ ಪ್ರಯಾಣದ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸಿದರೆ ಹೆಚ್ಚಿನ ಹೂಡಿಕೆ ಸೆಳೆಯಲು ಅನುಕೂಲವಾಗುತ್ತದೆ ಎಂದು ಐಕೆಎಫ್ ಸಹ-ಅಧ್ಯಕ್ಷರಾದ ಉದ್ಯಮಿ ಸಜ್ಜನ್ ಜಿಂದಾಲ್ ಸಲಹೆ ನೀಡಿದರು.
    ಕರ್ನಾಟಕದಲ್ಲಿ ನೆಲೆಸಿರುವ ಒಬ್ಬ ಉದ್ಯಮಿಯಾಗಿ ಈ ರಾಜ್ಯ ಹೂಡಿಕೆ ಮಾಡಲು ಎಷ್ಟು ಸೂಕ್ತ ಎಂಬುದು ನನಗೆ ಚೆನ್ನಾಗಿ ಗೊತ್ತು. ಇಲ್ಲಿನ, ಕಾರ್ಯಪರಿಸರವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ವಿ ಉದ್ದಿಮೆಗಳನ್ನು ಕಟ್ಟಬಹುದು ಎಂದರು.
    ಸಜ್ಜನ್ ಸಲಹೆಗೆ ಪ್ರತಿಕ್ರಿಯಿಸಿದ ಸಚಿವ ಪಾಟೀಲರು, ಸುಮಾರು 5-10 ಸಾವಿರ ಎಕರೆಗಳಲ್ಲಿ ಇಂತಹ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೂ ಇದೆ. ಈ ಪಾರ್ಕುಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅನುಕೂಲವಾಗುವಂತೆ ಪ್ಲಗ್- ಇನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
    ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸುಮಾರು 55 ಸಾವಿರ ಕೋಟಿ ರೂಪಾಯಿಯ ಹೂಡಿಕೆ ಖಾತರಿಯಾಗಿದೆ. ಉಳಿದಂತೆ 40 ಸಾವಿರ ಕೋಟಿಯಿಂದ 1 ಲಕ್ಷ ಕೋಟಿ ರೂಪಾಯಿವರೆಗಿನ ಹಲವು ಪ್ರಸ್ತಾವಗಳು ಬೇರೆ ಬೇರೆ ಹಂತದ ಪ್ರಕ್ರಿಯೆಯಲ್ಲಿವೆ ಎಂದು ಸಚಿವರು ಹೇಳಿದರು.
    ಪುನರ್ ರಚಿತ ಐಕೆಎಫ್‌ನಲ್ಲಿ ವಲಯಧಾರಿತ ಉಪಸಮಿತಿಗಳನ್ನು ರಚಿಸಿ ಹೂಡಿಕೆ ಆಕರ್ಷಿಸಲು ಒತ್ತು ನೀಡುವುದಕ್ಕೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
    ಐಕೆಎಫ್ ನಿರ್ದೇಶಕರಾದ ಕಿರ್ಲೊಸ್ಕರ್ ಸಿಸ್ಟೆಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಕೆನ್ನಮೆಟಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕೃಷ್ಣನ್ ವೆಂಕಟೇಶನ್ ಸಭೆಯಲ್ಲಿದ್ದರು. ಮತ್ತೊಬ್ಬ ನಿರ್ದೇಶಕ, ನೆಟ್ವರ್ಕ್ಸ್ ಸಹ ಸ್ಥಾಪಕ ಅಂಕಿತ್ ಫತೇಪುರಿಯ ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು.
    ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮುಖ್ಯ ನಿರ್ವಹಣಾಧಿಕಾರಿ ಸಿ.ಟಿ.ಮುದ್ದುಕುಮಾರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts