More

    ಅಂಗರಕ್ಷಕರಿಂದ ಶೂ ಹಾಕಿಸಿಕೊಂಡ ಸಚಿವ; ವಿವಾದವಾದ ಬಳಿಕ ಸ್ಪಷ್ಟನೆ, ಸಮರ್ಥನೆ!

    ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ತಮ್ಮ ಅಂಗರಕ್ಷಕರಿಂದ ಶೂ ಹಾಕಿಸಿಕೊಂಡಿದ್ದು ವಿವಾದದ ಸ್ವರೂಪ ಪಡೆದುಕೊಂಡಿದೆ. ಹಾಗೆಯೇ ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
    ಸಚಿವ ಮಹದೇವಪ್ಪ ಬುಧವಾರ ಧಾರವಾಡದ ಸಪ್ತಾಪುರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗೆ ತೆರಳಿದ್ದರು. ಬಳಿಕ ಹಾಸ್ಟೆಲ್‌ನ ಅಡುಗೆ ಮನೆ ಒಳಗಡೆ ಹೋಗಿದ್ದರು. ಇದೇ ವೇಳೆ ಅಡುಗೆ ಮನೆಯ ಹೊರಗಡೆ ಶೂ ಕಳಚಿಟ್ಟಿದ್ದರು. ನಂತರ ಹೊರಗಡೆ ಬರುತ್ತಿದ್ದಂತೆ ಸಚಿವರಿಗೆ ಅಂಗರಕ್ಷಕ ಶೂ ಹಾಕಿದ್ದಾರೆ. ಶೂ ಹಾಕುವ ಸಂದರ್ಭ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    ಸಚಿವರ ಈ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಟೀಕಿಸಿದ್ದರು. ಜತೆಗೆ ರಾಜ್ಯ ಬಿಜೆಪಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಧಿಮಾಕು, ದೌಲತ್ತು ದುರಹಂಕಾರ ಸಿದ್ದರಾಮಯ್ಯ ಅವರಿಗೆ ಇರುವಂತೆ ಅವರ ಅತ್ಯಾಪ್ತ
    ಮಹದೇವಪ್ಪ ಅವರಿಗೂ ಬಂದಿದೆ. ಹೈಕಮಾಂಡ್ ಗುಲಾಮಗಿರಿಯಲ್ಲಿ ಮಿಂದೆದ್ದು ತೇಲುತ್ತಿರುವ ಕಾಂಗ್ರೆಸ್ ಸದಸ್ಯರು ತಮ್ಮ ಅಂಗರಕ್ಷಕರಿಂದ ಗುಲಾಮಗಿರಿ ಮಾಡಿಸಿಕೊಳ್ಳುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವರು ಸಮಾಜಕ್ಕೆ ನೀಡುತ್ತಿರುವ ಗ್ಯಾರಂಟಿಯೇ ಇದು ಎಂದು ಬಿಜೆಪಿ ಕುಟುಕಿದೆ.
    ಇದೇ ವೇಳೆ ಸಚಿವ ಮಹದೇವಪ್ಪ ಸ್ಪಷ್ಟನೆ ನೀಡಿದ್ದು, ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ ಎಂದಿದ್ದಾರೆ.
    ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ ಎಂದೂ ಸಹ ಸ್ಪಷ್ಟಪಡಿಸಿದ್ದಾರೆ. ಮಂಡಿ ಕೀಲು ನೋವಿನ ತೊಂದರೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟವಾಗಿದ್ದ ಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ. ಬಹು ವರ್ಷಗಳ ಕಾಲ ನನ್ನೊಡನೆಯೇ ಒಂದು ಕುಟುಂಬದಂತೆ ಇರುವ ನಮ್ಮ ಕೆಲ ಸಿಬ್ಬಂದಿ ಬಳಿ ಕಾಲಿನ ಸಮಸ್ಯೆಯ ಹಿನ್ನಲೆಯಲ್ಲಿ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
    ಸಹಾಯಕ್ಕೆ ಅಂಹಕಾರ, ಅಧಿಕಾರದ ಅಮಲು ಎಂಬ ಶಬ್ದಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ. ಇನ್ನು ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಕಾರಣ ಇಂತಹ ಸಣ್ಣಪುಟ್ಟ ವಿವಾದಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.
    ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ಧನ್ಯವಾದಗಳು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts