More

    5G ಯುಗದಲ್ಲೂ ಬದಲಾಗದ ಪರಿಸ್ಥಿತಿ: ಸ್ಲಂ ಜನರ ಅಳಲು
    ಹೊಸಪೇಟೆಯಲ್ಲಿ ಮಳೆ ನೀರು ನುಗ್ಗಿದ ಮನೆಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

    ಹೊಸಪೇಟೆ: ಸಣ್ಣ ಮಳೆಯಾದರೂ ಮನೆಗೆ ನೀರು ನುಗ್ಗುತ್ತವೆ. ಪ್ರತೀ ವರ್ಷವೂ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ.‌ ಶಾಶ್ವತ ಪರಿಹಾರ ಒದಗಿಸುತ್ತಿಲ್ಲ. ಜಗತ್ತು 5G  ನಲ್ಲಿ‌ಸಾಗುತ್ತಿದ್ದರೂ, ನಮ್ಮ ಪರಿಸ್ಥಿತಿ ‌ಬದಲಾಗುತ್ತಿಲ್ಲ.
    ಇದು ಇಲ್ಲಿನ ೧೫ನೇ ವಾರ್ಡಿನ ಇಂದಿರಾ ನಗರದಲ್ಲಿ ಇತ್ತೀಚೆಗೆ ಮಳೆ ನೀರು ನುಗ್ಗಿದ ಮನೆಗಳ ವೀಕ್ಷಣೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಎದುರು ಸ್ಥಳೀಯರು ಮೇಲಿನಂತೆ ಅಳಲು ತೋಡಿಕೊಂಡರು.
    ಸ್ಥಳೀಯ ನಿವಾಸಿಗಳಾದ ಎಂ.ಕೆ.ವಿಜಯಕುಮಾರ್, ಪರಮೇಶ್ವರಪ್ಪ ಮಾತನಾಡಿ, ಹಲವು ದಶಕಗಳಿಂದ ಇಲ್ಲೇ ನೆಲೆಸಿದ್ದೇವೆ. ಮಳೆಗಾಲದಲ್ಲಿ ಇಲ್ಲಿನ ರಾಜಕಾಲುವೆ ತುಂಬಿ ಹರಿಯುತ್ತದೆ. ಮೇಲ್ಭಾಗದಿಂದ‌ ಹೆಚ್ಚಿನ‌ ನೀರು ಹರಿಯುವುದರಿಂದ ಮನೆಗಳಿಗೆ ನೀರು ನುಗ್ಗಿ, ದವಸ ಧಾನ್ಯಗಳು ಹಾನಿಗೀಡಾಗುತ್ತವೆ. ನಿತ್ಯ ದುಡಿಮೆಯನ್ನೇ ನಂಬಿರುವ ಜನರ‌‌ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಇದಕ್ಕೂ ಮುನ್ನ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿ, ಸ್ಥಳೀಯರಿಂದ ಸಮಸ್ಯೆ ಆಲಿಸಿದರು.
    ಸ್ಥಳೀಯರು ಒಪ್ಪಿದರೆ ಆಶ್ರಯ ಕಾಲೋನಿಗೆ ಸ್ಥಳಾಂತರಿಸಲಾಗುತ್ತದೆ. ನಿವೇಶನದ ಜೊತೆಗೆ ಸುಸಜ್ಜಿತ ಮನೆ ನಿರ್ಮಿಸಿಕೊಡಲಾಗುವುದು. ಅಲ್ಲಿ ಚರಂಡಿ, ರಸ್ತೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು.  ಇಲ್ಲವೇ, ಇದೇ ಬಡಾವಣೆಗೆ ನೀರು ನುಗ್ಗದಂತೆ ಕ್ರಮ ವಹಿಸಲಾಗುವುದು. ಈ ಬಗ್ಗೆ ಸ್ಥಳೀಯರು ಪರಸ್ಪರ ಚರ್ಚಿಸಿಕೊಂಡು, ಅಭಿಪ್ರಾಯ ತಿಳಿಸಿದರೆ, ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.‌
    ಇತ್ತೀಚೆಗೆ ಮಳೆ ನೀರು ನುಗ್ಗಿದ್ದರಿಂದ ದವಸ ಧಾನ್ಯಗಳು ಹಾನಿಯಾಗಿದ್ದರಿಂದ  ಇಂದಿರಾ ನಗರದ ೫೪ ಸೇರಿದಂತೆ ಒಟ್ಟು ೬೪ ಜನರಿಗೆ ತಲಾ ೧೦ ಸಾವಿರ ರೂ. ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ, ತಹಸೀಲ್ದಾರ್ ವಿಶ್ವಜೀತ್‌ ಮೆಹತಾ, ನಗರಸಭೆ ಪೌರಾಯುಕ್ತ ಮನೋಹರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts