More

    ಬಾಂಬ್ ಎಲ್ಲಿ ಸ್ಫೋಟ ಆಗಿದೆ?

    ಹುಬ್ಬಳ್ಳಿ: ಬಾಂಬ್ ಇಟ್ಟಿರುವ ಬಗ್ಗೆ ಸಾಕಷ್ಟು ಕರೆಗಳು ಬರುತ್ತಿರುತ್ತವೆ. ಕರೆಗಳು ಬಂದ್ರೆ ಏನಾಯ್ತು? ಬಾಂಬ್ ಎಲ್ಲಿ ಸ್ಫೋಟ ಆಗಿದೆ ? ಏನು ಆಗಿಲ್ಲ ಅಂತಾ ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ಬೆಂಗಳೂರಿನ ಶಾಲೆಗಳಲ್ಲಿ ಶುಕ್ರವಾರ ಬಾಂಬ್ ಇಟ್ಟಿರುವ ಕುರಿತು ಇ-ಮೇಲ್ ಸಂದೇಶ ಕಳುಹಿಸಿದ ಬಗ್ಗೆ ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

    ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲ ಸಮಯ ವ್ಯರ್ಥ ಮಾಡಿದರೆ ಹೇಗೆ? ಅದಕ್ಕೆ ಸರ್ಕಾರ, ಪೊಲೀಸ್ ಇಲಾಖೆ ಇದೆ. ಅವರು ಅದನ್ನೆಲ್ಲ ನೋಡಿಕೊಳ್ಳುತ್ತಾರೆ. ಅದರ ಕುರಿತು ನಮಗೂ ಹೇಳಲು ಬರುವುದಿಲ್ಲ. ಬೇರೆ ಸಮಸ್ಯೆಗಳು ಸಾಕಷ್ಟಿವೆ ಎಂದರು.

    ಕಾಂಗ್ರೆಸ್​ನಿಂದ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿದೆ. ಈಗಾಗಲೇ ನಮ್ಮ ಪಕ್ಷದಿಂದ ಪ್ರತಿ ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಆಕಾಂಕ್ಷಿಗಳ ಪಟ್ಟಿ ಕಳಿಸಿದ ನಂತರ ಹೈಕಮಾಂಡ್ ಅಂತಿಮಗೊಳಿಸುತ್ತೆ ಎಂದು ಹೇಳಿದರು.

    ಬೆಳಗಾವಿಯಲ್ಲಿ ನಿಗದಿಯಾಗಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆ. ಬರಗಾಲದ ಬಗ್ಗೆಯೂ ಚರ್ಚೆ ಆಗಲಿದೆ, ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದವರು ಯಾವುದೇ ವಿಷಯ ಚರ್ಚೆ ಮಾಡಿದರೂ ಉತ್ತರ ಕೊಡುತ್ತೇವೆ ಎಂದರು.

    ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ 4 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಅದಕ್ಕೆ ನಾವು ಹೊಣೆಗಾರರಲ್ಲ. ಕೊಡುವ ಜವಾಬ್ದಾರಿ ನಮ್ಮದಾಗಿದೆ, ಕೊಡುತ್ತೇವೆ. ಬಿಜೆಪಿಯವರು 4000 ಕೋಟಿ ರೂ ಹೆಚ್ಚಿಗೆ ಮಾಡಿಟ್ಟು ಹೋಗಿದ್ದಾರೆ. ಇಲಾಖೆಗೆ ಹೆಚ್ಚಿಗೆ ಹಣ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಸರ್ಕಾರ ಹೆಚ್ಚಿಗೆ ಹಣ ಕೊಟ್ಟರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿಗೆ ವೇತನ ಆಗ್ತಾ ಇಲ್ಲ ಅಂತ ಯಾರು ಹೇಳಿದರು ಎಂದು ಪ್ರಶ್ನಿಸಿದರು.

    ತೆಲಂಗಾಣ ಚುನಾವಣೆ ವೇಳೆ ಕರ್ನಾಟಕದ ಪ್ರಭಾವಿ ಸಚಿವರೊಬ್ಬರು ಗೋವಾ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬೇರೆ ಬೇರೆ ಪಕ್ಷದಲ್ಲಿದ್ದರೂ ಗೆಳೆತನ ಇದ್ದೇ ಇರುತ್ತದೆ. ಗೋವಾ ಮತ್ತು ಕರ್ನಾಟಕಕ್ಕೆ ಮೊದಲಿನಿಂದಲೂ ಫ್ರೆಂಡ್​ಶಿಫ್ ಇದೆ. ಈ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿರುತ್ತಾರೆ. ಎರಡು ತಾಸು ಏಕೆ ಇಡೀ ರಾತ್ರೀನೇ ಅವರು ಚರ್ಚೆ ಮಾಡಿರಬಹುದು. ಇಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಸ್ನೇಹಿತರಾಗಿದ್ದಾರೆ. ಆ ಪಕ್ಷದವರು ನಮ್ಮನ್ನು ಭೇಟಿಯಾಗುತ್ತಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts