More

    ಪ್ರವಾಸಿಗರ ನಿರ್ಬಂಧಕ್ಕೆ ನಿರ್ಣಯ

    ಪ್ರವಾಸಿಗರ ನಿರ್ಬಂಧಕ್ಕೆ ನಿರ್ಣಯ

    ಚಿಕ್ಕಮಗಳೂರು: ವ್ಯಾಪಿಸುತ್ತಿರುವ ಕರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೆ ಜಿಲ್ಲೆಗೆ ಪ್ರವಾಸಿಗರನ್ನು ಅದರಲ್ಲೂ ಕೇರಳದ ಪ್ರವಾಸಿ ವಾಹನಗಳನ್ನು ನಿರ್ಬಂಧಿಸಲು ನಿರ್ಣಯ ಕೈಗೊಂಡ ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆ ಜಿಲ್ಲಾಡಳಿತ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲು ತೀರ್ವನಿಸಿತು.

    ಜಿಪಂ ಸಭಾಂಗಣದಲ್ಲಿ ಬುಧವಾರ ಸಭೆ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಶೃಂಗೇರಿ ಶಿವಣ್ಣ, ಕರೊನಾ ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಈ ಜಿಲ್ಲೆಗೆ ಸೋಂಕಿತರು ಬಂದಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆ ಇದ್ದು, ಸದ್ಯ ಪ್ರವಾಸಿ ವಾಹನಗಳಿಗೆ ನಿರ್ಬಂಧ ಹೇರಬೇಕೆಂದು ಸಲಹೆ ನೀಡಿದರು.

    ತಮಿಳುನಾಡು ಭಾಗದಿಂದ ಸಹ ಕಳಸಕ್ಕೆ ಪ್ರವಾಸಿಗರು ಬರುತ್ತಿದ್ದಾರೆ. ಅವರಿಗೆ ನಿರ್ಬಂಧ ಹೇರುವುದು ಸೂಕ್ತ ಎಂದು ಕೆ.ಆರ್.ಪ್ರಭಾಕರ್ ಹೇಳಿದಾಗ, ಬಿ.ಜಿ.ಸೋಮಶೇಖರ್ ಬೆಂಬಲ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಬೆಂಗಳೂರಿನಿಂದ ಅಪರ ಜಿಲ್ಲಾಧಿಕಾರಿ ಜತೆ ದೂರವಾಣಿಯಲ್ಲಿ ಮಾತನಾಡಿ, ಕೇರಳದಲ್ಲಿ ಕರೊನಾ ವ್ಯಾಪಕವಾಗಿದ್ದು, ವಿದ್ಯಾರ್ಥಿಗಳು, ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದು ಸಮಸ್ಯೆಗೆ ಕಾರಣವಾಗುವುದರಿಂದ ಅಲ್ಲಿನ ವಾಹನಗಳಿಗೆ ಸದ್ಯ ಪ್ರವೇಶ ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ. ಕೇರಳಿಗರನ್ನು ನಿರ್ಬಂಧಿಸುವುದಷ್ಟೇ ಅಲ್ಲ, ಕೇರಳಕ್ಕೆ ಹೋಗುವವರನ್ನೂ ತಡೆಯಬೇಕು ಎಂದು ಪ್ರಭಾಕರ್ ಒತ್ತಾಯಿಸಿದರು.

    ಕೇರಳ ಸೇರಿದಂತೆ ಬೇರೆ ರಾಜ್ಯಗಳ ಪ್ರವಾಸಿ ವಾಹನಗಳನ್ನು ನಿರ್ಬಂಧಿಸುವ ಕುರಿತು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಮಾಡುವುದಲ್ಲದೆ ಆರೋಗ್ಯ ಸಚಿವರಿಗೂ ಪತ್ರ ಬರೆಯುವ ತೀರ್ಮಾನ ಕೈಗೊಳ್ಳುವ ಬಗ್ಗೆ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದಾಗ ಸಭೆ ಸಮ್ಮತಿಸಿತು. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಜಿಪಂ ನಿರ್ಣಯ ಜಾರಿಯಾಗದ ಅತೃಪ್ತಿ: ಕರ್ತವ್ಯ ಲೋಪದ ಆರೋಪದ ಮೇಲೆ ಜಿಪಂ ಸಿಪಿಒ ಎ.ಕೆ.ಹನುಮಂತಪ್ಪ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಬೇಕೆಂದು ಇತ್ತೀಚೆಗೆ ಸಭೆಯಲ್ಲಿ ತೀರ್ವನಿಸಲಾಗಿತ್ತು. ಆದರೆ ಮತ್ತೆ ಅವರು ಕರ್ತವ್ಯಕ್ಕೆ ಬಂದಿದ್ದಾರೆ. ಇದು ಹೇಗೆ ಎಂದು ಕೆ.ಎಚ್.ಮಹೇಂದ್ರ ಪ್ರಶ್ನಿಸಿದಾಗ, ಜಿಪಂ ಆಡಳಿತಾತ್ಮಕ ವಿಚಾರದ ಬಗ್ಗೆ ನಿರ್ಣಯದ ಪತ್ರಿಕೆಗಳಲ್ಲೂ ವರದಿ ಪ್ರಕಟವಾಗುತ್ತದೆ. ಅದ್ಯಾವುದೂ ಜಾರಿಯಾಗುತ್ತಿಲ್ಲ. ಹೀಗಾದರೆ ಜಿಪಂ ನಿರ್ಧಾರಕ್ಕೆ ಗಾಂಭೀರ್ಯ ಇಲ್ಲದಂತಾಗುತ್ತದೆ. ಪತ್ರಿಕಾ ವರದಿಗಳನ್ನೇ ಜನರು ಪ್ರಶ್ನಿಸುವಂತಾಗುತ್ತದೆ ಎಂದ ಕೆ.ಆರ್.ಮಹೇಶ್ ಒಡೆಯರ್, ಒಬ್ಬರ ವಿರುದ್ಧ ಶಿಸ್ತು ಕ್ರಮಕ್ಕೆ ಸಭೆ ನಿರ್ಣಯಿಸಿದರೆ ಮುಂದಿನ ಸಭೆಯಲ್ಲಿ ಅವರೇ ಇರುತ್ತಾರೆ. ಹೀಗಾದರೆ ನಿರ್ಣಯದ ಪಾವಿತ್ರ್ಯೆ ಗತಿಯೇನು ಎಂದು ಕೇಳಿದರು.

    ಬಿ.ಜಿ.ಸೋಮಶೇಖರ್ ಮಾತನಾಡಿ, ಅಲ್ಲಂಪುರ, ಹಿರೇಕೊಳಲೆ ಗ್ರಾಪಂಗಳಲ್ಲಿ ಅವ್ಯವಹಾರ ನಡೆದಿರುವ ದಾಖಲೆ ಸಹಿತ ದೂರು ಕೊಟ್ಟು 5 ತಿಂಗಳಾದರೂ ಕ್ರಮ ಆಗಿಲ್ಲ. ಜಿಪಂ ಯಾಕಾದರೂ ಇರಬೇಕು ಎಂದು ಪ್ರಶ್ನಿಸಿದಾಗ ದನಿಗೂಡಿಸಿದ ಮಹೇಶ್ ಒಡೆಯರ್, ಪಿಡಿಒಗಳು ಕೆಲವರು ಇಒಗಳಿಗಿಂತ ಬಲಿಷ್ಠರಾಗಿದ್ದಾರೆ. ಖಾಸಗಿ ಜಮೀನಿನಲ್ಲಿ ಬೇಕಾಬಿಟ್ಟಿ ಭೂ ಪರಿವರ್ತನೆ ಮಾಡಿ ಇ-ಸ್ವತ್ತು ಖಾತೆ ಮಾಡಿಕೊಡುತ್ತಿದ್ದಾರೆ. ಇದಕ್ಕಿರುವ ಸರ್ಕಾರದ ನಿಯಮಗಳನ್ನು ಪಂಚಾಯ್ತಿ ಅಭಿಪ್ರಾಯ ಪಡೆಯದೆ ನೀಡಬಹುದೇ? ಅನೇಕ ಅಕ್ರಮಗಳು ನಡೆಯುತ್ತಿದ್ದು, ಪಿಡಿಒ ಮಟ್ಟದಲ್ಲೇ ಇದು ಸಾಧ್ಯವೇ ಪ್ರಶ್ನಿಸಿದರು.

    ಸಿಇಒ ಎಸ್.ಪೂವಿತಾ ಸ್ಪಷ್ಟನೆ ನೀಡಿ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಇಲಾಖಾ ತನಿಖೆಯಾಗಬೇಕಿದ್ದು, ನೋಟಿಸ್ ಜಾರಿ ಮಾಡಿ ದೂರು ಸಾಬೀತಾದರೆ ಕೆಸಿಎಸ್​ಆರ್ ನಿಯಮದನ್ವಯ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಿಲ್ಲದೆ ಕಡ್ಡಾಯ ರಜೆ ಮೇಲೆ ಕಳುಹಿಸಲು ಸಾಧ್ಯವಾಗದು ಎಂದರು. ಇದನ್ನು ಆಕ್ಷೇಪಿಸಿದ ಮಹೇಶ್ ಒಡೆಯರ್, ಅಂಥವರನ್ನು ಅದೇ ಜಾಗದಲ್ಲಿ ಕೂರಿಸಿದರೆ ತನಿಖೆ ವಿರುದ್ಧ ಶಿಫಾರಸು ಒತ್ತಡ ತರಲು ಅವಕಾಶವಾಗದೆ ಎಂದು ಪ್ರಶ್ನಿಸಿದರು.

    ಶುದ್ಧಗಂಗಾ ಘಟಕ ನಿಷ್ಕ್ರಿಯತೆಗೆ ಆಕ್ಷೇಪ: ಬಹುತೇಕ ಶುದ್ಧಗಂಗಾ ಘಟಕಗಳು ನಿಷ್ಕ್ರಿಯಗೊಂಡಿದ್ದು ನಿರುಪಯೋಗವಾಗಿದ್ದು, ಪ್ರಯೋಜನವಾಗುತ್ತಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಭಾಗದಲ್ಲಿ ಎಲ್ಲ ಶುದ್ಧ ಗಂಗಾ ಘಟಕಗಳು ಕೆಟ್ಟಿವೆ ಎಂದು ಬೆಳವಾಡಿ ರವೀಂದ್ರ ದೂರಿದರೆ, ಮಲೆನಾಡು ಭಾಗಕ್ಕೆ ಶುದ್ಧಗಂಗಾ ಘಟಕ ಪ್ರಯೋಜನವಾಗದು. ಶಾಸಕರೊಂದಿಗೆ ಮಾತನಾಡಿ ಅಗತ್ಯವಿರುವ ಕಡೆಗೆ ಸ್ಥಳಾಂತರಿಸುವಂತೆ ಕವಿತಾ ಲಿಂಗರಾಜು ಸಲಹೆ ನೀಡಿದರು.

    ಇದಕ್ಕೆ ಸ್ಪಷ್ಟನೆ ನೀಡಿದ ಇಲಾಖೆಯ ಅಧಿಕಾರಿ, ಜಿಲ್ಲೆಯಲ್ಲಿರುವ 231 ಶುದ್ಧಗಂಗಾ ಘಟಕಗಳಲ್ಲಿ 173 ಘಟಕಗಳು ಸಕ್ರಿಯವಾಗಿದ್ದು, 41 ಘಟಕಗಳು ಕೆಟ್ಟಿವೆ ಎಂದರು. ಕೆಟ್ಟಿರುವ ಘಟಕಗಳನ್ನು ವಾರದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.

    ಮೂವರು ಬಿಇಒಗಳ ವಿರುದ್ಧ ಕ್ರಮವಿಲ್ಲವೇಕೆ?: ಜಿಲ್ಲೆಯ ಮೂವರು ಬಿಇಒಗಳು ಪದೇಪದೆ ಕರ್ತವ್ಯಲೋಪ ಎಸಗುತ್ತಿದ್ದಾರೆಂಬ ಆರೋಪ ಮತ್ತೆ ಜಿಪಂ ಸಭೆಯಲ್ಲಿ ಪ್ರತಿಧ್ವನಿಸಿತು. ಈ ಹಿಂದಿನ ಸಭೆಯಲ್ಲಿ ಈ ಕುರಿತು ರ್ಚಚಿಸಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

    ಚಿಕ್ಕಮಗಳೂರಿನ ಎಸ್.ಆರ್.ಮಂಜುನಾಥ್, ತರೀಕೆರೆಯ ಎನ್.ಕೆ.ಶಿವರಾಜ್ ಹಾಗೂ ಶೃಂಗೇರಿಯ ಸುದೀಪ್​ಕುಮಾರ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಚಿಕ್ಕಮಗಳೂರು ಹಾಗೂ ತರೀಕೆರೆ ಬಿಇಒಗಳ ವಿರುದ್ಧ ಕ್ರಮಕ್ಕೆ ಈ ಹಿಂದಿನ ಸಭೆಗಳಲ್ಲಿ ನಿರ್ಣಯ ಕೈಗೊಂಡರೂ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಚಿಕ್ಕಮಗಳೂರು ಬಿಇಒ ವಿರುದ್ಧ ಹಣ ದುರ್ಬಳಕೆ ಆರೋಪ ಇರುವುದು ವಾಸ್ತವ. ಅವರನ್ನು ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಲು ಜಿಪಂ ನಿರ್ಣಯಿಸಿತ್ತು. ಆದರೆ ಅವರು ಸುದೀರ್ಘ ರಜೆಯಲ್ಲಿ ತೆರಳಿ ಇದೀಗ ಮರಳಿದ್ದಾರೆ ಎಂದು ಜಸಂತಾ ಅನಿಲ್​ಕುಮಾರ್ ಸಭೆಯ ಗಮನಕ್ಕೆ ತಂದರು.

    ತರೀಕೆರೆ ಬಿಇಒ ಮೂರು ತಿಂಗಳು ರಜೆಯಲ್ಲಿದ್ದು, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಯಾರ ವಿರುದ್ಧವೂ ಕ್ರಮ ಆಗುತ್ತಿಲ್ಲವೆಂದರೆ ಈ ಸಭೆಗಳು ಯಾಕೆ ಎಂದು ಕೆ.ಎಚ್.ಮಹೇಂದ್ರ ಖಾರವಾಗಿ ಪ್ರಶ್ನಿಸಿದರು.

    ಈಗಾಗಲೇ ಚಿಕ್ಕಮಗಳೂರು ಹಾಗೂ ತರೀಕೆರೆ ಬಿಇಒಗಳ ಬಗ್ಗೆ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸಿಇಒ ಅವರಿಗೆ ವರದಿ ಸಲ್ಲಿಸಿದ್ದು, ಅವರು ಸೂಚನೆ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಡಿಡಿಪಿಐ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts