More

    ಮೂರು ಕಡೆ ಹೊಸಸೇತುವೆ: ಸಂತ್ರಸ್ತರಿಗೆ ಸೂಕ್ತ ಪರಿಹಾರ

    ಕಾರ್ಕಳ: ಕೇಂದ್ರ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಅಧ್ಯಯನ ತಂಡ ಪ್ರಾಕೃತಿಕ ವಿಕೋಪ ಸಂಭವಿಸಿದ ಮಾಳ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಂಡದ ಜತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್‌ಕುಮಾರ್ ಈ ಪ್ರದೇಶಕ್ಕೆ ತೆರಳಿ ಅಧ್ಯಯನ ತಂಡಕ್ಕೆ ವಸ್ತುಸ್ಥಿತಿ ವಿವರಿಸಿದರು.
    ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಮಾಳ, ನೂರಾಳ್‌ಬೆಟ್ಟು ಭಾಗದಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಚೌಕಿ, ನೂರಾಳ್ ಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಿರುಕು ಬಿಟ್ಟಿತ್ತು. ಈ ಸ್ಥಳಕ್ಕೆ ಅಧಿಕಾರಿಗಳ ತಂಡ ಮೊದಲಿಗೆ ಭೇಟಿ ನೀಡಿತು.

    ಬಳಿಕ ತಾಲೂಕಿನ ಸಮಗ್ರ ವರದಿಯನ್ನು ಸಚಿವರು, ಅಧಿಕಾರಿಗಳು ಅಧ್ಯಯನ ತಂಡಕ್ಕೆ ನೀಡಿದರು. ಸ್ಥಳೀಯರಿಂದ ಮಳೆ ಹಾಗೂ ಹಾನಿಗೆ ಸಂಭವಿಸಿದ ಕುರಿತು ತಂಡ ಮಾಹಿತಿ ಪಡೆದುಕೊಂಡಿತು. ತಾಲೂಕಿನಲ್ಲಿ ಹೊಸ ಸೇತುವೆಗಳ ನಿರ್ಮಾಣ, ಹಾನಿಯ ವಸ್ತುಸ್ಥಿತಿ, ಇತ್ಯಾದಿಗಳ ಬಗ್ಗೆ ಸಮಗ್ರ ವಿವರಣೆಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಸಚಿವರು ನೀಡಿದರು.
    ತಾಲೂಕಿನ ಅಂಡಾರು, ಪರಪ್ಪಾಡಿ, ನೂರಾಳ್‌ಬೆಟ್ಟು ಈ ಮೂರು ಕಡೆ ಹೊಸ ಸೇತುವೆ ಸೇರಿದಂತೆ ತಾಲೂಕಿಗೆ ಮಳೆಹಾನಿ ಸಂಭವಿಸಿದ ವಸ್ತುಸ್ಥಿತಿಗಳ ಬಗ್ಗೆ ವಿವರಿಸಿ, ಪರಿಹಾರಕ್ಕೆ ಸಚಿವರು ಮನವಿ ಮಾಡಿದರು.

    ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್‌ಕುಮಾರ್, ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್ ರಾಜಾನ್, ಹಣಕಾಸು ಇಲಾಖೆ ಉಪನಿರ್ದೇಶಕ ಮಹೇಶ್‌ಕುಮಾರ್, ಇಂಧನ ಇಲಾಖೆ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಕುಂದಾಪುರ ಎ.ಸಿ ಕೆ.ರಾಜು, ಕಾರ್ಕಳ ತಹಸಿಲ್ದಾರ್ ಪ್ರದೀಪಕುಮಾರ್ ಕುರ್ಡೆಕರ್, ಡಿವೈಎಸ್ಪಿ ವಿಜಯಪ್ರಸಾದ್, ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಗ್ರಾ.ಪಂ ಸದಸ್ಯರು, ಮುಖಂಡರು, ಸ್ಥಳಿಯರು ಉಪಸ್ಥಿತರಿದ್ದರು.

    ಶಿರೂರಲ್ಲೂ ನೆರೆಹಾನಿ ಪರಿಶೀಲನೆ: ಕಳೆದ ತಿಂಗಳು ಮೇಘಸ್ಪೋಟದಿಂದ ದಿಢೀರ್ ಜಲಪ್ರಳಯ ಉಂಟಾದ ಉಪ್ಪುಂದ ಹಾಗೂ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ಕೇಂದ್ರ ಮಳೆ ಹಾನಿ ಅಧ್ಯಯನ ತಂಡ ಗುರುವಾರ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶದ ಪರಿಶೀಲನೆ ನಡೆಸಿದರು.

    ಬಳಿಕ ಮಾಧ್ಯಮ ಜತೆ ಮಾತನಾಡಿದ ತಂಡದಲ್ಲಿದ್ದ ಕಮಿಷನರ್ ಡಾ. ಮನೋಜ್ ರಾಜನ್, ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಗಿದೆ. ರಸ್ತೆ, ಸೇತುವೆ ಸೇರಿದಂತೆ ಜೀವಹಾನಿ ಕೂಡ ಆಗಿದೆ. ರಾಜ್ಯ ಸರ್ಕಾರ 1,012 ಕೋಟಿ ರೂ. ನಷ್ಟದ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧಾರದಲ್ಲಿ ವಸ್ತುಸ್ಥಿತಿ ಮತ್ತು ಹಾನಿ ವಿವರ ಕಲೆಹಾಕಲು ಏಳು ಸದಸ್ಯರನ್ನೊಳಗೊಂಡ ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿದೆ. ಹಾನಿಯಾದ ವಿವರಗಳನ್ನು ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
    ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ ಕುಮಾರ್, ಕೇಂದ್ರ ಇಂಧನ ಇಲಾಖೆ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್, ಬೈಂದೂರು ತಹಸೀಲ್ದಾರ್ ಕಿರಣ ಗೌರಯ್ಯ, ಮೀನುಗಾರಿಕಾ ಸಹಾಯಕ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕಿ ಸುಮಲತಾ, ಮೀನುಗಾರಿಕಾ ಇಲಾಖೆಯ ಗಣೇಶ್, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಉಪತಹಸೀಲ್ದಾರ್ ಭೀಮಪ್ಪ ಬಿಲ್ಲಾರ್, ಕಂದಾಯ ನಿರೀಕ್ಷಕ ಮಂಜು, ಶಿರೂರು ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ರಾಥೋಡ್, ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts