More

    ಕೊರೊನಾ ಹೇಗೆ ಬರುತ್ತದೆ…ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳೇನು? ಔಷಧಿ ಇದೆಯಾ…ಈ ಎಲ್ಲದರ ಬಗ್ಗೆ ಸಚಿವ ಡಾ. ಸುಧಾಕರ್​ರಿಂದ ಸ್ಪಷ್ಟ ಮಾಹಿತಿ…

    ಬೆಂಗಳೂರು: ಇಂದು ವಿಧಾನ ಪರಿಷತ್ ಕಲಾಪದ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ಅವರು ಕೊರೊನಾ ಬಗ್ಗೆ ಸವಿವರವಾಗಿ ಮಾತನಾಡಿದರು. ಹಾಗೇ ವೈರಸ್​ಗೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

    ಕೊರೊನಾ ವೈರಸ್​ ತಗುಲಿದರೆ ಸಾವು ಸಂಭವಿಸುತ್ತದೆ ಎಂದು ಮಾಧ್ಯಮಗಳು ಜನರನ್ನು ಭಯಬೀಳಿಸುವುದು ಬೇಡ. ಅದರ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಿದರೆ ಸಾಕು. ಯಾವುದೇ ಕಾರಣಕ್ಕೂ ವೈಭವೀಕರಿಸುವುದು ಬೇಡ ಎಂದರು.

    ಕೊರೊನಾ ಎದುರಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಕಮಾಂಡ್​ ಆಸ್ಪತ್ರೆ, ಏರ್​ಫೋರ್ಸ್ ಆಸ್ಪತ್ರೆಗಳಲ್ಲೂ ಬೆಡ್​ ವ್ಯವಸ್ಥೆ ಮಾಡಲಾಗಿದೆ. ಈ ಸೋಂಕಿಗೆ ಇನ್ನೂ ಯಾವುದೇ ಔಷಧಿ ಕಂಡುಹಿಡಿದಿಲ್ಲ. ಆಸ್ಟ್ರೇಲಿಯಾದಲ್ಲಿರುವ ಭಾರತ ಮೂಲದ ವೈದ್ಯರೊಬ್ಬರು ಔಷಧಿ ಕಂಡುಹಿಡಿಯುತ್ತಿದ್ದಾರೆ. ಆದರೆ ಇನ್ನೂ ದೃಢಪಟ್ಟಿಲ್ಲ. ಹಾಗೊಮ್ಮೆ ಯಾವುದಾದರೂ ಔಷಧಿ ಕಂಡು ಹಿಡಿಯಲ್ಪಟ್ಟರೆ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ದೃಢೀಕರಿಸುತ್ತದೆ ಎಂದು ಸಚಿವರು ತಿಳಿಸಿದರು.

    ರಾಜೀವ್ ಗಾಂಧಿ ಆಸ್ಪತ್ರೆ, ಐಬಿಎಂ ಕೇಂದ್ರಗಳಲ್ಲಿ ವೈರಾಲಜಿ ಲ್ಯಾಬ್​ ಉದ್ಘಾಟನೆ ಮಾಡಲಾಗಿದೆ. ನಿಮ್ಹಾನ್ಸ್​ನಲ್ಲಿಯೂ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಕೆಲವು ಕಡೆ ತಾಂತ್ರಿಕ ತೊಂದರೆಯಿರುವ ಕಾರಣಕ್ಕೆ ಲ್ಯಾಬ್​ ತೆರೆಯಲು ಸಾಧ್ಯವಿಲ್ಲ. ಕೊರೊನಾ ವೈರಸ್​​ನ್ನು ಡಬ್ಲ್ಯೂಎಚ್​ಒ​ ಸಾಂಕ್ರಾಮಿಕ (ಎಪಿಡೆಮಿಕ್​) ಎಂದಷ್ಟೇ ಪರಿಗಣಿಸಿದೆಯೇ ಹೊರತು ಇನ್ನೂ ಜಾಗತಿಕ ಸಾಂಕ್ರಾಮಿಕ ಎಂದು ಘೋಷಣೆ ಮಾಡಿಲ್ಲ ಎಂದು ಸುಧಾಕರ್ ಮಾಹಿತಿ ನೀಡಿದರು.

    ಮೂರು ಹಂತದಲ್ಲಿ ಪರಿಶೀಲನೆ

    ಕೊರೊನಾ ಶಂಕೆ ಕಂಡುಬಂದರೆ ಮೂರು ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತರ ಮೇಲೆ 14 ರಿಂದ 28 ದಿನಗಳವರೆಗೆ ವೈದ್ಯಕೀಯ ನಿಗಾ ಇಡುತ್ತಿದ್ದೇವೆ. ಮೊದಲು ವೈರಸ್​ ಹರಡುವ ಪ್ರಮಾಣ ಶೇ.1.8-2.2ರಷ್ಟಿತ್ತು. ಈಗ 3.4ರಷ್ಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೇಗನೇ ತಗುಲುತ್ತಿದೆ. ಅದರಲ್ಲೂ ಮಕ್ಕಳು, ಯುವಜನರಲ್ಲಿ ಕಡಿಮೆ. ವಯಸ್ಸಾದವರಿಗೆ ಬೇಗ ಹರಡುತ್ತಿದೆ. ಕೊರೊನಾ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಾದೇಶಿಕವಾಗಿಯೂ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.

    ಮಾನಸಿಕ ಧೈರ್ಯ ಮುಖ್ಯ

    ಡಾ. ಸುಧಾಕರ್ ಅವರು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುವ ಜತೆಗೆ ಮಾನಸಿಕ ಧೈರ್ಯವನ್ನು ಮೊದಲು ರೂಢಿಸಿಕೊಳ್ಳಿ ಎಂದು ಹೇಳಿದರು.

    ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಬಸ್, ರೈಲು, ವಿಮಾನ ಪ್ರಯಾಣಿಕರ ತಪಾಸಣೆ ನಡೆಸಲಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಳ ಜನರು ಸೇರುವುದನ್ನು ಕಡಿಮೆ ಮಾಡಬೇಕು. ಕೆಮ್ಮು, ಶೀತದ ಲಕ್ಷಣ ಇರುವವರು ಯಾವುದೇ ಸಮಾರಂಭಕ್ಕೆ ಹೋಗುವಾಗಲೂ ಮಾಸ್ಕ್​ ಧರಿಸಬೇಕು. ಇದು ಗಾಳಿಯಿಂದ ಬರುವಂಥ ವೈರಸ್​ ಅಲ್ಲ. ಎಂಜಲು ಅಂಶದಿಂದ ಬರುತ್ತದೆ. ಮೊದಲು ನಮ್ಮ ಕೈಯಿಗಳಿಗೆ ತಗುಲುತ್ತದೆ. ಹಾಗಾಗಿ ಪದೇಪದೆ ಬಾಯಿ, ಕಣ್ಣು, ಮೂಗುಗಳನ್ನು ಮುಟ್ಟಿಕೊಳ್ಳಬಾರದು. ಕೈಯನ್ನು ಆಗಾಗ ತೊಳೆಯುತ್ತಿರಬೇಕು. ಹಾಗೇ ಬೆವರಿನಿಂದಲೂ ವೈರಸ್ ಹರಡಲಿದ್ದು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

    ಮಾಸ್ಕ್​ ಹೇಗಿರಬೇಕು?

    ವೈರಸ್​ನಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆರು ಪದರಗಳ ಮಾಸ್ಕ್ ಹಾಕಿಕೊಳ್ಳಬೇಕು. ಆರು ತಿಂಗಳಿಗೆ ಆಗುವಷ್ಟು ಮಾಸ್ಕ್​ನ್ನು ನಾವು ಸಂಗ್ರಹಿಸಿದ್ದೇವೆ. ಔಷಧಿಗಳನ್ನೂ ಆರು ತಿಂಗಳಿಗೆ ಸಾಕಾಗುವಷ್ಟು ಆರ್ಡರ್​ ಮಾಡಿದ್ದೇವೆ. ಕೊರೊನಾ ನಿಯಂತ್ರಣಕ್ಕಾಗಿ ನಮ್ಮ ಸರ್ಕಾರ ತೆಗೆದುಕೊಂಡ ಕ್ರಮ, ಮುನ್ನೆಚ್ಚರಿಕಾ ನಿಲುವುಗಳು ಇಡೀ ದೇಶದಲ್ಲೇ ಅತ್ಯುತ್ತಮವಾದದ್ದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts