More

    ರಾಜಕೀಯ ಸ್ವಾರ್ಥಕ್ಕೆ ಜಿಲ್ಲೆಯ ಜನರ ಮನಸ್ಸನ್ನು ಒಡೆಯಬೇಡಿ: ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಸಚಿವ ಎನ್.ಚಲುವರಾಯಸ್ವಾಮಿ ಟೀಕಾಪ್ರಹಾರ

    ಮಂಡ್ಯ: ನಮ್ಮ ಮೇಲಿನ ದ್ವೇಷಕ್ಕೆ ಜಿಲ್ಲೆಯ ಜನರ ಮನಸ್ಸನ್ನು ಒಡೆಯಲು ಹೊರಟಿರುವುದು ಸರಿಯಲ್ಲ. ಸ್ವಾಭಿಮಾನ, ಆತ್ಮಗೌರವದ ವಿಚಾರದಲ್ಲಿ ಮಂಡ್ಯ ಮಾದರಿಯಾಗಿದೆ. ಹೀಗಿರುವಾರ ಧರ್ಮದ ವಿಷಯದಲ್ಲಿ ರಾಜಕೀಯ ಮಾಡಿ ಗಲಭೆ ಸೃಷ್ಟಿಸಬೇಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಾ ಪ್ರಹಾರ ನಡೆಸಿದರು.
    ಜಿಲ್ಲೆಯ ಜನರು ರಾಷ್ಟ್ರಕವಿ ಕುವೆಂಪು ಅವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇಂತಹ ನೆಲದಲ್ಲಿ ಧರ್ಮವನ್ನು ತಂದು ಜನರ ನೆಮ್ಮದಿ ಹಾಳು ಮಾಡಬೇಡಿ. ಒಂದು ವೇಳೆ ಧರ್ಮದ ಹೆಸರಿನಲ್ಲಿ ಜನರನ್ನು ನಂಬಿಸುತ್ತೇನೆಂದು ತಿಳಿದಿದ್ದರೆ, ಅದು ನಿಮ್ಮ ಭ್ರಮೆ. ನೀವು ಎರಡು ಬಾರಿ ಮುಖ್ಯಮಂತ್ರಿಯಾಗಲು ಜಿಲ್ಲೆಯ ಜನ ಕಾರಣರಾಗಿದ್ದಾರೆ. ಆದರೆ ಅವರಿಗೆ ಏನು ಹೊಸ ಯೋಜನೆ ಕೊಟ್ಟಿದ್ದೀರಿ, ನಿಮ್ಮ ಆಡಳಿತದಲ್ಲಿ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿದ್ದೀರಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಸುರಿಮಳೆಗೈದರು.
    ಹಾಸನಕ್ಕಿಂತ ಮಂಡ್ಯ ಜಿಲ್ಲೆಯ ಜನರು ನಿಮ್ಮ ಮೇಲಿನ ನಂಬಿಕೆಯಿಂದ ನಮ್ಮನ್ನು ಸೋಲಿಸಿದರು. ನಿಮ್ಮನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ್ದಾರೆ. ಅದನ್ನು ಮರೆತು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಹೊರಟಿವುದು ಎಷ್ಟು ಸರಿ. ಮುಖ್ಯಮಂತ್ರಿಯಾಗಿದ್ದಾಗ ಏಕೆ ಮೈಷುಗರ್ ಪುನಶ್ಚೇತನಗೊಳಿಸಲಿಲ್ಲ. ಅಭಿವೃದ್ಧಿಗಾಗಿ ಶಾಶ್ವತವಾದ ಯಾವುದೇ ಯೋಜನೆ ರೂಪಿಸಿಲ್ಲ. ಜಿಲ್ಲೆಯ ಬಗ್ಗೆ ಅಭಿಮಾನ ಇದ್ದರೆ ಯಾವುದಾದರೂ ಹೊಸ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರೆ ಅದನ್ನು ಮುಂದೆ ಬರುವ ಸರ್ಕಾರಗಳು ಮುಂದುವರಿಸುತ್ತಿದ್ದವು. ಅದನ್ನೂ ನೀವು ಮಾಡಲಿಲ್ಲ. ಮಂಡ್ಯಕ್ಕೆ ನಿಮ್ಮದು ಏನೂ ಕೊಡುಗೆ ಇಲ್ಲ. ಮದ್ದೂರಿನ ಶಿವಪುರದಲ್ಲಿರುವ ಧ್ವಜಸತ್ಯಾಗ್ರಹ ಸೌಧಕ್ಕೆ ತಿರುಮಲೇಗೌಡ ಅವರು ತಮ್ಮ ಜಮೀನನ್ನು ಕೊಡುಗೆ ನೀಡಿದ್ದಾರೆ, ಅದು ಇಂದಿಗೂ ನೆನಪಾಗಿ ಉಳಿದಿದೆ. ಇಂತಹ ಕೊಡುಗೆ ನಿಮ್ಮದು ಏನಾದರೂ ಇದೆಯೇ ಎಂದು ಟೀಕಿಸಿದರು.
    ಜಿಲ್ಲೆಯ ಜನರ ಮನಸ್ಸು ಬದಲಿಸಲು ಆಗಲ್ಲ. ಇಲ್ಲಿಯ ಜನ ಪ್ರಬುದ್ಧರಿದ್ದಾರೆ. ಒಮ್ಮೆ ನಿಮ್ಮನ್ನ ಸಂಪೂರ್ಣ ಗೆಲ್ಲಿಸಿದ್ದಾರೆ. ಮತ್ತೊಮ್ಮೆ ಸೋಲಿಸಿ, ನಮ್ಮನ್ನ ಗೆಲ್ಲಿಸಿದ್ದಾರೆ. ಇಂತಹ ವಿಚಾರ ಮುಂದಿಟ್ಟುಕೊಂಡು ಜನರ ಮನಸ್ಸು ಬದಲಿಸಲು ಆಗಲ್ಲ. ಈ ವಿಚಾರ ನಿಮಗೆ ಶೋಭೆ ತರುವುದಿಲ್ಲ. ಮಾಜಿ ಪ್ರಧಾನಿ ಮಗನಾಗಿ ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬೇಡಿ. ನಿಮ್ಮ ಹೋರಾಟ ನೋಡಿದರೆ ರಾಷ್ಟ್ರಧ್ವಜ ಇಳಿಸಬೇಕು ಎನ್ನುವಂತಿದೆ. ಮೊನ್ನೆ ವಿರೋಧ ಪಕ್ಷದ ನಾಯಕರು ಬಂದು ಹೋಗಿದ್ದಾರೆ. ಸಾಕು ನಿಮ್ಮ ಹೋರಾಟ ಇರಲಿ. ಪ್ರಜಾಪ್ರಭುತ್ವ, ಸಂವಿಧಾನದ ವಿಚಾರದಲ್ಲಿ ಹೋರಾಟ ಬೇಡ ಎಂದರು.
    ಪ್ರಧಾನಿ ಹತ್ತಿರ ಹೋಗಿ ಫೋಟೋ ತೆಗೆಸಿಕೊಳ್ಳುತ್ತೀರಿ. ಬರಗಾಲಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಹಣ ಬಿಡುಗಡೆಯಾಗದಿರುವ ಬಗ್ಗೆ ಏಕೆ ಕೇಳಲಿಲ್ಲ. ಧರ್ಮದ ಹೆಸರೇಳಿಕೊಂಡು ಜಿಲ್ಲೆಯ ಜನರ ಬಾಳಲ್ಲಿ ಬೆಂಕಿ ಹಚ್ಚಲು ಬಂದಿದ್ದೀರಾ ಕುಮಾರಸ್ವಾಮಿ ಅವರೇ, ನಿಮ್ಮನ್ನ ಈ ಜಿಲ್ಲೆಯ ಜನ ಕ್ಷಮಿಸಲ್ಲ, ಕೇಸರಿ ಶಾಲು ಹಾಕಿ ಆಗಿದೆ. ಅವಶ್ಯಕತೆ ಇದ್ದರೆ ಬಿಜೆಪಿ ಸೇರ್ಪಡೆ ಆಗಿ. ಆದರೆ ಮತ್ತೆ ಇಂತಹ ಕೀಳು ಮಟ್ಟದ ಹೋರಾಟ ಬೇಡ. ಜಿಲ್ಲೆಯ ಜನರ ಬದುಕಿನಲ್ಲಿ ಆಟವಾಡುವುದು ಬೇಡ. ಇವರ ಸುಳ್ಳು, ಪ್ರಚೋದನೆಗೆ ಜನರು ಕಿವಿಗೊಡಬೇಡಿ. ನಾವು ಮೈಷುಗರ್ ಆರಂಭ ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಬದ್ಧರಿದ್ದೇವೆ. ಏನೇ ವಿಷಯ, ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚೆ ಮಾಡೋಣ ಬನ್ನಿ. ಸದಾ ಜಿಲ್ಲೆಯ ಜನರ ಪರ ನಾವು ಇರುತ್ತೇವೆ ಎಂದರು.
    ಶಾಸಕರಾದ ರವಿಕುಮಾರ್ ಗಣಿಗ, ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಎಂಎಲ್‌ಸಿಗಳಾದ ಮರಿತಿಬ್ಬೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts