ಕಡಬ: ಕರೊನಾ ಸೋಂಕು ಪೀಡಿತರಾಗಿ ಹೋಂ ಐಸೋಲೇಷನ್‌ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಕೋವಿಡ್ ಕೇರ್ ಸೆಂಟರ್ ತೆರೆದು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಜತೆ ಸೋಮವಾರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೆೇಟಿ ನೀಡಿ ವೈದ್ಯಾಧಿಕಾರಿ ಜತೆಗೆ ಮಾತುಕತೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಸಿಟಿವ್ ಬಂದವರನ್ನು ಹೋಂ ಐಸೋಲೇಷನ್‌ನಲ್ಲಿರಲು ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಬಹುತೇಕ ಸೋಂಕಿತರು ದುರುಪಯೋಗಪಡಿಸಿಕೊಂಡಿದ್ದಾರೆ. ಮನೆ ಮಂದಿಗೆ ಸೋಂಕು ಹರಡಿಸುವ ಜತೆಗೆ ಮನೆಯಿಂದ ಹೊರಬಂದು ಎಲ್ಲೆಡೆ ತಿರುಗಾಡಿ ಸಾರ್ವಜನಿಕರಿಗೂ ರೋಗ ಹರಡಲು ಕಾರಣವಾಗುತ್ತಿದ್ದಾರೆ. ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದರೂ ಕೆಲವರ ನಿರ್ಲಕ್ಷೃದಿಂದ ಗ್ರಾಮೀಣ ಭಾಗದಲ್ಲೂ ರೋಗ ಹರಡುವಂತಾಗಿದೆ. ಆದ್ದರಿಂದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಅಲ್ಲೇ ಆರೈಕೆ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ : ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಜ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 50 ಬೆಡ್ ಸಾಮರ್ಥ್ಯದ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಲಾಗಿದೆ. ಕಡಬ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಸುಬ್ರಹ್ಮಣ್ಯ ಆಶ್ರಮ ಶಾಲೆಯನ್ನು ಕೋವಿಡ್ ಕೇಂದ್ರಕ್ಕಾಗಿ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದ ಸಚಿವ ಅಂಗಾರ, ಸೋಂಕಿತರು ಕೋವಿಡ್ ಸೆಂಟರ್‌ಗೆ ದಾಖಲಾಗಲು ಒಪ್ಪದಿದ್ದರೆ ಪೊಲೀಸ್ ನೆರವಿನೊಂದಿಗೆ ಕೋವಿಡ್ ಸೆಂಟರ್‌ಗೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಡಬದಲ್ಲಿ ಆಕ್ಸಿಜನ್ ಪ್ಲಾಂಟ್‌ಗೆ ಕ್ರಮ: ಕಡಬ ಸಮುದಾಯ ಆಸ್ಪತ್ರೆಯಲ್ಲಿ ಹೈಫ್ಲೋ ಆಕ್ಸಿಜನ್, ಏರ್ ಮತ್ತು ವ್ಯಾಕ್ಯೂಮ್ ಪಾಯಿಂಟ್ ಅಳವಡಿಸಲು ಕ್ರಮ ಕೈಗೊಂಡಿದ್ದು, 48 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ, ಆಕ್ಸಿಜನ್ ಜಂಬೋ ಸಿಲಿಂಡರ್ ಸಂಗ್ರಹಕ್ಕಾಗಿ ಶೆಡ್ ನಿರ್ಮಾಣ ಮುಂತಾದ ಕಾಮಗಾರಿ ಪೂರ್ಣಗೊಂಡಿದೆ. 30 ಜಂಬೋ ಆಕ್ಸಿಜನ್ ಸಿಲಿಂಡರ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಕಡಬದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಅನುದಾನಕ್ಕೆ ಮುಖ್ಯಮಂತ್ರಿ ಜತೆ ಚರ್ಚಿಸಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಅಂಗಾರ ತಿಳಿಸಿದರು.