More

    ಪಿಂಚಣಿ ಹಣ ನೇರ ಖಾತೆಗೇ ಜಮಾ ; ಕಂದಾಯ ಸಚಿವ ಆರ್.ಅಶೋಕ್

    ಶಿರಾ: ಅರ್ಜಿ ಹಾಕದಿದ್ದರೂ 60 ವರ್ಷ ಆಗುತ್ತಿದ್ದಂತೆ ವೃದ್ಧಾಪ್ಯ ವೇತನ ದೊರೆಯುವಂತೆ ಮಾಡುವ ಯೋಜನೆ ಉಡುಪಿ ಹಾಗೂ ಬಳ್ಳಾರಿಯಲ್ಲಿ ಪ್ರ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಇದನ್ನು ಜಿಲ್ಲೆಯಲ್ಲಿಯೂ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

    ಗುರುವಾರ ಶಿರಾ ಮಿನಿ ವಿಧಾನಸೌಧ ಕಟ್ಟಡ ಚಾಲನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧಾರ್ ಕಾರ್ಡ್ ನಮೂದಿಸಿರುವ ವಯಸ್ಸಿನ ಆಧಾರದಂತೆ ಮಾಹಿತಿ ಆಧರಿಸಿ ನಿಗದಿತ ಸಮಯಕ್ಕೆ ಪಿಂಚಣಿ ನೀಡಲು ನಿರ್ದೇಶಿಸಿದ್ದು, ಪಿಂಚಣಿ ಹಣ ಇನ್ನು ಮುಂದೆ ಅಂಚೆ ಕಚೇರಿ ಬದಲಾಗಿ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ಕ್ರಮಕೈಗೊಳ್ಳಲಾಗಿದೆ, ಪಿಂಚಣಿ ನೀಡುವಾಗ 20ರಿಂದ 100ರೂ. ವರೆಗೂ ಕಮಿಷನ್ ನುಂಗಿರುವ ದೂರುಗಳು ಬಂದಿದ್ದವು, ಇನ್ಮುಂದೆ ಎಲ್ಲ ಪೆನ್ಷನ್  ಆಧಾರ್‌ಗೆ ಲಿಂಕ್ ಮಾಡಿ ಬೋಗಸ್ ಖಾತೆಗಳನ್ನು ಪತ್ತೆ ಹಚ್ಚಿ ವಜಾ ಮಾಡಲಾಗುವುದು ಎಂದರು.

    ಉಪಚುನಾವಣೆಗೆ ಸಮೀಪಿಸುತ್ತಿರುವ ಬೆನ್ನಲ್ಲೇ ತರಾತುರಿಯಲ್ಲಿ ಮಿನಿ ವಿಧಾನಸೌಧಕ್ಕೆ ಸಚಿವ ಆರ್.ಅಶೋಕ್ ಚಾಲನೆ ನೀಡಿದರು. ಕಟ್ಟಡದಲ್ಲಿ ಮೂಲಸೌಕರ್ಯ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುವ ಸಂದರ್ಭದಲ್ಲಿಯೇ ಕಟ್ಟಡ ಉದ್ಘಾಟಿಸಿದ್ದಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೇರಿ ವಿವಿಧ ಸಂಘ, ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದವು. ಸಚಿವ ಆನಂದ್ ಸಿಂಗ್, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎನ್.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಇದ್ದರು.

    ರಾಜ್ಯದಲ್ಲಿ ಒಂದು ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿ: ರಾಜ್ಯದಲ್ಲಿ ಒಂದು ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಎಚ್ಚರಿಕೆಯಿಂದ ಭೂಮಿ ರಕ್ಷಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಶಾಲಾ, ಕಾಲೇಜು, ಆಸ್ಪತ್ರೆ, ವಸತಿ ನಿಲಯ ಸೇರಿ ಸರ್ಕಾರಿ ಉಪಯೋಗಗಳಿಗೆ ಸರ್ಕಾರಿ ಜಮೀನುಗಳನ್ನು ಮೀಸಲಿಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನುಗಳು ಉಳಿಯುವುದು ಕಷ್ಟ, ಪ್ರತಿಯೊಂದು ಹಳ್ಳಿಯಲ್ಲಿಯೂ ಸಾರ್ವಜನಿಕ ಸ್ಮಶಾನವಿರಬೇಕು. ಗ್ರಾಮಗಳಲ್ಲಿ ಸಮುದಾಯಕ್ಕೊಂದು ರುದ್ರಭೂಮಿಬೇಕು ಎಂದು ಕೇಳಿದರೆ ಅವರ ಸ್ವಂತ ಜಮೀನುಗಳಿದ್ದರೆ, ಅಂತಹವರು ರುದ್ರಭೂಮಿಗೆ ಸಮುದಾಯದ ಹೆಸರನ್ನು ಇಟ್ಟುಕೊಳ್ಳಬಹುದು ಎಂದರು.

    ಜಿಲ್ಲೆಯ 333 ಗ್ರಾಮಗಳಲ್ಲಿ ರುದ್ರಭೂಮಿ ಅವಶ್ಯಕತೆಯಿದ್ದು, ಅವುಗಳನ್ನು ಮುಂದಿನ 2 ತಿಂಗಳೊಳಗಾಗಿ ವ್ಯವಸ್ಥೆ ಕಲ್ಪಿಸಬೇಕು. ಜಾತಿಗಳಿಗೆ ಪ್ರತ್ಯೇಕವಾಗಿ ಸ್ಮಶಾನ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಎಂದರು. ಡಿಸಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲೆಯಾದ್ಯಂತ ಈ ತಿಂಗಳಲ್ಲಿ 4 ಸಾವಿರ ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿದ್ದು, 5ಸಾವಿರ ಟನ್ ಗೊಬ್ಬರ ಸಂಗ್ರಹಣೆ ಮಾಡಲಾಗಿದೆ. ರೈತರಿಗೆ ಇದರಿಂದ ಯಾವುದೇ ರೀತಿಯ ಗೊಬ್ಬರದ ಕೊರತೆ ಇಲ್ಲ ಎಂದು ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇದೆ ಎಂದು ಶಾಸಕ ಮಸಾಲೆ ಜಯರಾಮ್ ಸಚಿವರ ಗಮನ ಸೆಳೆದರು, ಜಿಲ್ಲಾಧಿಕಾರಿಗಳು ಸ್ಕ್ಯಾಡ್ ರಚಿಸಿ ಅವರ ಮೂಲಕ ಮಾಹಿತಿ ಸಂಗ್ರಹಿಸಿ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಎಂದು ಸಚಿವರು ಸೂಚಿಸಿದರು. ಶಾಸಕ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಮಸಾಲಾ ಜಯರಾಮ್ ಇದ್ದರು.

    ಶಿರಾದಲ್ಲಿ ಪ್ರತಿಭಟನೆ ಬಿಸಿ: ಮೂಲಸೌಲಭ್ಯವಿಲ್ಲದೆಯೇ ಕಟ್ಟಡ ಉದ್ಘಾಟಿಸುವುದನ್ನು ಖಂಡಿಸಿ ಮಾನವ ಬಂಧುತ್ವ ವೇದಿಕೆ, ದಸಂಸ ವೇದಿಕೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಮರಾಪುರ ರಸ್ತೆಯಿಂದ ಐ.ಬಿ.ವೃತ್ತದವರೆಗೂ ಮೆರವಣಿಗೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು. ಬಿಸಿಸಿ ಅಧ್ಯಕ್ಷ ಪಿ.ಆರ್.ಮಂಜುನಾಥ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದರು. ಬಿಸಿಸಿ ಅಧ್ಯಕ್ಷ ನಟರಾಜು, ಮುಖಂಡರಾದ ಅಶೋಕ್, ಮಹೇಶ್, ರಮೇಶ್, ಷಣ್ಮುಖಪ್ಪ, ವಿ.ಕೆ.ರಮೇಶ್, ಮಾಜಿ ನಗರಸಭೆ ಸದಸ್ಯ ಬಸವರಾಜು ಮತ್ತಿತರರು ನೇತೃತ್ವ ವಹಿಸಿದ್ದರು.

    10ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು 2017ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು, ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಬೇಕು. ಬರ್ತ್ ಡೇ ಕಾರ್ಯಕ್ರಮದಂತೆ ಇಷ್ಟಬಂದಂತೆ ನಡೆಸಲಾಗಿದೆ, ಸಾರ್ವಜನಿಕರನ್ನು ದೂರವಿಟ್ಟು ಕಾರ್ಯಕ್ರಮ ನಡೆಸಿರುವುದು ಉಪಚುನಾವಣೆಯಲ್ಲಿ ಲಾಭ ಪಡೆಯಲಷ್ಟೇ,
    ಟಿ.ಬಿ.ಜಯಚಂದ್ರ ಮಾಜಿ ಸಚಿವ

    ಜಯಚಂದ್ರ ಈ ಕ್ಷೇತ್ರದ ಶಾಸಕರಲ್ಲ, ಶಿಷ್ಟಾಚಾರದಲ್ಲಿ ಕರೆಯಬೇಕಾಗಿಲ್ಲ, ಕಚೇರಿ ಉದ್ಘಾಟನೆ ನಿರಂತರ ಪ್ರಕ್ರಿಯೆ. ಈ ಹಿಂದೆ ನಮ್ಮ ಕಾಲದಲ್ಲಿ ಆದ ಬಸ್ ನಿಲ್ದಾಣಗಳನ್ನು ಕಾಂಗ್ರೆಸ್ ಸರ್ಕಾರ ಉದ್ಘಾಟಿಸಿತು. ಗಿಮಿಕ್ ಮಾಡಿ ಕ್ಷೇತ್ರದಲ್ಲಿ ಗೆಲ್ಲುವ ಅವಶ್ಯಕತೆ ನಮಗಿಲ್ಲ,
    ಆರ್.ಅಶೋಕ್ ಕಂದಾಯ ಸಚಿವ

    ರೈತರು ಸಾಗುವಳಿ ಮತ್ತು ಮನೆ ಕಟ್ಟಿಕೊಂಡಿರುವ ಭೂಮಿ ಸಕ್ರಮಗೊಳಿಸಲು ಉಭಯ ಸಚಿವರು ಒಪ್ಪಿದ್ದಾರೆ. ನೂತನ ಕಟ್ಟಡದ ಬಳಕೆಗೆ ಕಂದಾಯ ಸಚಿವರ ಒಪ್ಪಿಗೆ ಪಡೆದು ಉದ್ಘಾಟನೆ ನೆರವೇರಿಸಿದ್ದೇನೆ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts