More

    ಲಕ್ಷಾಂತರ ಮತ ಪಡೆದವರು ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದಾರೆ

    ಚಿಕ್ಕಮಗಳೂರು: ಜನರ ಲಕ್ಷಾಂತರ ಮತ ಪಡೆಯುವ ಜನಪ್ರತಿನಿಧಿಗಳು ತಮ್ಮ ಒಂದು ಮತ ನೀಡುವ ವೇಳೆ ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದಾರೆ. ಇದೆಲ್ಲಾ ಬದಲಾವಣೆಯಾಗಬೇಕಾದರೆ ಜನ ಮೊದಲು ಬದಲಾಗಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆ ಇಂದಿರಾಗಾಂಧಿ ಅವರ ಕಾಲದಲ್ಲಿ ಘೋಷಿತ ಸರ್ವಾಧಿಕಾರಿ ಆಡಳಿತವಿತ್ತು. ಆದರೆ ಇದೀಗ ಅಘೋಷಿತ ಸರ್ವಾಧಿಕಾರ ಜಾರಿಯಲ್ಲಿದೆ. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಮೊದಲು ಕೊನೆಯಾಗಬೇಕು ಎಂದು ಹೇಳಿದರು.
    ಆಡಳಿತ ನಡೆಸುತ್ತಿರುವ ಮಹಾಪ್ರಭುಗಳು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ. ನಾವು ಹೇಳಿದಂತೆ ನಡೆಯಬೇಕು ಎಂಬ ಸರ್ವಾಧಿಕಾರಿ ಧೋರಣೆಯಲ್ಲಿದ್ದಾರೆ. ಪ್ರಶ್ನೆ ಕೇಳಿದ ಮತದಾರರಿಗೆ ಉತ್ತರ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಆಗ ಮಾತ್ರ ಆಡಳಿತದಲ್ಲಿ ಪಾರದರ್ಶಕತೆ ಬರಲು ಸಾಧ್ಯ ಎಂದು ತಿಳಿಸಿದರು.
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆ ಮಾಡುವವರಿಗಿಂತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದವರ ಅಧಿಕಾರ ಮೇಲಿರಬೇಕು. ಆದರೆ ಪ್ರಸ್ತುತ ನಮ್ಮ ವ್ಯವಸ್ಥೆಯಲ್ಲಿ ಇದಾಗದಿರುವುದು ಬೇಸರದ ಸಂಗತಿ. ಚುನಾವಣೆ ಎನ್ನುವುದು ಕ್ರಿಕೆಟ್ ಮ್ಯಾಚ್‌ನಂತಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ಅದೇ ಪಕ್ಷ, ಅದೇ ಕುಟುಂಬ, ಅದೇ ಪರಿವಾರದವರು ಎನ್ನುವಂತಾಗಿದೆ. ಹೀಗಾಗಿಯೇ ಜನಪರ ಕಾಳಜಿಯಿರುವ ಹೊಸ ನಾಯಕರು ಬರುತ್ತಿಲ್ಲ ಎಂದು ವಿಶ್ಲೇಷಿಸಿದರು.
    ಎಲ್ಲ ಪಕ್ಷಗಳೂ ಚುನಾವಣಾ ಬಾಂಡ್ ಹೊಂದಿರುವುದು ಸುಪ್ರೀಂ ಕೋರ್ಟ್ ಆದೇಶದಿಂದ ಬಹಿರಂಗವಾಗಿದೆ. ಇದರಲ್ಲಿ ಆಡಳಿತ ಪಕ್ಷದವರ ಪಾಲು ಹೆಚ್ಚಿರುವುದು ಇದೀಗ ಜಗಜ್ಜಾಹೀರಾಗಿದೆ. ಆಡಳಿತ ಪಕ್ಷದೊಂದಿಗೆ ನೇರ ಸಂಬಂಧ ಇಟ್ಟುಕೊಂಡಿರುವ ಕೆಲವು ಕಂಪನಿಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಚುನಾವಣಾ ಬಾಂಡ್‌ಗಳು ಇರುವುದು ಬಹಿರಂಗವಾಗಿದೆ. ಹೀಗೆ ಕೇಂದ್ರ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳ ಮೇಲೆ ಐಟಿ ರೈಡ್ ನಡೆಯುತ್ತಿಲ್ಲ. ಆಡಳಿತ ನಡೆಸುವವರು ಚುನಾವಣೆ ಬಗ್ಗೆ ಪಾರದರ್ಶಕವಾಗಿ ಜನರ ಮುಂದಿಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
    ದೊಡ್ಡ ಪ್ರಮಾಣದ ಚುನಾವಣಾ ಬಾಂಡ್‌ಗಳನ್ನು ಹೊಂದಿರುವ ಆಡಳಿತ ಪಕ್ಷ ಅದೇ ಬಂಡವಾಳದಿಂದ ಸಣ್ಣ ಸಣ್ಣ ರಾಜಕೀಯ ಪಕ್ಷಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಿದೆ. ಶಾಸಕರುಗಳನ್ನು ಖರೀದಿಸುತ್ತಿದೆ. ಬೇರೆ ಪಕ್ಷದಲ್ಲಿದ್ದು ಭ್ರಷ್ಟಾಚಾರ ಮಾಡಿ ತಪ್ಪುಮಾಡಿದವರು ಬಿಜೆಪಿ ಸೇರಿದಾಕ್ಷಣ ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತಿದೆ. ಇದಕ್ಕೆಲ್ಲ ಮಹಾಪ್ರಭುಗಳು ಉತ್ತರ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
    ನಾನು ಯಾವುದೇ ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ. ಹಾಗೆಯೇ ಯಾವುದೇ ಪಕ್ಷಕ್ಕೂ ಸೇರುವುದಿಲ್ಲ. ನನ್ನದೇ ಆದ ಅನೇಕ ಕ್ಷೇತ್ರಗಳಲ್ಲಿ ಜನರ ಮಧ್ಯೆ ಇದ್ದು ಜನರ ಪರವಾದ ಕೆಲಸವನ್ನು ಮುಂದುವರಿಸುತ್ತೇನೆ. ನಮ್ಮಿಂದ ಜನರಿಗೆ ಉಪಯೋಗವಾದಾಗ ನಮಗೂ ತೃಪ್ತಿಯಾಗುತ್ತದೆ ಎಂದು ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್.ತಾರಾನಾಥ್, ಖಜಾಂಚಿ ಎನ್.ಕೆ.ಗೋಪಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts