More

    ಜಾಗತೀಕರಣದಿಂದ ಕೃಷಿ ಉದ್ಯಮಕ್ಕೆ ಪೆಟ್ಟು: ರೈತ ನಾಯಕಿ ಸುನಂದಾ ಜಯರಾಂ ಬೇಸರ

    ಮಂಡ್ಯ: ಭಾರತದಲ್ಲಿ ಶೇ.80ರಷ್ಟು ಭಾಗ ಕಾರ್ಮಿಕರೇ ಆಗಿದ್ದಾರೆ. ಶೇ.20ರಷ್ಟು ಮಾತ್ರ ಶ್ರಮ ಎಂದರೆ ಏನೆಂದು ಗೊತ್ತಿಲ್ಲದವರಿರಬಹುದು. ರಾಷ್ಟ್ರದಲ್ಲಿ ಕೃಷಿಯನ್ನೇ ಅವಲಂಬನೆ ಮಾಡಿರುವವರೇ ಹೆಚ್ಚು. ಇಂತಹ ಉದ್ಯಮಕ್ಕೆ ದೊಡ್ಡ ಪೆಟ್ಟು ಕೆಲಸ ಆಗಿದೆ ಎಂದು ರೈತ ನಾಯಕಿ ಸುನಂದಾ ಜಯರಾಂ ಬೇಸರ ವ್ಯಕ್ತಪಡಿಸಿದರು.
    ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ನೆನಪಿನಲ್ಲಿ ಬುಧವಾರ ಆಯೋಜಿಸಿದ್ದ ಮುದ್ರಣಕಾರರ ಮತ್ತು ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಾಗತೀಕರಣ ಮತ್ತು ಉದಾರೀಕರಣ, ಖಾಸಗೀಕರಣದ ಫಲವಾಗಿ ಕೃಷಿ ಉದ್ಯಮದ ಮೇಲೆ ದೊಡ್ಡ ಪೆಟ್ಟು, ಶ್ರಮ, ಗಳಿಕೆ, ಸಂಪನ್ಮೂಲ ಕಸಿಯುವ ಕೆಲಸವಾಗುತ್ತಿದೆ. ಮಾತ್ರವಲ್ಲದೆ ದೇಶದ ಬೇವರು, ಶ್ರಮವನ್ನು ಕಸಿಯುವ ಪ್ರಯತ್ನ ನಡೆಯುತ್ತಿರುವುದು ದೊಡ್ಡ ಅಪಾಯ ಎಂದು ಹೇಳಿದರು.
    ಕೃಷಿಕರು, ಶ್ರಮಿಕರು, ಮಹಿಳೆಯರು, ಕಾರ್ಮಿಕರು, ದುಡಿಯುವ ಎಲ್ಲ ವರ್ಗದ ಜನತೆ ಈ ದೇಶವನ್ನು ಕಟ್ಟಿ ಉಳಿಸಿ ಉಸಿರನ್ನೂ ಕೊಟ್ಟಿದ್ದೇವೆ. ಈ ದೇಶದ ಎಲ್ಲ ಗೌರವ, ಸಂಪನ್ಮೂಲ ಶ್ರಮಿಕರಿಗೆ, ಕಾರ್ಮಿಕರಿಗೆ ಬೆವರನ್ನು ಸುರಿಸಿ ದುಡಿಯುವವರಿಗೆ ಸಲ್ಲಬೇಕು. ಆದರೆ ಇದು ಆಗುತ್ತಿಲ್ಲ. ಶೇ.20ರಷ್ಟು ಜನ ಇಡೀ ದೇಶವನ್ನು ಬಲಿಕೊಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
    ಜೋಹಾನ್ಸ್ ಗುಟೆನ್ ಬರ್ಗ್‌ನಂತಹ ವ್ಯಕ್ತಿ ತನ್ನ 54ರ ವಯೋಮಾನದಲ್ಲಿ ಮುದ್ರಣ ಮಾಧ್ಯಮವನ್ನು ಸಂಶೋಧಿಸಿದರು. ಇಂದು ಈ ಕ್ಷೇತ್ರದಲ್ಲಿ ಬಳಷ್ಟು ತಾಂತ್ರಿಕತೆ ಬಂದು ವೇಗ ಪಡೆದುಕೊಂಡಿರಬಹುದು. ಆದರೆ ಮೊದಲು ಅದನ್ನು ಪರಿಚಯಿಸಿದ ವ್ಯಕ್ತಿಗೆ ಗೌರವ ಕೊಡುವುದು ಎಲ್ಲರ ಧರ್ಮವಾಗಿದೆ. ಈ ಕ್ಷೇತ್ರದಲ್ಲಿ ದುಡಿಮೆ, ಗಳಿಕೆ ಅಷ್ಟೇ ಅಲ್ಲದೆ, ಬಹಳ ಎಚ್ಚರಿಕೆಯಿಂದಲೂ ಕೆಲಸ ಮಾಡಬೇಕಾಗುತ್ತದೆ. ಜತೆಗೆ ಪತ್ರಿಕಾ ಮಾಧ್ಯಮದಲ್ಲಿಯೂ ನಾವು ಬಹಳಷ್ಟು ಶ್ರಮವನ್ನು ಕಾಣುತ್ತಿದ್ದೇವೆ ಎಂದು ಉದಾಹರಣೆ ಸಮೇತ ವಿವರಿಸಿದರು.
    ಇತ್ತೀಚಿನ ದಿನಗಳಲ್ಲಿ ಎಲ್ಲದ್ದಕ್ಕೂ ಒಂದೊಂದು ದಿನಾಚರಣೆಯನ್ನಾಗಿ ಘೋಷಿಸಿ ಆಚರಿಸುತ್ತಿರುವುದ ಸರಿಯಲ್ಲ. ಇಂತಹ ಆಚರಣೆಯಿಂದ ಮಹತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಎಲ್ಲದ್ದಕ್ಕೂ ಇತಿ, ಮಿತಿ ಇರಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯ ಹೋಗಿ ಸ್ವೇಚ್ಚಾಚಾರ ಹೆಚ್ಚಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಮನುಷ್ಯ ಜೀವಂತವಿರುವಾಗ ಏನಾದರೊಂದು ಸಾಧನೆ ಮಾಡಬೇಕು. ಇಲ್ಲದಿದ್ದರೆ ಅವನ ಹೆಸರು ಅಳಿಸಿಹೋಗುತ್ತದೆ. ಆದರೆ ಮುದ್ರಣ ಮಾಧ್ಯಮವೊಂದನ್ನು ಜಗತ್ತಿಗೆ ಪರಿಚಯಿಸಿದ ಜೋಹಾನ್ಸ್ ಗುಟೆನ್ ಬರ್ಗ್ ಅವರನ್ನು ಜಗತ್ತು ಎಲ್ಲಿಯವರೆ ಇರುತ್ತದೋ ಅಲ್ಲಿಯವರೆವಿಗೂ ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು.
    ಇಂದು ವಿಶ್ವದೆಲ್ಲೆಡೆ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಖಾನೆಗಳಲ್ಲಿ ನಾಮಫಲಕಗಳನ್ನು ಹಾಕಿಕೊಂಡು ಕೆಲಸ ಮಾಡುವರಷ್ಟೇ ಕಾರ್ಮಿಕರಲ್ಲ. ಬದಲಿಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೆ ಆಗಿದ್ದರೆ. ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪೌರ ಕಾರ್ಮಿಕರು ಕಾರಿನಲ್ಲಿ ಬಂದು ಅವರಿಗೆ ವಹಿಸಿದ ಕೆಲಸವನ್ನು ನಿಗದಿತ ಅವಧಿಯೊಳಗೆ ಮುಗಿಸಿ ವಾಪಸ್ಸಾಗುತ್ತಾರೆ. ಆದರೆ ನಮ್ಮಲ್ಲಿ ಇನ್ನೂ ಅಂತಹ ಸ್ಥಿತಿ ಕಂಡಿಲ್ಲ. ದುಡಿಮೆಗೆ ಹಣ ಕೊಡುವವನೇ ಮಾಲೀಕ. ಕಾರ್ಮಿಕರ ಕಾರಣದಿಂದಾಗಿ ಮಾಲೀಕನಾದವನು ಕಾರ್ಮಿಕನಾಗಿಯೂ ಕೆಲಸ ಮಾಡುತ್ತಾನೆ ಎಂದು ವಿವರಿಸಿದರು.
    ಇಂತಹ ಕ್ಷೇತ್ರದಲ್ಲಿ ಇನ್ನೊಬ್ಬರಿಂದ ದೌರ್ಜನ್ಯ ಉಂಟಾಗುತ್ತೋ, ದುಡಿಮೆಗೆ ಕುತ್ತು ಅಥವಾ ದುಡಿಮೆಗೆ ಸರಿಯಾದ ಸಂಬಳ ಸಿಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಬಂಡೇಳುವುದು ಅವಶ್ಯ. ಅಮೆರಿಕಾದ ಚಿಕಾಗೋ ನಗರದಲ್ಲಿ 130 ವರ್ಷದ ಹಿಂದೆ ಕಾರ್ಮಿಕರು ಪ್ರಭುತ್ವದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿದ್ದರು. ಅದು ದೊಡ್ಡ ಮಟ್ಟದ ಹೋರಾಟವಾಗಿತ್ತು. ನಂತರದ ದಿನಗಳಲ್ಲಿ ಬಹಳಷ್ಟು ಹೋರಾಟಗಳನ್ನು ನೋಡಿದ್ದೇವೆ. ಈ ರೀತಿ ತನ್ನ ಬಂಡಾಯವನ್ನು ಪ್ರದರ್ಶನ ಮಾಡಬೇಕಾದ ಅನಿವಾರ್ಯತೆಯೂ ಎಂದು ಹೇಳಿದರು.
    ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮೀ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್, ಮುದ್ರಣಕಾರರ ಸಂಘದ ರಾಜ್ಯ ಸಂಚಾಲಕ ಎಂ.ಎಸ್.ಸತೀಶ್, ಸಂಘದ ಗೌರವಾಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts