More

    ಖಾನಾಪುರ: ಹಾಲಿನ ಟ್ಯಾಂಕರ್‌ನಲ್ಲಿ ಮದ್ಯ ಸಾಗಣೆ

    ಖಾನಾಪುರ: ಗೋವಾ ರಾಜ್ಯದಲ್ಲಿ ತಯಾರಿಸುವ ಬಟ್ಟಿ ಮದ್ಯವನ್ನು ಹಾಲಿನ ಟ್ಯಾಂಕರ್‌ನಲ್ಲಿ ಸಾಗಿಸುತ್ತಿದ್ದ ಜಾಲ ಪತ್ತೆ ಹಚ್ಚುವಲ್ಲಿ ಖಾನಾಪುರ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

    ಬೆಳಗಾವಿ ತಾಲೂಕು ರಕ್ಕಸಕೊಪ್ಪ ನಿವಾಸಿಗಳಾದ ಟ್ಯಾಂಕರ್ ಚಾಲಕ ರತನ್ ಪಾಟೀಲ ಹಾಗೂ ಕ್ಲೀನರ್ ಅಮೋಲ್ ಪವಾರ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಹಾಲು ಸರಬರಾಜು ಮಾಡಲು ಗೋವಾ ರಾಜ್ಯಕ್ಕೆ ತೆರಳಿದ್ದ ಬೆಳಗಾವಿಯ ಟ್ಯಾಂಕರ್ ಗೋವಾದಿಂದ ಬರುವಾಗ ಬಟ್ಟಿ ಮದ್ಯ ತರುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.

    ಈ ಹಿನ್ನೆಲೆಯಲ್ಲಿ ಕಣಕುಂಬಿ ಬಳಿಯ ಚೆಕ್‌ಪೋಸ್ಟ್ ಬಳಿ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಮದ್ಯ ಸಾಗಾಟಕ್ಕೆ ಬಳಸಿದ ಟ್ಯಾಂಕರ್ ಮತ್ತು ಅದರಲ್ಲಿದ್ದ 13,500 ರೂ. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ನಿಷೇಧಿತ ಮದ್ಯ ಸಾಗಿಸುತ್ತಿದ್ದ ಆರೋಪದಡಿ ಅವರಿಬ್ಬರನ್ನೂ ಬಂಧಿಸಲಾಗಿದೆ.

    ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಮದ್ಯದ ಅಂಗಡಿಗಳನ್ನು ಮುಚ್ಚಿದ್ದು, ಇದರಿಂದಾಗಿ ಬೆಳಗಾವಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಗೋವಾದಲ್ಲಿ ತಯಾರಾಗುವ ಬಟ್ಟಿ ಮದ್ಯಕ್ಕೆ ಬೇಡಿಕೆ ಇರುವುದರಿಂದ ತಾವು ಈ ಕೃತ್ಯ ಮಾಡಿದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಖಾನಾಪುರ ಪಿಎಸ್‌ಐ ಬಸಗೌಡ ಪಾಟೀಲ, ಸಿಬ್ಬಂದಿ ಕೆ.ಬಿ. ಮೊಕಾಶಿ ಹಾಗೂ ಇತರರು ಪಾಲ್ಗೊಂಡಿದ್ದರು. ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts