More

    ಹಾಲಿನ ಹರಿವು, ಬೇಕಿದೆ ಸರ್ಕಾರದ ನೆರವು!: ಹಾಲು ಖರೀದಿಗೆ ರಜೆ?

    • ಶಿವಾನಂದ ತಗಡೂರು ಬೆಂಗಳೂರು

    ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ಕ್ಕೆ ಪ್ರತಿದಿನ ಬರುತ್ತಿರುವ ಹಾಲಿನ ಪ್ರಮಾಣ 69 ಲಕ್ಷ ಲೀಟರ್​ನಿಂದ ದಿಢೀರ್ 89 ಲಕ್ಷ ಲೀಟರ್​ಗೆ ಏರಿಕೆಯಾಗಿದ್ದು, ಹೆಚ್ಚುವರಿ ಹಾಲಿನ ನಿರ್ವಹಣೆ ಸಾಧ್ಯವಾಗದೆ ಒಕ್ಕೂಟ ಸಂಕಷ್ಟಕ್ಕೆ ಸಿಲುಕಿದೆ. ಕೆಎಂಎಫ್​ಗೆ 79 ಲಕ್ಷ ಲೀಟರ್ ಹಾಲು ಬಂದಿದ್ದು ಹಿಂದಿನ ದಾಖಲೆ. ಇದೀಗ ಸಾರ್ವಕಾಲಿಕ ದಾಖಲೆ ಎನ್ನುವಂತೆ 89 ಲಕ್ಷ ಲೀಟರ್ ಹಾಲು ಬರುತ್ತಿದೆ. 65-70 ಲಕ್ಷ ಲೀಟರ್ ಬಂದಲ್ಲಿ ಅದನ್ನು ನಿಭಾಯಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಪ್ರಸ್ತುತ ನಿತ್ಯ 35 ರಿಂದ 39 ಲಕ್ಷ ಲೀಟರ್ ಹಾಲು ಉಳಿಕೆಯಾಗುತ್ತಿದ್ದು, ಸಾಮರ್ಥ್ಯ ಮೀರಿ ಹಾಲಿನ ಪುಡಿ ಮಾಡಿ ಶೇಖರಿಸಿಟ್ಟುಕೊಳ್ಳುವುದು ಕಷ್ಟವಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಲಾಕ್​ಡೌನ್​ನಿಂದ ಮಾರುಕಟ್ಟೆಯಲ್ಲಿ ಹಾಲಿನ ಪುಡಿಗೆ ಬೇಡಿಕೆ ಕುಸಿದಿದ್ದು, ಕೆಎಂಎಫ್​ನಲ್ಲಿ ದಾಸ್ತಾನು ಇದೀಗ 17 ಸಾವಿರ ಟನ್​ಗೆ ಏರಿಕೆ ಆಗಿದೆ.

    ಕುಸಿದ ಹಾಲಿನ ಬೇಡಿಕೆ: ಕೆಎಂಎಫ್​ಗೆ ಬೆಂಗಳೂರು ದೊಡ್ಡ ಮಾರುಕಟ್ಟೆ. ಆದರೆ ಲಾಕ್​ಡೌನ್ ಕಾರಣಕ್ಕೆ ಹೋಟೆಲ್​ಗಳು ಬಂದ್ ಆಗಿದ್ದು, ಬಹುತೇಕ ಜನ ಹಳ್ಳಿಗಳಿಗೆ ತೆರಳಿದ್ದಾರೆ. ಇದರಿಂದ ಹಾಲಿನ ಬೇಡಿಕೆ ಕುಸಿದಿದೆ. ಕೆಎಂಎಫ್​ನಿಂದ ನೆರೆಯ ಮುಂಬೈಗೆ ನಿತ್ಯ 2 ಲಕ್ಷ ಲೀಟರ್, ಕೇರಳಕ್ಕೆ 1.50 ಲಕ್ಷ ಲೀಟರ್, ತಮಿಳುನಾಡಿಗೆ 1 ಲಕ್ಷ ಲೀಟರ್, ಆಂಧ್ರಕ್ಕೆ 1.10 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತದೆ. ಕರೊನಾದಿಂದ ಅಲ್ಲಿಯೂ ಡಿಮಾಂಡ್ ಕಡಿಮೆಯಾಗಿದ್ದು, ಹಾಲು ಉಳಿಕೆಯಾಗುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಸುಮಾರು 1 ಕೋಟಿ ಮಕ್ಕಳಿಗೆ 7 ಲಕ್ಷ ಲೀಟರ್ ಹಾಲು, ಪುಡಿ ಮಾದರಿಯಲ್ಲಿ ಸರಬರಾಜು ಆಗುತ್ತಿತ್ತು. ಅಂಗನವಾಡಿ, ಶಾಲೆಗಳು ಬಂದ್ ಆಗಿರುವುದರಿಂದ ಪೂರೈಕೆ ಸ್ಥಗಿತಗೊಂಡಿದ್ದು, ಒಕ್ಕೂಟ ಸಂಕಷ್ಟಕ್ಕೊಳಗಾಗುವಂತೆ ಮಾಡಿದೆ.

    ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ?: ಕಳೆದ ಲಾಕ್​ಡೌನ್ ಅವಧಿಯಲ್ಲಿ ಸರ್ಕಾರ ಕೆಎಂಎಫ್​ನಿಂದ ಹೆಚ್ಚುವರಿ ಹಾಲು ಖರೀದಿ ಮಾಡಿ ಬಡವರಿಗೆ ಹಂಚಿತ್ತು. ಇದರಿಂದಾಗಿ ಒಕ್ಕೂಟಕ್ಕೆ ಕಷ್ಟವಾಗಲಿಲ್ಲ. ಆದರೆ ಈ ವರ್ಷ ಲಾಕ್​ಡೌನ್ ಘೋಷಿಸಿ ಮೂರು ವಾರ ಕಳೆದರೂ ಕೆಎಂಎಫ್ ನಿರೀಕ್ಷೆಗೆ ಸರ್ಕಾರ ಸ್ಪಂದಿಸಿಲ್ಲ. ಈ ಬಗ್ಗೆ ಕಳಿಸಿದ ಪ್ರಸ್ತಾವನೆಗಳಿಗೂ ಮನ್ನಣೆ ನೀಡಿಲ್ಲ. ಸರ್ಕಾರ ಹಾಲಿನ ಪೌಡರ್ ಖರೀದಿಸಿ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಂಚಿದರೆ, 3200 ಟನ್ ಹಾಲಿನ ಪೌಡರ್ ಮಾರಾಟವಾಗಿ ಅನುಕೂಲವಾಗುತ್ತದೆ ಎಂದು ಪ್ರಸ್ತಾವನೆ ಕಳಿಸಲಾಗಿದೆ. ಆದರೆ, ಇದಕ್ಕೆ ಒಪ್ಪಿಗೆ ನೀಡಿದರೆ ಸರ್ಕಾರಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ. ಹೊರೆಯಾಗಲಿದ್ದು, ಪ್ರಸ್ತಾವನೆ ಬಾಕಿ ಉಳಿಸಿಕೊಳ್ಳಲಾಗಿದೆ.

    ಹಾಲು ಖರೀದಿಗೆ ರಜೆ?

    ಕೆಎಂಎಫ್​ಗೆ ಹಾಲು ಹೆಚ್ಚು ಬರುವುದನ್ನು ನಿಯಂತ್ರಿಸಲು ಹಾಲು ಉತ್ಪಾದಕರು ಮತ್ತು ರೈತರು ಸ್ಥಳೀಯವಾಗಿಯೇ ಮನಸ್ಸು ಮಾಡಬೇಕು. ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ ವಾರದಲ್ಲಿ ಒಂದು ದಿನ ಹಾಲು ಖರೀದಿಗೆ ಬ್ರೇಕ್ ಹಾಕಿ, ಡೇರಿಗಳಿಗೆ ರಜೆ ನೀಡಲು ಕೆಎಂಎಫ್ ಚಿಂತನೆ ನಡೆಸಿದೆ.

    ಕೋಟ್​

    ಕೆಎಂಎಫ್ ಶಕ್ತಿ ಮೀರಿ ಹಾಲು ನಿಭಾಯಿಸುತ್ತಿದೆ. ಈಗಾಗಲೆ 17 ಸಾವಿರ ಟನ್ ಹಾಲಿನ ಪುಡಿ ಶೇಖರಣೆ ಆಗಿದೆ. ಹೆಚ್ಚುವರಿ ಹಾಲನ್ನು ನೆರೆ ರಾಜ್ಯಗಳಿಗೆ ಪುಡಿ ಮಾಡಲು ಕಳುಹಿಸಲಾಗುತ್ತಿದೆ.

    | ಹಿರಿಯ ಅಧಿಕಾರಿ ಕೆಎಂಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts