More

    ಅಂಗನವಾಡಿಗಳಿಗೆ ಪೂರೈಕೆಯಾಗದ ಹಾಲಿನ ಪೌಡರ್

    ಮುಂಡರಗಿ: ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಿದ್ದ ಹಾಲಿನ ಪುಡಿಯನ್ನು ಒಂಬತ್ತು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದು, ಅಂಗನವಾಡಿ ಕೇಂದ್ರದ ಮಕ್ಕಳು ಕ್ಷೀರಭಾಗ್ಯ ಇಲ್ಲದೆ ದಿನಗಳನ್ನು ಕಳೆಯಬೇಕಿದೆ.

    ತಾಲೂಕಿನಲ್ಲಿ 172 ಅಂಗನವಾಡಿ ಕೇಂದ್ರಗಳಿದ್ದು, 3ರಿಂದ 6ವರ್ಷದೊಳಗಿನ 5,012 ಮಕ್ಕಳು ದಾಖಲಾಗಿದ್ದಾರೆ. 1,173 ಗರ್ಭಿಣಿ ಮತ್ತು ಬಾಣಂತಿಯರು ಹಾಗೂ 6 ತಿಂಗಳಿಂದ 3 ವರ್ಷದೊಳಗೆ 4,544 ಮಕ್ಕಳು ಸಹ ಇದ್ದಾರೆ. ಇವರಿಗೆಲ್ಲ ಹಾಲು ಪೂರೈಕೆ ಸ್ಥಗಿತವಾಗಿದೆ. ನಿತ್ಯವೂ ಪ್ರತಿ ಮಗುವಿಗೆ 15 ಗ್ರಾಂ. ಗರ್ಭಿಣಿ, ಬಾಣಂತಿಯರಿಗೆ 20 ಗ್ರಾಂ. ಹಾಲಿನ ಪುಡಿ ನೀಡಲಾಗುತ್ತಿತ್ತು.

    ಮಕ್ಕಳಲ್ಲಿನ ಅಪೌಷ್ಟಿಕತೆ ದೂರ ಮಾಡಿ ಉತ್ತಮ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ಸರ್ಕಾರವು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಾಲು, ಮೊಟ್ಟೆ, ಶೇಂಗಾ ಚಿಕ್ಕಿಗಳನ್ನು ವಿತರಣೆ ಮಾಡುತ್ತದೆ. ಆದರೆ 2022ರ ನವೆಂಬರ್‌ನಿಂದಲೇ ಹಾಲಿನ ಪುಡಿ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಒಂಬತ್ತು ತಿಂಗಳಿಂದ ಮಕ್ಕಳಿಗೆ ಹಾಲು ಸಿಗದಂತಾಗಿದೆ.

    ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಹಾಲಿನ ಪುಡಿ ಪೂರೈಸಲಾಗುತ್ತಿದ್ದು, ಅಲ್ಲಿನ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳಿಗೆ ಮಾತ್ರ ವ್ಯತ್ಯಯ ಉಂಟಾಗಿದೆ. ಬೇಸಿಗೆ ಸಂದರ್ಭದಲ್ಲಿ ಹಾಲಿನ ಉತ್ಪಾದನೆ ಕಡಿಮೆ ಇರಬಹುದು. ಈಗ ಮಳೆಗಾಲ ಪ್ರಾರಂಭವಾಗಿದ್ದು, ಹಾಲಿನ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದ್ದು, ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳಿಗೆ ಸರ್ಕಾರವು ಸ್ಥಗಿತಗೊಳಿಸಿರುವ ಹಾಲು ಪೂರೈಕೆಯನ್ನು ಮುಂದುವರಿಸಬೇಕು ಎಂಬುದು ಪಾಲಕರ ಆಗ್ರಹ.

    ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಲವು ತಿಂಗಳಿಂದ ಹಾಲಿನ ಪುಡಿ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಪೌಷ್ಟಿಕಾಂಶದಿಂದ ಕೂಡಿರುವ ಹಾಲನ್ನು ಮಕ್ಕಳಿಗೆ ಪೂರೈಸುವ ಕೆಲಸ ಆಗಬೇಕಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸುವ ಮೂಲಕ ಆದಷ್ಟು ಬೇಗ ಹಾಲು ನೀಡುವ ಕಾರ್ಯ ಮಾಡಬೇಕು.
    -ನಾಗರಾಜ ಮತ್ತೂರು, ಪಾಲಕರು ಬಿದರಹಳ್ಳಿ

    ಹಾಲಿನ ಉತ್ಪಾದನೆ ಮತ್ತು ಸಂಗ್ರಹ ಇಲ್ಲದ ಕಾರಣ ಹಾಲಿನ ಪುಡಿ ಪೂರೈಕೆಗೆ ತೊಂದರೆಯಾಗುತ್ತಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಹಾಲು ಪೂರೈಕೆ ಸ್ಥಗಿತಗೊಂಡಿದೆ. ಬಾಡಿಗೆ ಕಟ್ಟಡದಲ್ಲಿನ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಹಾಗೂ ಶಿಥಿಲ ಕೇಂದ್ರಗಳ ನೂತನ ಕಟ್ಟಡಕ್ಕೆ ಕ್ರಮ ವಹಿಸಲಾಗಿದೆ.
    -ಮಹಾದೇವ ಇಸರನಾಳ. ಸಿಡಿಪಿಒ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts