More

  ಶೆಟ್ಟಿಕೆರೆಯಲ್ಲೀಗ ವಿದೇಶಿ ಪಕ್ಷಿಗಳ ಕಲರವ

  ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರ ಗ್ರಾಪಂ ವ್ಯಾಪ್ತಿಯ ಶೆಟ್ಟಿಕೇರಿಯಲ್ಲೀಗ ವಿದೇಶಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ. ಈ ಕೆರೆಯು ಚನ್ನಪಟ್ಟಣ, ಅಕ್ಕಿಗುಂದ ಗ್ರಾಮಗಳ ಮಧ್ಯದ ಗುಡ್ಡಗಳ ನಡುವಿನ ಅರಣ್ಯ ಪ್ರದೇಶದಲ್ಲಿದ್ದು ಹಕ್ಕಿಗಳ ವಾಸಕ್ಕೆ ಪ್ರಶಸ್ತ, ಪ್ರಶಾಂತ ವಾತಾವರಣದ ತಾಣವಾಗಿ ರೂಪುಗೊಂಡಿದೆ.

  ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ವ, ಭೂತಾನ್ ಮತ್ತು ಜಮ್ಮು-ಕಾಶ್ಮೀರದ ಲಡಾಕ್​ನಿಂದ ಬಂದಿರುವ 30 ಜಾತಿಯ ಸಾವಿರಾರು ವಿದೇಶಿ ಪಕ್ಷಿಗಳು ಮಾಗಡಿ ಕೆರೆ ಜತೆಗೆ ಶೆಟ್ಟಿಕೆರೆಯಲ್ಲೂ ಸ್ವಚ್ಛಂದವಾಗಿ ವಿಹರಿಸುತ್ತವೆ.

  ಮಾಗಡಿ ಕೆರೆ 134 ಎಕರೆ ಇದ್ದರೆ ಶೆಟ್ಟಿಕೆರೆ 234 ಎಕರೆ ವಿಸ್ತಾರವುಳ್ಳದ್ದಾಗಿದೆ. ಈ ವರ್ಷ ಮಾಗಡಿ ಕೆರೆಯಲ್ಲಿ ಅಪಾರ ಪ್ರಮಾಣದ ನೀರಿದ್ದು, ಹಿಂದಿನ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬಂದಿದ್ದವು. ನವೆಂಬರ್​ನಲ್ಲಿ ಆಗಮಿಸಿದ 8 ರಿಂದ 10 ಸಾವಿರ ಪಕ್ಷಿಗಳು ನಿತ್ಯ ಆಹಾರ ಅರಸಿ ಪಶುಪತಿಹಾಳ, ಸಂಶಿ, ರಾಮಗೇರಿ, ಗುಂಜಳ, ಯಳವತ್ತಿ, ಯತ್ನಳ್ಳಿ, ಗೊಜನೂರ, ಬಸಾಪುರ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಚರಿಸಿ ಮತ್ತೇ ಮಾಗಡಿ ಕೆರೆಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದವು. ಆದರೆ, ಕಳೆದ ನಾಲ್ಕಾರು ದಿನಗಳಿಂದ ಆಹಾರಕ್ಕಾಗಿ ದಿಕ್ಕು ಬದಲಿಸಿದ ಪಕ್ಷಿಗಳು ಆಹಾರ ಅರಸಿ ಶೆಟ್ಟಿಕೆರೆ ಮೇಲೆ ಹಾದು ಹೋಗುವಾಗ ಈ ಕೆರೆಯೂ ವಾಸಕ್ಕೆ ಸೂಕ್ತ ಎಂದು ಅರಿತ ಅರ್ಧದಷ್ಟು ಹಕ್ಕಿಗಳು ಶೆಟ್ಟಿಕೆರೆಯಲ್ಲಿಯೇ ಬಿಡಾರ ಹೂಡುತ್ತಿವೆ ಎನ್ನುತ್ತಾರೆ ಮಾಗಡಿ ಕೆರೆಯ ಪಕ್ಷಿ ಕಾವಲುಗಾರ ಸೋಮಣ್ಣ ಪಶುಪತಿಹಾಳ.

  ವಿದೇಶಿ ಅತಿಥಿಗಳಿವು

  ಬಾರ್ ಹೆಡೆಡ್ ಗೀಸ್ (ಪಟ್ಟೆತಲೆ ಹೆಬ್ಬಾತು) ಮಂಗೋಲಿಯಾ, ಸೈಬೇರಿಯಾ ದೇಶಗಳಿಂದ 7-8 ಸಾವಿರ ಕಿ.ಮೀ ದೂರದಿಂದ ಸಂತಾನಾಭಿವೃದ್ಧಿಗಾಗಿ ಬರುತ್ತವೆ. ಕ್ರೌಂಚ ಪಕ್ಷಿ (ಡೊಮಿಸಿಲ್ ಕ್ರೇನ್) ಇದರ ವಿಶೇಷತೆ ಎಂದರೆ ವಿಮಾನಕ್ಕಿಂತಲೂ ವೇಗ ಹಾಗೂ ಅತಿ ಎತ್ತರದಲ್ಲಿ ಹಾರಾಡುವ ಪಕ್ಷಿಯಾಗಿದೆ. ಕಂದು ಬಾತು (ಬ್ರಾಹ್ಮಿಣಿಡಕ್), ಬಣ್ಣದ ಕೊಕ್ಕರೆ (ಪೇಟೆಂಡ್ ಸ್ಪಾರ್ಕ್), ಬಿಳಿ ಕೆಂಬರಲು (ವೈಟ್ ಇಬೀಸ್) ಕರಿ ಕೆಂಬರಲು ( ಬ್ಲಾಕ್ ಹೆಡೆಡ್ ಇಬೀಸ್) ಈ ಎಲ್ಲ ಪಕ್ಷಿಗಳು ಹಿಂಡು ಹಿಂಡಾಗಿ ಇಲ್ಲಿನ ಹವಾಮಾನ ಬಯಸಿ ಜನವರಿವರೆಗೂ ಇಲ್ಲಿದ್ದು ಹೋಗುತ್ತವೆ ಎಂಬುದು ಪಕ್ಷಿತಜ್ಞರ ಅಭಿಪ್ರಾಯ. ಇವುಗಳ ಜತೆಗೆ ವರಟೆ ( ಸ್ಪಾಟ್ ಬಿಲ್ಡ್ ಡಕ್), ನೀರು ಕಾಗೆ (ಕೋರ್​ವೊರೆಂಟ್), ನೆರಳೆ ಜಂಬು ಕೋಳಿ (ವರ್ಷಲ್ ಮೋರ್ ಹೆನ್), ಬೂದು ಮಂಗಟೆ ಹಕ್ಕಿ ( ಗ್ರೇ ಹಾರ್ನ್ ಬಿಲ್) ಇನ್ನಿತರ ದೇಶಿ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಬೆಳಗ್ಗೆ 6 ಗಂಟೆಯಿಂದ 9 ರವರೆಗೆ ಹಾಗೂ ಸಂಜೆ 4 ರಿಂದ 6 ಗಂಟೆವರೆಗೆ ಆಹಾರ ಅರಸಿ ಸುತ್ತಲಿನ ರೈತರ ಜಮೀನುಗಳಲ್ಲಿನ ಶೇಂಗಾ, ಕಡಲೆ, ತೊಗರಿ, ಜೋಳ ಇತರೇ ಕಾಳು ಹಾಗೂ ಕೀಟಗಳನ್ನು ಹೆಕ್ಕಿ ತಿನ್ನುತ್ತವೆ. ಅಲ್ಲದೆ, ಕೆರೆಯಲ್ಲಿನ ಪಾಚಿ, ಜೊಂಡು, ಸಣ್ಣ ಹುಳು, ಮೀನಿನ ಮರಿಗಳನ್ನು ತಿಂದು ಮಾರ್ಚ್​ವರೆಗೆ ಇಲ್ಲಿಯೇ ಸ್ವಚ್ಛಂದವಾಗಿ ವಿಹರಿಸುತ್ತವೆ.

  ಮಾಂಸಪ್ರಿಯರ ಕೆಂಗಣ್ಣು !
  ಶೆಟ್ಟಿಕೇರಿಯಲ್ಲಿ ಅನುಕೂಲಕರ ವಾತಾವರಣವಿದ್ದರೂ ಇಲ್ಲಿನ ಪಕ್ಷಿಗಳ ಮೇಲೆ ಮಾಂಸಪ್ರಿಯರ ಕೆಂಗಣ್ಣು ಬಿದ್ದಿದೆ. ವಿದೇಶಿ ಪಕ್ಷಿಗಳ ಮಾಂಸದ ರುಚಿ ನೋಡಲು ಅವುಗಳನ್ನು ಹಿಡಿಯಲು ವಿವಿಧ ತಂತ್ರಗಳನ್ನು ಬಳಸುತ್ತಿದ್ದಾರೆ. ಅಲ್ಲದೆ, ಕೆಲವರು ದುಡ್ಡಿನ ಆಸೆಗಾಗಿ ಪಕ್ಷಿಗಳನ್ನು ಹಿಡಿದು ಮಾರುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಮಾಗಡಿ ಕೆರೆಯಂತೆ ಶೆಟ್ಟಿಕೆರೆಯಲ್ಲಿನ ವಿದೇಶಿ ಅತಿಥಿಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆಯವರು ನಿಭಾಯಿಸಬೇಕು. ಪಕ್ಷಿಗಳನ್ನು ವೀಕ್ಷಿಸಲು ಅರಣ್ಯ ಇಲಾಖೆಯವರು ವೀಕ್ಷಣಾ ಗೋಪುರ ನಿರ್ವಿುಸಬೇಕು. ಸ್ವಚ್ಛತೆ ಮತ್ತು ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಶೆಟ್ಟಿಕೇರಿ ಗ್ರಾಮದ ದೀಪಕ ಲಮಾಣಿ, ರಮೇಶ ಲಮಾಣಿ, ಇತರರು ಆಗ್ರಹಿಸಿದ್ದಾರೆ.

  ನಾಲ್ಕೈದು ದಿನಗಳಿಂದ ಶೆಟ್ಟಿಕೆರೆಗೆ ಸಾವಿರಾರು ಪಕ್ಷಿಗಳು ಬಂದಿವೆ. ಕೆರೆಯಲ್ಲಿನ ವಿದೇಶಿ ಪಕ್ಷಿಗಳ ಸಂರಕ್ಷಣೆ ಮತ್ತು ಸುರಕ್ಷತೆಗಾಗಿ ಇಲಾಖೆಯೂ ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಪಕ್ಷಿಗಳು ಇಲ್ಲಿರುವಷ್ಟು ಕಾಲ ಇಲಾಖೆಯ ಒಬ್ಬ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗುವುದು.

  | ಸತೀಶ ಪೂಜಾರ ಅರಣ್ಯಾಧಿಕಾರಿ, ಪ್ರಾದೇಶಿಕ ವಲಯ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts