More

    ಹೆದ್ದಾರಿ ಪಯಣಿಗರ ಮುಗಿಯದ ದಾರಿ…

    ಹೆದ್ದಾರಿಗಳಲ್ಲಿ ಅಲ್ಲಲ್ಲಿ ಒಂಟಿಯಾಗಿ, ಒಮ್ಮೊಮ್ಮೆ ಗುಂಪುಗುಂಪಾಗಿ ಸಾಗುತ್ತಲೇ ಇವೆ ಕನಸುಗಳು… ದೂರದಲ್ಲೆಲ್ಲೂ ಅಪಾಯದ ಮುನ್ಸೂಚನೆ, ಒಮ್ಮೆಲೆ ಎಲ್ಲವೂ ಕಣ್ಮರೆ… ಆದರೆ, ಪಯಣ ನಿರಂತರ ಸಾಗುತ್ತಲೇ ಇರಬೇಕು. ಒಬ್ಬೊಬ್ಬರದೂ ಒಂದೊಂದು ಕತೆ.

    ಉತ್ತರಪ್ರದೇಶದ ಗ್ರೇಟರ್​ ನೊಯ್ಡಾದಲ್ಲಿ ಕೆಲಸ ಮಾಡುವ ಬಿಹಾರಿ ಯುವಕ ಓಂ ಪ್ರಕಾಶ್​ ಜೇಬಲ್ಲಿರೋದು ಕೇವಲ ಹತ್ತು ರೂಪಾಯಿಯಷ್ಟೇ… ಮುಂದೆ ಹೋಗುತ್ತಿರುವ ಮತ್ತೊಂದು ಗುಂಪಿನವರ ಬ್ಯಾಗ್​ನಲ್ಲಿರೋದು ಇನ್ನೊಂದು ಹೊತ್ತಿಗೆ ಖಾಲಿಯಾಗುವ ಬಿಸ್ಕೆಟ್​ ಪೊಟ್ಟಣಗಳಷ್ಟೇ. ಆದರೆ, ಊರನ್ನು ಸೇರಿಕೊಳ್ಳಬೇಕೆಂಬ ತವಕವೊಂದೇ ಸಾವಿರ ಕಿ.ಮೀ. ಪಯಣವನ್ನು ಮುನ್ನಡೆಸುತ್ತಿದೆ.

    ತಮ್ಮೂರಿನ ದಿಕ್ಕಿಗೆ ಸಾಗುವ ಯಾವುದೇ ವಾಹನ ಅವರ ಪಾಲಿಗೆ ಪುಷ್ಪಕ ವಿಮಾನವಿದ್ದಂತೆ. ಕೈಜೋಡಿಸಿ, ಗೋಗರೆದು ನಿಲ್ಲಿಸಲು ಯತ್ನಿಸುತ್ತಾರೆ. ಆದರೆ, ಇದನ್ನೇ ಹಣ ಸಂಪಾದನೆಗೆ ದಾರಿ ಮಾಡಿಕೊಂಡವರು ಸಾವಿರಾರು ರೂಪಾಯಿ ವ್ಯವಹಾರ ಕುದುರಿಸಲು ಮುಂದಾಗುತ್ತಾರೆ. ‘ಅಯ್ಯೋ ಬಾರಯ್ಯ.. ದೇವರು ಕೈಬಿಡೋಲ್ಲ ಹತ್ತು ಸಾಧ್ಯವಾದಲ್ಲಿವರೆಗೆ ಕೊಂಡೊಯ್ಯುತ್ತೇನೆ’ ಎನ್ನುವ ಉದಾರ ಮನಸ್ಸಿನವರೂ ಇಲ್ಲದಿಲ್ಲ.

    ಇದನ್ನೂ ಓದಿ; ತಾಯ್ನಾಡು ಕರೆಸಿಕೊಳ್ಳುತ್ತಿಲ್ಲ, ಭಾರತ ವೀಸಾ ನೀಡುತ್ತಿಲ್ಲ; 55 ದಿನಗಳಿಂದ ವಿಮಾನ ನಿಲ್ದಾಣವೇ ಆತನಿಗೆ ಜಗತ್ತು

    ಹೆದ್ದಾರಿಗಳಲ್ಲಿ ಸಾಗುವುದು ಅಪಾಯಕಾರಿ… ವಾಹನಗಳಿಂದಲ್ಲ… ಆಗಾಗ ಸಾಗುವ ಪೊಲೀಸ್​ ಜೀಪ್​ಗಳದ್ದು. ಅವರಿಗೆ ಕಾಣದಂತೆ ರಸ್ತೆಯಂಚಿಗೋ, ಮರದ ಹಿಂದಕ್ಕೋ ಅಡಗಿಕೊಳ್ಳುತ್ತಾರೆ. ಅವರಿಗೂ ಗೊತ್ತು ಹೆದ್ದಾರಿಯನ್ನು ಅಕ್ಷರಶಃ ಬಂದ್​ ಮಾಡಿದರೆ ಹಿನ್ನೀರಿನಂತೆ ಜನರು ತುಂಬಿಕೊಳ್ಳುತ್ತಾರೆ. ಅಲ್ಲೊಬ್ಬರು, ಇಲ್ಲೊಬ್ಬರ ಕತೆ ಕೇಳಿ ಮುಂದೆ ಸಾಗಲು ಬಿಡುತ್ತಾರೆ. ಏಕೆಂದರೆ ಮುಂದೆ ಚೆಕ್​ಪೋಸ್ಟ್​ಗಳಲ್ಲಿದ್ದವರು ಇವರನ್ನು ಸಂಭಾಳಿಸಿಕೊಳ್ಳುತ್ತಾರೆ ಎಂಬ ಉದಾಸೀನವೂ ಕಾರಣ.

    ಲಕ್ನೋದ ಟೋಲ್​ಪ್ಲಾಜಾದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಸೇರಿದ ನೂರಾರು ಕಾರ್ಮಿಕರು ಜಮಾಯಿಸಿದ್ದಾರೆ. ಅಲ್ಲಿಗೆ ಬರುವ ಖಾಲಿ ವಾಹನ ಅಥವಾ ಟ್ರಕ್​ಗಳನ್ನು ತಡೆದು ನಿಲ್ಲಿಸುವ ಪೊಲೀಸರು ಸಮೀಪದ ರೈಲು ನಿಲ್ದಾಣಗಳಿಗೆ ಅವರನ್ನೆಲ್ಲ ರವಾನಿಸುತ್ತಿದ್ದಾರೆ. ಅಲ್ಲೆಲ್ಲ ಅವರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಬೇರೆಲ್ಲೂ ಕರೆದೊಯ್ಯಬೇಡ ಎನ್ನುತ್ತಾರೆ.
    ನಮ್ಮೂರಿಗೆ ಮತ್ತಷ್ಟು ಹತ್ತಿರವಾದೇವು ಎಂಬ ಭಾವ ಅವರಲ್ಲಿ. ಆದರೆ, ಊರಿನ್ನೂ ತಲುಪಿಲ್ಲ. ತಮ್ಮಂತೆಯೇ ನೂರಾರು ಜನರು ಮತ್ತಲ್ಲಿ ಜಮಾಯಿಸುತ್ತಿದ್ದಾರೆ. ಅವರಲ್ಲಿ ಮತ್ತೆ ಹೊಸ ನಿರೀಕ್ಷೆಗಳು ಮತ್ತೆ ಗರಿಗೆದರುತ್ತವೆ.

    ಇದನ್ನೂ ಓದಿ; ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​

    ಸಂಬಳ ಕೊಡದೇ ಸಾಗ ಹಾಕಿದ ಮೇಸ್ತ್ರಿ, ಬಾಡಿಗೆ ನೀಡದ್ದಕ್ಕೆ ಮನೆ ಖಾಲಿ ಮಾಡಿಸಿದ ಮನೆಯೊಡೆಯ, ಊರಲ್ಲಿ ಅಣ್ಣನ ಮದುವೆ ಮಾಡಲಾಗಲಿಲ್ಲ, ಅಪ್ಪನನ್ನು ಆಸ್ಪತ್ರೆಗೆ ತೋರಿಸಲಾಗುತ್ತಿಲ್ಲ.. ಇಂಥದ್ದೇ ಕತೆಗಳು. ಕರೊನಾ ಬಗ್ಗೆ ಯಾರಲ್ಲೂ ಮಾತುಗಳಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಚಿಂತೆಯಿಲ್ಲ.. ಬಿಸಿಲಿಗೆ ನೆತ್ತಿ ಸುಟ್ಟರೂ ಆದೀತೂ.. ದೇಹದ ತಾಪಮಾನ ಏರದಿದ್ದರೆ ಸಾಕು. ನಾವೆಲ್ಲ ಹೇಗೋ ಊರು ಸೇರಿಕೊಳ್ಳಬಹುದು ಎಂಬುದಷ್ಟೇ ಅವರ ಚಿಂತೆ.

    ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts