More

    ಕುತೂಹಲ ಘಟ್ಟದತ್ತ ಮೇಯರ್ ಚುನಾವಣೆ

    ದಾವಣಗೆರೆ: ಪಾಲಿಕೆ ಸದಸ್ಯರ ಆಯ್ಕೆಯಾಗಿ ಎರಡು ತಿಂಗಳು ಸಮೀಪಿಸಿದೆ. ತಡವಾಗಿ ಮೇಯರ್-ಉಪಮೇಯರ್ ಚುನಾವಣೆ ಘೋಷಣೆಯಾದರೂ ಸುಸೂತ್ರವಾಗಿ ನಡೆಯುವ ಲೆಕ್ಕಾಚಾರವಿತ್ತು. ಅದೂ ಕೂಡ ಕೈ ತಪ್ಪುವ ಲಕ್ಷಣಗಳು ಕಾಣುತ್ತಿವೆ. ಎಲೆಕ್ಷನ್‌ಗೆ ಒಂದು ದಿನ ಬಾಕಿ ಇರುವಂತೆಯೇ ಕುತೂಹಲ ಘಟ್ಟದತ್ತ ಸಾಗುತ್ತಿದೆ.

    ಚುನಾವಣೆಗಾಗಿ ಸಂಖ್ಯಾಬಲ ಪ್ರದರ್ಶಿಸುವ ಕಸರತ್ತು, ತಂತ್ರ-ಪ್ರತಿತಂತ್ರ ಉಭಯ ಪಕ್ಷದಲ್ಲೂ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿಯ ಎಲ್ಲ ಪಾಲಿಕೆ ಸದಸ್ಯರು ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ. ಅಧಿಕಾರ ಹಿಡಿಯುವ ಪ್ರತಿಷ್ಠೆಯಿಂದಾಗಿ ದೂರದಲ್ಲಿ ನೆಲೆಸಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರ ಹೆಸರು ಪಾಲಿಕೆಯ ಮತದಾರರ ಯಾದಿಯಲ್ಲಿ ಸೇರ್ಪಡೆಯಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆಯೂ ಚುನಾವಣಾ ವೀಕ್ಷಕ ಹರ್ಷಗುಪ್ತಾ ಸೋಮವಾರ, ಮತದಾರರ ಪಟ್ಟಿಯಲ್ಲಿ ಎಂಎಲ್ಸಿಗಳು ತೋರಿಸಿದ್ದ ಬಾಡಿಗೆ ಮನೆಯ ವಿಳಾಸಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ದಿಢೀರ್ ಪರಿಶೀಲನೆ ನಡೆಸಿದ್ದು ಮತ್ತಷ್ಟು ಕೌತುಕ ಮೂಡಿಸಿದೆ.

    ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ, ತಾವೇ ಅಧಿಕಾರ ಗದ್ದುಗೆ ಹಿಡಿಯುವುದಾಗಿ ಸಮರ್ಥನೆ ಮಾಡಿಕೊಂಡಿದ್ದರು. ಕೆಲವರು ಎಂಎಲ್ಸಿಗಳು ನಕಲಿ ವಿಳಾಸ ನೀಡಿದ್ದಾಗಿ ಕಾಂಗ್ರೆಸ್‌ನ ಪಾಲಿಕೆ ಸದಸ್ಯರಾದ ಎ. ನಾಗರಾಜ್, ದೇವರಮನಿ ಶಿವಕುಮಾರ್ ಭಾನುವಾರವಷ್ಟೆ ದೂರು ನೀಡಿದ್ದರು.
    ದೂರಿದ ಹಿನ್ನೆಲೆಯಲ್ಲಿ ಮತದಾರರ ಯಾದಿಯಲ್ಲಿ ನಮೂದಿಸಿದಂತೆ ದಂತ ವೈದ್ಯಕೀಯ ಕಾಲೇಜು ರಸ್ತೆಯಲ್ಲಿ ಕೆ.ಸಿ.ಕೊಂಡಯ್ಯ, ವಿದ್ಯಾನಗರದಲ್ಲಿ ತೇಜಸ್ವಿನಿಗೌಡ, ಲಕ್ಷ್ಮೀಪ್ಲೋರ್ ಮಿಲ್ ಸಮೀಪ ವೈ.ಎ.ನಾರಾಯಣಸ್ವಾಮಿ, ನಿಜಲಿಂಗಪ್ಪ ಬಡಾವಣೆಯ ಯು.ಬಿ. ವೆಂಕಟೇಶ್ ವಿಳಾಸಗಳಿಗೆ ತೆರಳಿದಾಗ ಅಲ್ಲಿ ಯಾವುದೇ ಎಂಎಲ್ಸಿಗಳು ವಾಸವಿರಲಿಲ್ಲ. ಬದಲಾಗಿ ಬೇರೆ ಸಾರ್ವಜನಿಕರು ವಾಸವಿದ್ದುದನ್ನು ಖಚಿತಪಡಿಸಿಕೊಂಡರು.

    ಬಿಜೆಪಿಯ 8 ಮಂದಿ, ಕಾಂಗ್ರೆಸ್‌ನ 6 ಜನ ಸೇರಿ ಒಟ್ಟು 14 ಎಂಎಲ್ಸಿಗಳು ಮತದಾರರ ಪಟ್ಟಿಯಲ್ಲಿದ್ದಾರೆ. ಈ ಪೈಕಿ ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಮತ್ತು ಮೋಹನ್‌ಕುಮಾರ್ ಕೊಂಡಜ್ಜಿ ಬಿಟ್ಟರೆ ಎಲ್ಲ 12 ಎಂಎಲ್ಸಿಗಳೂ ಪರಸ್ಥಳದವರು ಎಂಬ ಆರೋಪ ಕೇಳಿಬಂದಿತ್ತು. ಉಳಿದ ಎಂಎಲ್ಸಿಗಳ ವಿಳಾಸದ ತಪಾಸಣೆ ಕಾರ್ಯ ಕೂಡ ಚುರುಕಾಗಿದೆ. ಬಾಡಿಗೆ ಕರಾರನ್ನು ಮಾತ್ರ ನೀಡಿರುವ ಎಂಎಲ್ಸಿಗಳು ಮತದಾರರ ಪಟ್ಟಿ ಬದಲಾದ ಬಗ್ಗೆ ಆಯೋಗಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲ ವಿಳಾಸಗಳನ್ನೂ ಪರಿಶೀಲಿಸಿದ ಬಳಿಕ ನಕಲಿ ವಿಳಾಸದಲ್ಲಿರುವ ಎಂಎಲ್ಸಿಗಳ ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವುದೇ ಎಂಬುದನ್ನು ತಿಳಿಯಲು ನಾಳೆವರೆಗೂ ಕಾಯಲೇಬೇಕಿದೆ. ಹೀಗಾಗಿ ಚುನಾವಣೆ ಕದನದ ಕುತೂಹಲವಿನ್ನೂ ಸಶೇಷ.

    ದೂರಿನ ಹಿನ್ನೆಲೆಯಲ್ಲಿ ಕೆಲವು ಎಂಎಲ್ಸಿಗಳ ವಿಳಾಸದಲ್ಲಿ ಪರಿಶೀಲನೆ ನಡೆಸಿದಾಗ ವಾಸಕ್ಕಿರಲಿಲ್ಲ ಎಂಬುದು ಗೋಚರಕ್ಕೆ ಬಂದಿದೆ. ಹೀಗಾಗಿ ಆಯೋಗಕ್ಕೆ ವರದಿ ಸಲ್ಲಿಸಿ, ಮಂಗಳವಾರವೇ ಸೂಕ್ತ ತೀರ್ಮಾನಕ್ಕೆ ಬರಲಾಗುವುದು.
    ಹರ್ಷ ಗುಪ್ತಾ
    ಚುನಾವಣಾ ವೀಕ್ಷಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts