More

    ಗೋಹತ್ಯೆ ವಿರುದ್ಧ ಕಠಿಣ ಕ್ರಮ

    ಶಿವಮೊಗ್ಗ: ಇನ್ನು ಮುಂದೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಕಾಯ್ದೆ ಉಲ್ಲಂಘಿಸಿ ಗೋಹತ್ಯೆ ನಡೆಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೇಯರ್ ಸುವರ್ಣಾ ಶಂಕರ್ ಎಚ್ಚರಿಸಿದರು.

    ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಇದರ ಸಮರ್ಪಕ ಅನುಷ್ಠಾನವಾಗಬೇಕಿದೆ. ಪೊಲೀಸ್ ಇಲಾಖೆ ಸೇರಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಸೋಮವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಾಯ್ದೆ ಅನುಷ್ಠಾನದಲ್ಲಿ ಗೋಮಾಂಸ ಮಾರಾಟಗಾರರು ಸಹಕರಿಸಬೇಕು. ಕಾಯ್ದೆ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ. ಪೊಲೀಸ್ ಅಧಿಕಾರಿಗಳು ಕೂಡ ಕಾಯ್ದೆ ಉಲ್ಲಂಘನೆ ಬಗ್ಗೆ ಗಮನಿಸಬೇಕು. ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಎಲ್ಲರಿಗೂ ಈ ಬಗ್ಗೆ ಅರಿವು ಮೂಡಿಬೇಕಿದೆ ಎಂದರು.

    ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಚರ್ಚೆ ಆರಂಭಿಸಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಕಾಯ್ದೆ ಜಾರಿ ಮಾಡಿರುವುದು ಸಮಯೋಚಿತವಾಗಿದೆ. ಅನೇಕ ವರ್ಷಗಳ ಒತ್ತಾಯ ಫಲ ನೀಡಿದೆ. ಈ ಕಾಯ್ದೆ ಸರಿಯಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನವಾಗಬೇಕಿದೆ ಎಂದರು.

    ಈ ವೇಳೆ ಕಾಂಗ್ರೆಸ್​ನ ರಮೇಶ್ ಹೆಗ್ಡೆ, 13 ವರ್ಷ ಮೇಲ್ಪಟ್ಟ ಗೋವುಗಳ ಹತ್ಯೆಗೆ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಇದು ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆಯಲ್ಲ ಎಂದು ಆಡಳಿತ ಪಕ್ಷದವರ ಕಾಲೆಳೆದರು. ಗೋಹತ್ಯೆ ಜತೆಗೆ ಗೋಮಾಂಸ ರಫ್ತನ್ನೂ ನಿಷೇಧಿಸಬೇಕೆಂದು ಒತ್ತಾಯಿಸಿದರು.

    ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್​ನ ಯಮುನಾ ರಂಗೇಗೌಡ, ಗೋಮಾಂಸ ರಫ್ತು ಮಾಡುವವರಲ್ಲಿ ಹೆಚ್ಚು ಮಂದಿ ಬಿಜೆಪಿ ಮುಖಂಡರು, ಬಿಜೆಪಿ ಬೆಂಬಲಿಗರು ಹಾಗೂ ಸಂಘ ಪರಿವಾರದವರು ಇದ್ದಾರೆ ಎಂದು ಹೇಳಿದ್ದು ಅಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಯಮುನಾ ರಂಗೇಗೌಡ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಉಪಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನಗತ್ಯ ಚರ್ಚೆ ಆಕ್ಷೇಪಾರ್ಹ. ಇದರಲ್ಲಿ ಸಂಘ ಪರಿವಾರದವರನ್ನು ಎಳೆದುತರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಭಾ ನಡಾವಳಿಕೆ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಚರ್ಚೆಗೆ ವಿರಾಮ ಹಾಡಿದರು. ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts