More

    ಡಿಸಿ ಕಚೇರಿ ಆವರಣದಲ್ಲಿ ಗುಜರಿ ಕೇಂದ್ರ: ಆವರಣದಲ್ಲೇ ಅಂಗಡಿ ಮಾಡಿಕೊಂಡ ವ್ಯಾಪಾರಿ

    ಮಂಗಳೂರು: ಜಿಲ್ಲಾಡಳಿತದ ಕೇಂದ್ರ ಭಾಗವಾದ ಜಿಲ್ಲಾಧಿಕಾರಿ ಕಚೇರಿ ಆವರಣವೇ ವ್ಯಾಪಾರಕ್ಕೆ ತೆರೆದುಕೊಟ್ಟಂತಾಗಿದೆ! ಹ್ಯಾಮಿಲ್ಟನ್ ವೃತ್ತದಲ್ಲಿರುವ ವಿಶಾಲವಾದ ಡಿಸಿ ಕಚೇರಿ ಆವರಣದಲ್ಲಿ ಈಗ ಪೀಠೋಪಕರಣಗಳ ವ್ಯಾಪಾರಿಯೊಬ್ಬರು ಸೆಕೆಂಡ್ ಹ್ಯಾಂಡ್ ವ್ಯಾಪಾರ ಶುರು ಮಾಡಿದ್ದಾರೆ.

    ಬೇಕು ಬೇಕಾದಂತೆಲ್ಲ ಈ ವ್ಯಾಪಾರಿ ಎಲ್ಲೆಲ್ಲಿಂದಲೋ ಹಳೇ ಪೀಠೋಪಕರಣಗಳನ್ನು ಖರೀದಿಸಿ ತಂದು ಇಲ್ಲಿ ಅದಕ್ಕೆ ಪೇಂಟ್ ಬಳಿದು ಮತ್ತೆಲ್ಲಿಗೋ ಮಾರಾಟ ಮಾಡುತ್ತಾರೆ. ಲಭ್ಯ ಮಾಹಿತಿ ಪ್ರಕಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸೆಯುವಂತಹ ವಸ್ತುಗಳು, ಹಳೇ ಪೇಪರು ಇತ್ಯಾದಿಗಳನ್ನು ಈ ವ್ಯಾಪಾರಿಗೆ ನೀಡಲಾಗುತ್ತಿತ್ತು. ಕೆಲವೊಂದು ವಸ್ತುಗಳನ್ನು ರಿಪೇರಿ ಮಾಡುವ ಕೆಲಸವನ್ನೂ ಅಧಿಕೃತವೋ ಅನಧಿಕೃತವೋ ಆತನಿಗೆ ನೀಡಲಾಗುತ್ತಿತ್ತು. ಇದನ್ನೇ ಬಳಸಿಕೊಂಡ ವ್ಯಾಪಾರಿ ಈಗ ಅಲ್ಲೇ ಕಾಯಂ ಝಂಡಾ ಹೂಡಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ.

    ಸದ್ಯ ವಿವಿಧ ಕಡೆಗಳಿಂದ ತಂದಿರುವ ಮೇಜು, ಕುರ್ಚಿ, ಪೆಟ್ಟಿಗೆಗಳು, ಹಳೆಯ ಡಬ್ಬ, ವಾಟರ್ ಕೂಲರ್ ಇತ್ಯಾದಿಗಳು ಇಲ್ಲಿ ರಾಶಿ ಬಿದ್ದಿವೆ. ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಹಾಸ್ಟೆಲ್‌ಗಳಿಂದ ನಮಗೆ ಹಳೇ ಪೀಠೋಪಕರಣ ಹರಾಜಿನಲ್ಲಿ ಸಿಗುತ್ತದೆ. ಅದನ್ನು ಸರಿಪಡಿಸಿ ಮಾರಾಟ ಮಾಡುತ್ತಿದ್ದೇವೆ ಎಂದು ‘ವಿಜಯವಾಣಿ’ಗೆ ವ್ಯಾಪಾರಿ ಪ್ರತಿಕ್ರಿಯಿಸಿದ್ದಾರೆ.

    ಹಳೇ ರಿಜಿಸ್ಟ್ರಾರ್ ಕಚೇರಿಯೇ ಕಾರ್ಯಕ್ಷೇತ್ರ:  ಮಂಗಳೂರು ಡಿಸಿ ಕಚೇರಿ ಆವರಣದ ಹಳೇ ಸಬ್‌ರಿಜಿಸ್ಟ್ರಾರ್ ಕಚೇರಿ ಪಾಳುಬಿದ್ದಿದ್ದು, ಅದನ್ನೇ ಈ ವ್ಯಾಪಾರಿ ಕಾರ್ಯಕ್ಷೇತ್ರ ಮಾಡಿಕೊಂಡಂತೆ ಕಾಣುತ್ತಿದೆ. ಇದರ ಸುತ್ತ ಬೇಲಿ, ಹಾಗೂ ಕಳೆ ಗಿಡಗಳೂ ಬೆಳೆದುಕೊಂಡಿರುವುದರಿಂದ ಡಿಸಿ ಕಚೇರಿಗೆ ಬರುವವರಿಗೆ, ಅಧಿಕಾರಿಗಳ ಗಮನಕ್ಕೆ ಬರುವ ಸಾಧ್ಯತೆ ಕಡಿಮೆ. ಇಲ್ಲೇ ವ್ಯಾಪಾರಿ ಕೆಲಸದವರನ್ನು ಇಟ್ಟುಕೊಂಡು ಹಳೇ ಪೀಠೋಪಕರಣಗಳಿಗೆ ಪೇಂಟ್ ಮಾಡುವುದು, ಸಣ್ಣಪುಟ್ಟ ದುರಸ್ತಿ ಪಡಿಸಿ ಮಾರಾಟ ಮಾಡುತ್ತಾರೆ.

    ಕೆಲ ತಿಂಗಳ ಹಿಂದೆಯೇ ಹಳೇ ತಾಲೂಕು ಕಚೇರಿಯ ಕೆಲವು ವಸ್ತುಗಳನ್ನು ಈ ವ್ಯಾಪಾರಿ ಹರಾಜಿನಲ್ಲಿ ವಹಿಸಿಕೊಂಡಿದ್ದು, ಇಲ್ಲಿಂದ ಸ್ಥಳಾಂತರ ಮಾಡಿಲ್ಲ. ಈಗಾಗಲೇ ಕರೆದು ಎಚ್ಚರಿಕೆಯನ್ನೂ ನೀಡಲಾಗಿತ್ತು, ಆದರೆ ಇನ್ನೂ ಆತ ಸ್ಥಳಾಂತರ ಮಾಡಿಲ್ಲ. ಇದು ಅಧಿಕೃತ ಅಲ್ಲ. ಸಬ್ ರಿಜಿಸ್ಟ್ರಾರ್ ಹಳೇ ಕಚೇರಿ ಬಳಿ ಈ ರೀತಿ ಕಾರ್ಯಾಚರಣೆ ಮಾಡುವುದಕ್ಕೆ ಅವಕಾಶ ಇಲ್ಲ.
    ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts