More

    ಸಿಎಂ ಮೇಲೆ ಮುಗಿಬಿದ್ದ ಸದಸ್ಯರು: ತಿರುಗೇಟು ನೀಡಿದ ಮುಖ್ಯಮಂತ್ರಿ

    ಶಿವಮೊಗ್ಗ: ನಾನೇನು ಕುರ್ಚಿಗೆ ಅಂಟಿಕೊಂಡಿಲ್ಲ. ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಆದರೂ ನೀವು (ಪ್ರತಿಪಕ್ಷದವರು) ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದೀರಿ ಎಂದು ಸಿಎಂ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    195 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಬರ ಪರಿಹಾರಕ್ಕಾಗಿ 340 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಮೋಡ ಬಿತ್ತನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಬೆಳೆ ನಷ್ಟದ ಸಮೀಕ್ಷೆಯೂ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
    ಅರೇ..! ಇದೇನಿದು? ಚಳಿಗಾಲದ ಅಧಿವೇಶನ ಆರಂಭವಾಗಲು ಇನ್ನೂ 20 ದಿನಗಳಿವೆ. ಈಗ ಯಾವ ಅಧಿವೇಶನ ಎಂಬ ಪ್ರಶ್ನೆ ಉದ್ಭವವಾಯಿತೆ? ಬರದ ಮೇಲಿನ ಚರ್ಚೆ ನಡೆದಿದ್ದು, ಗುರುವಾರ ಜಿಪಂ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕಲ್ಪಿತ ಯುವ ಸಂಸತ್ ಸ್ಪರ್ಧೆಯಲ್ಲಿ.
    ಜಿಲ್ಲೆಯ ವಿವಿಧ ಶಾಲೆಗಳ 37 ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬರ, ಗ್ಯಾರಂಟಿ ಯೋಜನೆಗಳು, ಶಿಕ್ಷಣ ಇಲಾಖೆ ಲೋಪಗಳು, ಕಳಪೆ ಕಾಮಗಾರಿ, ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ…ಹೀಗೆ ಹಲವು ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಬೆಳಕು ಚೆಲ್ಲಿದರು. ಆಡಳಿತ ಪಕ್ಷದತ್ತ ಪ್ರತಿಪಕ್ಷಗಳು ಪ್ರಶ್ನೆಗಳ ಸುರಿಮಳೆಗೈದವು. ಅತ್ತ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದವರ ಟೀಕಾಸ್ತ್ರವನ್ನು ಸಮರ್ಥವಾಗಿ ಎದುರಿಸಿದರು.
    ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಸಮರ್ಪಕವಾಗಿ ಪ್ರತಿ ತಿಂಗಳೂ ಹಣ ಜಮೆ ಮಾಡುತ್ತಿಲ್ಲ. ಇನ್ನೊಂದೆಡೆ ಸರ್ಕಾರದ ಗ್ಯಾರಂಟಿಗಳಿಂದ ಜನರು ಸೋಮಾರಿಗಳಾಗುತ್ತಿದ್ದಾರೆ. ಮಹಿಳೆಯರ ಶೋಷಣೆ ಹೆಚ್ಚುತ್ತಿದೆ. ಹಲವು ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಪ್ರತಿಪಕ್ಷದವರು ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
    ಕಳಪೆ ಕಾಮಗಾರಿಗಳು ನಡೆಯುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರಸ್ತೆಗಳಲ್ಲಿ ದೊಡ್ಡ ಹೊಂಡಗಳಾಗಿವೆ. ಅದನ್ನು ಮುಚ್ಚಲೂ ಆಡಳಿತ ಯಂತ್ರ ಮನಸ್ಸು ಮಾಡುತ್ತಿಲ್ಲ ಎಂಬ ಪ್ರತಿಪಕ್ಷದವರ ಟೀಕೆಗೆ, ಈ ರಸ್ತೆಗಳು ನೀವು ಅಧಿಕಾರದಲ್ಲಿ ಇದ್ದಾಗ ನಿರ್ಮಾಣವಾದವು. ನಮ್ಮ ಆಡಳಿತದಲ್ಲಿ ಕಳಪೆ ಕಾಮಗಾರಿಗೆ ಅವಕಾಶವೇ ಇಲ್ಲ ಎಂದು ಆಡಳಿತಾರೂಢ ಪಕ್ಷದ ಸದಸ್ಯರು ತಿರುಗೇಟು ನೀಡಿದರು.
    ಕಲ್ಪಿತ ಸಂಸತ್‌ನಲ್ಲಿ ಮುಖ್ಯಮಂತ್ರಿಯಾಗಿ ಸಾಗರ ಸುಭಾಷ್ ನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಬಿ.ಜಿ.ಭೂಮಿಕಾ ಗಮನಸೆಳೆದರು. ಪ್ರತಿಪಕ್ಷ ನಾಯಕಿಯಾಗಿ ಶಿರಾಳಕೊಪ್ಪ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್.ಎಂ.ಸ್ಫೂರ್ತಿ ಸಮರ್ಥವಾಗಿ ಪ್ರಶ್ನೆಗಳನ್ನು ಮಂಡಿಸಿದರಾದರೂ ಅವರಿಗೆ ಸಿಕ್ಕ ಅವಕಾಶ ತುಂಬ ಕಡಿಮೆ. ಸ್ಪೀಕರ್ ಸ್ಥಾನದಲ್ಲಿ ಕುಳಿತ ಮಾಸೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಜಿ.ನವ್ಯಾ ಸದನವನ್ನು ಸಮರ್ಥವಾಗಿ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts