More

    ಮೇಕೆದಾಟು ಯೋಜನೆಗೆ ಅವಕಾಶ ಕೊಡಲ್ಲ: ಸ್ಟಾಲಿನ್ ನಡೆ ಕಾಂಗ್ರೆಸ್‌ಗೆ ಬಿಸಿತುಪ್ಪ, ಮೈತ್ರಿಗೆ ಪ್ರಬಲ ಅಸ್ತ್ರ

    ಮಂಡ್ಯ: ಕಾವೇರಿ ಕಣಿವೆ ಭಾಗದ ಜನರ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವಕಾಶ ನೀಡಲ್ಲ ಎಂದಿರುವುದು ಮಿತ್ರಪಕ್ಷ ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿದೆ. ಇದು ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರಬಲ ಅಸ್ತ್ರವಾಗಿದೆ.
    ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷವಾಗಿರುವ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟೆಯ ಅಂಶವನ್ನು ಪ್ರಸ್ತಾಪಿಸಿದೆ. ಅದರಂತೆ ತಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಮೇಕೆದಾಟು ವಿಷಯವನ್ನೇ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಿದ ಕಾಂಗ್ರೆಸ್‌ಗೆ ಡಿಎಂಕೆ ನಡೆ ಮುಜುಗರ ತಂದಿಟ್ಟಿದೆ. ಮಾತ್ರವಲ್ಲದೆ ಚುನಾವಣೆಯಲ್ಲಿ ವಿಪಕ್ಷಕ್ಕೆ ಪ್ರಮುಖ ಅಂಶವಾಗಿದೆ.
    ಈ ಕುರಿತು ಪಾಂಡವಪುರ ಪಟ್ಟಣದಲ್ಲಿ ಮಾತನಾಡಿರುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ತಮಿಳುನಾಡು ಸಿಎಂ ಸ್ಟಾಲಿನ್ ಮೇಕೆದಾಟು ಡ್ಯಾಂ ಕಟ್ಟಲು ಬಿಡಲ್ಲವೆಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಅಂತವರ ಸಹವಾಸ ಮಾಡಿರುವ ಕಾಂಗ್ರೆಸ್‌ನವರಿಗೆ ನಾಚಿಗೆಯಾಗಬೇಕು. ರಾಜ್ಯದ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
    ಮಂಡ್ಯ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅವರೇ ಮೈತ್ರಿ ಅಭ್ಯರ್ಥಿ. ನಾನೆ ನಿಂತು ಚುನಾವಣೆ ಮಾಡಲಿದ್ದೇನೆ. ಮಾತ್ರವಲ್ಲದೆ ಅತ್ಯಂತ ಪ್ರಚಂಡವಾಗಿ ಅವರನ್ನು ಗೆಲ್ಲಿಸಲಿದ್ದೇವೆ. ಅವರು ನಾಮಪತ್ರ ಸಲ್ಲಿಸಿದರೆ ಸಾಕು, ಚುನಾವಣೆ ನಾವು ಮಾಡುತ್ತೇವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹಕಾರದಿಂದ ಅತ್ಯಂತ ಬಹುಮತದಿಂದ ಗೆಲ್ಲಲಿದ್ದೇವೆ. ಕೋಲಾರ, ಮಂಡ್ಯ, ಹಾಸನ ಸೇರಿದಂತೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸಗಳನ್ನ ಬಗೆ ಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಮಾ.22ರಂದು ಬಿಜೆಪಿ ಹೈಕಮಾಂಡ್ ಜೆಡಿಎಸ್‌ಗೆ ಯಾವ ಕ್ಷೇತ್ರಗಳೆಂದು ತಿಳಿಸಲಿದೆ ಎಂದರು.
    ಕಾಂಗ್ರೆಸ್ ನಾಯಕರು ಪುಟ್ಟರಾಜುಗೆ ಗಾಳ ಹಾಕಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ದೇವೇಗೌಡರ ಮನೆ ಮಗನಾಗಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ದೇವೇಗೌಡರ ಮನೆ ಮಗನಾಗಿಯೇ ಇರುತ್ತೇನೆ. ಸಂಸದೆ ವಿಚಾರವಾಗಿ ಮಾತನಾಡುವುದಾದರೆ ಹಿಂದೆ ರಾಜಕೀಯವಾಗಿ ವ್ಯತ್ಯಾಸಗಳು ಆಗಿವೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರೂ ಅಲ್ಲ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ಎಚ್‌ಡಿಕೆ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಆಗಿದೆ. ಅಭಿಮಾನಿಗಳ ಪ್ರಾರ್ಥನೆ ಹಾಗೂ ದೇವೇಗೌಡ, ಚನ್ನಮ್ಮ ಅವರ ಆಶಿರ್ವಾದ ಕುಮಾರಣ್ಣ ಮೇಲಿದೆ. ಯಾವುದೇ ತೊಂದರೆ ಇಲ್ಲದಂತೆ ಗುಣಮುಖರಾಗಿದ್ದಾರೆ. ಇನ್ನ ಮೂರ್ನಾಲ್ಕು ದಿನಗಳಲ್ಲಿ ಎಚ್‌ಡಿಕೆ ವಾಪಸ್ ಆಗಲಿದ್ದಾರೆ. ನಮ್ಮ ಜಿಲ್ಲೆಯ ಎಲ್ಲ ನಾಯಕರು ಚಲುವನಾರಾಯಣಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ, ಕುಮಾರಣ್ಣ ಗುಣಮುಖರಾಗಲಿದ್ದಾರೆ ಎಂದರು.
    ಸ್ವಂತ ನಿರ್ಧಾರಗಳನ್ನ ಜೆಡಿಎಸ ಮಾಡಲು ಆಗುತ್ತಿಲ್ಲ ಎಂಬ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ನಮ್ಮ ಹೆಡ್‌ಮಾಸ್ಟರ್. ಚಲುವರಾಯಸ್ವಾಮಿ ಹೇಳಿದಾಗೆ ನಾವು ನಡೆದುಕೊಳ್ಳುತ್ತೇವೆ. ಅವರಿಲ್ಲದೆ ನಾವು ಈಗ ಕಂಗಾಲಾಗಿದ್ದೇವೆ ಎಂದು ವ್ಯಂಗ್ಯವಾಡಿದ ಸಿ.ಎಸ್.ಪುಟ್ಟರಾಜು, ಸ್ಟಾರ್ ಚಂದ್ರು ಸ್ಥಳಿಯ ಅಭ್ಯರ್ಥಿ ಎಂದು ಮತ ಕೇಳುತ್ತಿದ್ದಾರೆ. ಕುಮಾರಣ್ಣನ ತೋಟದ ಮನೆಗೆ 20 ನಿಮಿಷದ ಜರ್ನಿ ಅಷ್ಟೆ. ಅದೇ ಸ್ಟಾರ್ ಚಂದ್ರು ಮನೆ ಡಾಲರ್ಸ್ ಕಾಲನಿಯಲ್ಲಿ ಇದೆ. ಅವರ ಮನೆಗೆ ಹೋಗಲು ಒಂದೂವರೆ ಗಂಟೆ ಬೇಕು. ಯಾರು ದೂರದಲ್ಲಿದ್ದಾರೆಂದು ಮಂಡ್ಯ ಜನ ತೀರ್ಮಾನ ಮಾಡುತ್ತಾರೆ. ಜಿಲ್ಲೆಯ ಜನರು ಕುಮಾರಣ್ಣನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಸ್ಟಾರ್ ಚಂದ್ರು ಯಾವುದೋ ದುಡ್ಡು ತಂದು ತಾತ್ಕಾಲಿಕ ಮನೆ ಮಾಡಿಕೊಂಡರೆ ಮಂಡ್ಯ ಜನ ಮೆಚ್ಚಲ್ಲ ಎಂದು ಟೀಕಿಸಿದರು.

    Jds-Melukote-C.S.Puttaraju mandya

    ಇಂಡಿಯಾ ಒಕ್ಕೂಟಕ್ಕೆ ಕುಟುಕಿದ ಬಿಜೆಪಿ
    ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದಾಗಿ ಮೈತ್ರಿ ಪಕ್ಷವಾಗಿರುವ ಡಿ.ಎಂ.ಕೆ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
    ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್, ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿ ಮೇಕೆದಾಟು ಅಣೆಕಟ್ಟನ್ನು ಕಟ್ಟಿಯೇ ತೀರುತ್ತೇವೆ ಎಂದು ದೃಢ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ಣಯಕ್ಕೆ ಮನ್ನಣೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
    ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಸರ್ಕಾರ ಮೀಸಲಿಟ್ಟಿರುವ ಹಣವೆಷ್ಟು, ಸಕ್ಷಮ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆಯುವಲ್ಲಿ ಸರ್ಕಾರದ ಪ್ರಯತ್ನ ಏನೆಂದು ಪ್ರಶ್ನಿಸಿರುವ ಅವರು, ನ್ಯಾಯಾಲಯದ ಆದೇಶವಿದ್ದರೂ ತಮಿಳುನಾಡು ಕೇಳಿದ್ದಕ್ಕಿಂತಲೂ ಹೆಚ್ಚಿಗೆ ನೀರು ಬಿಟ್ಟಿದ್ದಾರೆ. ನಮ್ಮ ಸರ್ಕಾರ ರೈತರ ಹಿತ ಕಾಯಲು ಬದ್ಧ ಎಂದು ಉದ್ದುದ್ದ ಭಾಷಣ ಬಿಗಿದು ಅಧಿಕಾರಕ್ಕೇರಿದ ಕಾಂಗ್ರೆಸ್ ಅಧಿಕಾರ ಹಿಡಿದು ಎಂಟು ತಿಂಗಳಾದರೂ ಈವರೆವಿಗೂ ಅಣೆಕಟ್ಟೆ ಬಗ್ಗೆ ಮೌನ ವಹಿಸಿರುವುದಾದರೂ ಏಕೆ?. ಎರಡೂ ರಾಜ್ಯಗಳು ಕುಳಿತ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
    ತಮಿಳುನಾಡಿನಲ್ಲಿ ಅನಧಿಕೃತವಾಗಿ ವೈಗೈ ಗುಂಡಾಲ್ ನದಿ ಜೋಡಣೆ, ಹೊಸ ನಾಲೆಗಳ ಮೂಲಕ ನೀರಾವರಿ ಭೂಮಿ ಹೆಚ್ಚಿಸಿಕೊಳ್ಳುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವರು ಮೌನವಾಗಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಧಕ್ಕೆಯಾಗುವುದೆಂಬ ಕಾರಣಕ್ಕೆ ಡಿ.ಎಂ.ಕೆ ಸ್ಟಾಲಿನ್ ಅವರ ನಿರ್ಧಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಲು ರಾಜ್ಯ ಸರ್ಕಾರ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೇಕೆದಾಟು ಯೋಜನೆಗೆ ಅವಕಾಶ ಕೊಡಲ್ಲ: ಸ್ಟಾಲಿನ್ ನಡೆ ಕಾಂಗ್ರೆಸ್‌ಗೆ ಬಿಸಿತುಪ್ಪ, ಮೈತ್ರಿಗೆ ಪ್ರಬಲ ಅಸ್ತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts