More

    ಹಸಿರೆಲೆ ಗೊಬ್ಬರಕ್ಕೆ ಆದ್ಯತೆಗೆ ಮನವಿ: ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಹೇಳಿಕೆ

    ಮಂಡ್ಯ: ಈ ವರ್ಷ ಬಜೆಟ್‌ನಲ್ಲಿ ಹಸಿರೆಲೆ ಗೊಬ್ಬರದ ಉತ್ಪಾದನೆಗೆ ಅನುದಾನ ನೀಡುವಂತೆ ರಾಜ್ಯದ ಎಲ್ಲ ಕೃಷಿ ಅಧಿಕಾರಿಗಳಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಹೇಳಿದರು.
    ನಗರದ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ನಮ್ಮ ಮನವಿಗೆ ಫೆಬ್ರವರಿಯಲ್ಲಿ ನಡೆಯುವ ಆಯವ್ಯಯದಲ್ಲಿ ಆದ್ಯತೆ ನೀಡಬಹುದು. ಆ ನಂತರ ಮುಂದಿನ ವರ್ಷಕ್ಕೂ ಆಗುವಷ್ಟು ಹಸಿರೆಲೆ ಗೊಬ್ಬರವನ್ನು ದಾಸ್ತಾನು ಮಾಡಬಹುದು ಎಂದರು.
    ರೈತರಿಗೆ ನಿಜವಾದ ಹಸಿರೆಲೆ ಗೊಬ್ಬರವನ್ನು ಕೊಡುವುದರಿಂದ ಮಣ್ಣಿನಲ್ಲಿರುವ ಸಾರಜನಕ ಸತ್ವ ಹೆಚ್ಚಾಗಲಿದೆ. ಮಣ್ಣಿಗೆ ಜೀವ ಇದೆ. ಮಣ್ಣು ಸತ್ತರೆ ಪ್ರಪಂಚ ನಾಶವಾಗುತ್ತದೆ. ಹಾಗಾಗಿ ಮಣ್ಣನ್ನು ನಾವು ಹೆಚ್ಚು ಮಾಲಿನ್ಯ ಮಾಡದೆ ಸಂರಕ್ಷಿಸುವುದು ನಮ್ಮ ಕರ್ತವ್ಯ. ಜನರಿಗೆ ಸಕ್ಕರೆ ಬದಲು ಬೆಲ್ಲವನ್ನು ತಿನ್ನುವುದನ್ನು ಅಭ್ಯಾಸ ಮಾಡಿಸಬೇಕು. ಒಮ್ಮೆ ಅದು ಜನರಿಗೆ ಅಭ್ಯಾಸವಾದರೆ, ನಿಧಾನವಾಗಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಲಿದೆ. ಅದರಿಂದ ಮಂಡ್ಯದ ಕಬ್ಬು ಬೆಳೆಗಾರರಿಗೆ ಹಾಗೂ ಬೆಲ್ಲ ತಯಾರಕರಿಗೆ ಹೆಚ್ಚಿನ ಆದಾಯವಾಗಲಿದೆ ಎಂದು ಹೇಳಿದರು.
    ಕರೊನಾ ಸಮಯದಲ್ಲಿ ಎಲ್ಲರೂ ವಿಟಮಿನ್ ಸಿ, ಜಿಂಕ್, ಮೆಗ್ನೆಷಿಯಂ, ಕ್ಯಾಲ್ಸಿಯಂಗೆ ಎಂದು ಹಲವು ಬಗ್ಗೆಯ ಮಾತ್ರೆಗಳನ್ನು ಬಳಕೆ ಮಾಡಿದರು. ಆದರೆ ನಿಜವಾಗಿಯು ಬೆಲ್ಲದಲ್ಲಿಯೇ ಈ ಎಲ್ಲ ಔಷದಿಯ ಗುಣವಿದೆ. ವಿಟಮಿನ್ ಸಿ ಯನ್ನು ಸಹ ಸೇರಿಸಬಹುದು. ಈ ರೀತಿ ನಾವು ನಮ್ಮ ಉತ್ಪನ್ನಗಳನ್ನು ಬ್ರ್ಯಾಂಡ್ ಮಾಡಿ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಬುದು ಎಂದು ತಿಳಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು, ಉಪಾಧ್ಯಕ್ಷ ಸಿ.ರಮೇಶ್, ಕಾರ್ಯದರ್ಶಿ ಎನ್.ದ್ವಾರಕನಾಥನ್, ಸಹಕಾರ್ಯದರ್ಶಿ ಮಹೇಶ್ ಶೆಟ್ಟಿ, ಖಚಾಂಚಿ ಎನ್.ಎಸ್.ಸೋಮಶೇಖರ್, ನಿರ್ದೇಶಕರಾದ ಟಿ.ಕೆ. ಪ್ರಸಾದ್‌ಕುಮಾರ್, ಎಚ್.ವಿ.ನವೀನ್ ಕುಮಾರ್, ಎಸ್.ಎನ್.ಪುಟ್ಟಸ್ವಾಮಿ, ಎಂ.ಪಿ.ಪ್ರಕಾಶ್, ಎಂ.ವಿ.ಮಂಜುನಾಥ್, ಎನ್.ಆರ್.ಗೋಪಾಲಕೃಷ್ಣ, ವೆಂಕಟೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts