More

    ಹೂಜಿಹುಳು ನಿಯಂತ್ರಣಕ್ಕೆ ಮೋಹಕ ಬಲೆ ಸೂಕ್ತ

    ಚಿಕ್ಕಮಗಳೂರು: ಟೊಮ್ಯಾಟೋ ಫಸಲಿಗೆ ಔಷಧ ಸಿಂಪಡಿಸಿ ಮಾರುಕಟ್ಟೆಗೆ ನೀಡಿದರೆ ಸೇವಿಸಿದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ರೈತರು ಹೂಜಿ ಹುಳ ಹತೋಟಿಗೆ ಜೈವಿಕ ವಿಧಾನ ಮತ್ತು ಅಂತರ್ ಬೆಳೆ ಬೆಳೆಯಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ಸಸ್ಯ ಸಂರಕ್ಷಣಾ ವಿಭಾಗದ ಡಾ. ಗಿರೀಶ್ ಸಲಹೆ ನೀಡಿದರು.

    ಬೀಕನಹಳ್ಳಿ ಸಮುದಾಯ ಭವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ರೈತರಿಗೆ ಟೊಮ್ಯಾಟೋ ಇನ್ನಿತರ ಬೆಳೆಗಳ ರೋಗ ನಿಯಂತ್ರಣ ಮಾಹಿತಿ ನೀಡಿದರು.

    ಹೂಜಿ ಹುಳ ಒಮ್ಮೆಗೆ ಸುಮಾರು 400 ಮೊಟ್ಟೆ ಇಡುತ್ತದೆ. ಗಂಡು ಚಿಟ್ಟೆಯನ್ನು ಮೋಹಕ ಬಲೆಗೆ ಬೀಳಿಸಿದರೆ ಹುಳದ ಹಾವಳಿ ಕಡಿಮೆಯಾಗಿ ರೋಗ ನಿಯಂತ್ರಿಸಬಹುದು. ಹಳದಿ ಬಣ್ಣದ ಹೆಣ್ಣು ಚಿಟ್ಟೆ ರಾಸಾಯನಿಕದ ಮೂಲಕ ಸುವಾಸನೆ ಬೀರಿದರೆ ಗಂಡು ಚಿಟ್ಟೆ ಆಕರ್ಷಣೆಯಾಗುತ್ತದೆ. ಅದನ್ನರಿತು ಹೆಣ್ಣು ಚಿಟ್ಟೆ ಬಿಡುವ ಸುವಾಸನೆ ಸಾರವನ್ನು ಮೋಹಕಬಲೆಯಲ್ಲಿ ಹಾಕಲಾಗಿರುತ್ತದೆ. ಎರಡು ತಿಂಗಳು ಇದರ ಶಕ್ತಿ ಇರುತ್ತದೆ. ಈ ಮೂಲಕ ಗಂಡು ಚಿಟ್ಟೆ ಹತೋಟಿಗೆ ತರಲು ಸಹಕಾರಿಯಾಗುತ್ತದೆ ಎಂದರು.

    ಒಂದು ಬಲೆ ದರ 80 ರೂ. ಟೊಮ್ಯಾಟೊ ಸಸಿ ನಾಟಿ ಮಾಡುವ ಹಂತದಲ್ಲಿ ಒಂದು ಎಕರೆಗೆ 8 ಮೋಹಕಬಲೆ ಅಳವಡಿಸಿದರೆ ಯಾವುದೆ ರಾಸಾಯನಿಕ ಸಿಂಪಡಣೆ ಅವಶ್ಯಕತೆ ಇಲ್ಲದಂತೆ ಹುಳ ಹತೋಟಿಗೆ ತರಬಹುದು. ಓರ್ವ ರೈತ ಹೊಲಕ್ಕೆ ಬಲೆ ಹಾಕಿದರೆ 3 ಕಿಮೀ ಸುತ್ತಲ ಪ್ರದೇಶ ಹುಳ ಹತೋಟಿಗೆ ತರಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts